Advertisement

ಕರಿಯರ್‌ ಕಾರಿಡಾರ್‌ನಲ್ಲಿ ಸೈಟ್‌ಗಳಿಗೆ ಕೋಟಿ ಬೆಲೆ

02:12 PM Jun 29, 2022 | Team Udayavani |

ಧಾರವಾಡ: ಕಣ್ಣು ಹಾಯಿಸಿದಷ್ಟು ದೂರ ತಲೆ ಎತ್ತುತ್ತಿರುವ ಹೊಸ ಕಟ್ಟಡಗಳು, ಪ್ರತಿಯೊಂದು ಕಟ್ಟಡಗಳೂ ಪಿ.ಜಿ.(ಪೇಯಿಂಗ್‌ ಗೆಸ್ಟ್‌)ಗೆ ಮೀಸಲು, ಏರುತ್ತಿರುವ ಬಾಡಿಗೆ, ಗಗನಕ್ಕೇರಿದ ರಿಯಲ್‌ ಎಸ್ಟೇಟ್‌, ಕೋಟಿ ರೂ.ಗೆ ತಲುಪಿತು ನಿವೇಶನ ಬೆಲೆ.

Advertisement

ಹೌದು. ವಿದ್ಯಾಕಾಶಿ ಧಾರವಾಡದಲ್ಲಿ ಇದೀಗ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳು ಮಾಡುತ್ತಿರುವ ಸದ್ದಿಗೆ ಅಕ್ಷರಶಃ ಇಲ್ಲಿನ ರಿಯಲ್‌ ಎಸ್ಟೇಟ್‌ನಲ್ಲಿ ಭಾರೀ ಚೇತರಿಕೆ ಉಂಟಾಗಿದ್ದು, ಮೊಟ್ಟ ಮೊದಲ ಬಾರಿಗೆ ಧಾರವಾಡದ ಕರಿಯರ್‌ ಕಾರಿಡಾರ್‌ನಲ್ಲಿನ ಒಂದು ಗುಂಟೆ ನಿವೇಶನವೊಂದು ಕೋಟಿ ರೂ.ಗೆ ಮಾರಾಟವಾಗಿದೆ.

ಅವಳಿ ನಗರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಆರ್ಥಿಕ ಹಿಂಜರಿತ ಮತ್ತು ಕೊರೊನಾ ಸೇರಿ ಇನ್ನಿತರೆ ಕಾರಣಗಳಿಂದ ಮಕಾಡೆ ಮಲಗಿದ್ದ ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಮತ್ತೆ ಚೇತರಿಕೆ ಕಾಣಿಸಿಕೊಂಡಿದ್ದು, ಹೊಸ ಬಡಾವಣೆಗಳು ಅಲ್ಲಲ್ಲಿ ತಲೆ ಎತ್ತುತ್ತಿವೆ. ಹುಬ್ಬಳ್ಳಿ ನಗರದಲ್ಲಿ ಅಪಾರ್ಟ್‌ಮೆಂಟ್‌ಗಳು ತಲೆ ಎತ್ತುತ್ತಿದ್ದರೆ, ಧಾರವಾಡದಲ್ಲಿ ಪ್ರತ್ಯೇಕ ನಿವೇಶನ ಮಾರಾಟ ಮತ್ತು ಮನೆಗಳ ನಿರ್ಮಾಣ ಚುರುಕು ಪಡೆದಿದೆ.

ಕಾರಿಡಾರ್‌ನಲ್ಲಿ ಎನ್‌ಆರ್‌ಐಗಳ ಹಣ: ಇಷ್ಟಕ್ಕೂ ಧಾರವಾಡದಲ್ಲಿನ ಕರಿಯರ್‌ ಕಾರಿಡಾರ್‌ ರಸ್ತೆ ಕಳೆದ ಎರಡು ವರ್ಷಗಳಲ್ಲಿ ಭರಪೂರ ಬೃಹತ್‌ ನಗರಗಳ ಮಾದರಿಯಂತೆ ಜನಸಂದಣಿ ಮತ್ತು ಜನಾಕರ್ಷಣೆ ತಾಣದಂತೆ ಬದಲಾಗುತ್ತಿದ್ದು, ಹೈಟೆಕ್‌ ಹೊಟೇಲ್‌ಗ‌ಳು, ತಿಂಡಿ, ತಿನಿಸಿನ ಅಂಗಡಿ, ಫ್ಯಾಶನ್‌ ಬಟ್ಟೆಗಳ ಮಹಲ್‌ಗ‌ಳು, ಬೀದಿ ಬದಿ ವ್ಯಾಪಾರವೂ ಚುರುಕು ಪಡೆದಿದೆ.

ಇಲ್ಲಿನ ಕರ್ನಾಟಕ ಕಲಾ ಮಹಾವಿದ್ಯಾಲಯದಿಂದ ಹಿಡಿದು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಹೊಂದಿಕೊಂಡಿರುವ ಶ್ರೀನಗರ (ಬಸವೇಶ್ವರ ಕ್ರಾಸ್‌)ದವರೆಗೂ ಮಾತ್ರ ಸೀಮಿತವಾಗಿದ್ದ ಕರಿಯರ್‌ ಅಕಾಡೆಮಿಗಳು ಗಣೇಶ ನಗರದ ಅಕ್ಕಮಹಾದೇವಿ ಆಶ್ರಮದವರೆಗೂ ವಿಸ್ತರಣೆಗೊಂಡಿವೆ. ಅಷ್ಟೇಯಲ್ಲ ಇದೀಗ ಹೊಯ್ಸಳ ನಗರದವರೆಗೂ ಎಲ್ಲಿ ನೋಡಿದರೂ ಅಲ್ಲಿ ಪಿ.ಜಿ.ಗಳು ತಲೆ ಎತ್ತುತ್ತಿದ್ದು, ದೊಡ್ಡ ಪ್ರಮಾಣದ ಲಾಭ ಗಳಿಕೆ ಆರಂಭವಾಗಿದೆ. ಇದು ವಿದೇಶಗಳಲ್ಲಿ ಕೆಲಸದಲ್ಲಿರುವ ಎನ್‌ಆರ್‌ಐಗಳು ತಮ್ಮ ಹಣ ಹೂಡಿಕೆಗೆ ಪ್ರಶಸ್ತಿ ಸಮಯ ಮತ್ತು ಜಾಗ ಎಂದೇ ಬಿಂಬಿತವಾಗಿದ್ದು, ಎನ್‌ಆರ್‌ಐಗಳು ಅತ್ಯಧಿಕ ಮೊತ್ತದ ಹಣ ನೀಡಿ ನಿವೇಶನ, ಹಳೆಯ ಮನೆಗಳು ಮತ್ತು ಸಿದ್ಧಗೊಂಡಿರುವ ಕಾಂಪ್ಲೆಕ್ಸ್‌ಗಳನ್ನೇ ಕೊಂಡುಕೊಳ್ಳುತ್ತಿದ್ದಾರೆ.

Advertisement

ನಿಧಾನಕ್ಕೆ ಹೆಡೆ ಎತ್ತಿರುವ ರೌಡಿಸಂ

ಇನ್ನು ಹಣದ ಹಿಂದೆ ಅಪರಾಧ ಜಗತ್ತಿನ ಚಟುವಟಿಕೆಗಳು ನಿಧಾನಕ್ಕೆ ಗೋಚರವಾಗುತ್ತಿದ್ದು, ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಮತ್ತು ಪುಡಿ ರೌಡಿಗಳ ಕೃತ್ಯಗಳು ಅಲ್ಲಲ್ಲಿ ನಡೆಯುತ್ತಿವೆ. ಅಷ್ಟೇಯಲ್ಲ, ಎನ್‌ಆರ್‌ಐಗಳು ಮತ್ತು ಸ್ಥಳೀಯ ಭೂ ಮಾಲೀಕರ ಮಧ್ಯದ ಮೇಟಿಯಾಗಿ ಕೆಲಸ ಮಾಡುತ್ತಿರುವ ರಿಯಲ್‌ ಎಸ್ಟೇಟ್‌ ಕುಳಗಳು ಭಾರಿ ಹಣ ಸಂಪಾದನೆಯಲ್ಲೂ ತೊಡಗಿದ್ದಾರೆ. ಕೆಲವು ವಾಜ್ಯದ ಜಮೀನುಗಳಿಗೂ ರೌಡಿಗಳು ಕೈ ಹಾಕಿದ್ದು, ವ್ಯಾಜ್ಯ ಕೋರ್ಟ್‌ಗಳಲ್ಲಿದ್ದರೂ ಹಣ ನೀಡಿ ಹೊಂದಾಣಿಕೆ ಮತ್ತು ರಾಜೀ ಮಾಡಿಸಿ ಲಾಭ ಪಡೆಯುತ್ತಿದ್ದಾರೆ.

ಜೋರಾದ ವ್ಯಾಪಾರ

ಸಪ್ತಾಪೂರ, ಚೆನ್ನಬಸವೇಶ್ವರ ನಗರ, ಶ್ರೀನಗರ, ಬಸವ ನಗರ ಭಾಗ-1 ಮತ್ತು 2, ಜಲದರ್ಶಿನಿ ಬಡಾವಣೆ, ರಾಧಾಕೃಷ್ಣ ನಗರದಲ್ಲಂತೂ ಇದೀಗ ಪ್ರತಿ ನಿವೇಶನಗಳ ಬೆಲೆ ಕೋಟಿ ಸಮೀಪ ಬಂದಾಗಿದೆ. ಅದರಲ್ಲೂ ಕರಿಯರ್‌ ಅಕಾಡೆಮಿಗಳ ಕಾರಿಡಾರ್‌ ಎಂದೇ ಬಿಂಬಿತವಾಗಿರುವ ಅರಟಾಳು ರುದ್ರಗೌಡ ರಸ್ತೆ ಇದೀಗ ಬೆಂಗಳೂರಿನ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆಯ ಸ್ವರೂಪ ಪಡೆದಿದ್ದು ಇಲ್ಲಿ ಭರ್ಜರಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಹೀಗಾಗಿ ಹೊಟೇಲ್‌,ತಿಂಡಿ ಅಂಗಡಿ, ಖಾಸಗಿ ಗ್ರಂಥಾಲಯ,ದಿನಸಿ ಅಂಗಡಿ, ಹೊರ ರಾಜ್ಯಗಳ ತಿಂಡಿ ಅಂಗಡಿಗಳು ವಿಪರೀತ ಪ್ರಮಾಣದಲ್ಲಿ ತಲೆ ಎತ್ತುತ್ತಿವೆ. ಅಷ್ಟೇಯಲ್ಲ ಇದೀಗ ಹೊಟೇಲ್‌ ಗುಚ್ಚಗಳೇ ಎಲೆ ಎತ್ತಿದ್ದು, ಒಂದೇ ಸೂರಿನಡಿ ವಿವಿಧ ಜಿಲ್ಲಾವಾರು, ರಾಜ್ಯವಾರು ತಿಂಡಿ ತಿನಿಸು ಲಭ್ಯವಾಗುವಂತಾಗಿದೆ.

ಮೂಲಸೌಕರ್ಯ ಅಷ್ಟಕ್ಕಷ್ಟೇ

ಕೆ.ಸಿ.ಡಿ.ವೃತ್ತ ಮತ್ತು ಸಪ್ತಾಪೂರದಿಂದ ಹಿಡಿದು ಭಾರತಿನಗರ, ರಾಣಿ ಚೆನ್ನಮ್ಮ ನಗರ, ಮಿಚಿಗನ್‌ ಕಾಂಪೌಂಡ್‌, ಶಿವಗಿರಿ, ಚೆನ್ನಬಸವೇಶ್ವರ ನಗರ ಸೇರಿ ಕರ್ನಾಟಕ ವಿಶ್ವವಿದ್ಯಾಲಯ ಸೇರಿಕೊಂಡು ಧಾರವಾಡದ ಪಶ್ಚಿಮ ಭಾಗವೆಲ್ಲವೂ ಇದೀಗ ಕರಿಯರ್‌ ಕಾರಿಡಾರ್‌ ಆಗಿ ರೂಪುಗೊಳ್ಳುತ್ತಿದೆ. ಇಲ್ಲಿನ ಪ್ರತಿಯೊಂದು ಮನೆಯೂ ಪಿಜಿಯಾಗಿ ಪರಿವರ್ತಿತವಾಗುತ್ತಿವೆ. ಒಂದೊಂದು ಮನೆಯಲ್ಲಿ 20-30 ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಯರು ವಾಸವಾಗಿದ್ದಾರೆ. ಆದರೆ ಅವರಿಗೆ ಅಗತ್ಯ ಮೂಲ ಸೌಕರ್ಯಗಳು ಸೇರಿದಂತೆ ಸೂಕ್ತ ರಕ್ಷಣೆ ಲಭಿಸುತ್ತಿಲ್ಲ.

ಧಾರವಾಡದಲ್ಲಿ 2300ಕ್ಕೂ ಅಧಿಕ ಪಿ.ಜಿ.ಗಳಿದ್ದು, ಇವುಗಳು ಮೂಲಸೌಕರ್ಯದ ವಿಚಾರದಲ್ಲಿ ಕಾನೂನು ಅನ್ವಯ ಕಾರ್ಯಪಾಲನೆ ಮಾಡಬೇಕಾಗುತ್ತದೆ. ತೆರಿಗೆಯನ್ನು ಸರಿಯಾಗಿ ತುಂಬದೇ ಇರುವ ಎರಡು ಸಾವಿರಕ್ಕೂ ಅಧಿಕ ಪಿ.ಜಿ.ಗಳಿಗೆ ನೋಟಿಸ್‌ ನೀಡಲಾಗಿದೆ. –ಈರೇಶ ಅಂಚಟಗೇರಿ, ಮಹಾಪೌರರು,ಹು-ಧಾ. ಮಹಾನಗರ ಪಾಲಿಕೆ

ಮೂರು ಕೋಟಿ ರೂ. ಕೊಟ್ಟು ಬಸವ ನಗರದಲ್ಲಿ ಹಳಿಯಾಳ ರಸ್ತೆಗೆ ಹೊಂದಿಕೊಂಡ ನಿವೇಶನ ಮತ್ತು ಹಳೆಯ ಕಟ್ಟಡದ ಜಾಗ ಕೊಂಡುಕೊಂಡಿದ್ದೇನೆ. ಇಲ್ಲಿ ಭವ್ಯವಾದ ಪಿ.ಜಿ.ನಿರ್ಮಿಸುವ ಕನಸಿದೆ. ಕೆಳಮಹಡಿಯಲ್ಲಿ ಅಂಗಡಿ ಸಾಲುಗಳನ್ನು ನಿರ್ಮಿಸುತ್ತಿದ್ದೇನೆ.  –ಲಿಂಗರಾಜ್‌ ಪಾಟೀಲ, ಎನ್‌ಆರ್‌ಐ (ದುಬೈ ನಿವಾಸಿ)

„ಬಸವರಾಜ ಹೊಂಗಲ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next