Advertisement
ಹೌದು. ವಿದ್ಯಾಕಾಶಿ ಎಂದೇ ಹೆಸರು ಪಡೆದಿದ್ದ ಧಾರವಾಡ ನಗರಕ್ಕೆ ತಮ್ಮ ಹೆಣ್ಣು ಮಕ್ಕಳನ್ನು ಓದಲು ಕಳುಹಿಸುವ ಉತ್ತರ ಕರ್ನಾಟಕ ಭಾಗದ ತಂದೆ-ತಾಯಿಗಳೇ ಇನ್ಮುಂದೆ ಕೊಂಚ ಎಚ್ಚರಿಕೆ ವಹಿಸಿ. ನಿಮ್ಮ ಮಗಳು ಕಲಿಯುವ ಶಿಕ್ಷಣ ಸಂಸ್ಥೆಗಳಲ್ಲಿನ ವ್ಯವಸ್ಥೆ ಬಗ್ಗೆ ಹದ್ದಿನ ಕಣ್ಣಿಡುವ ಕಾಲ ಬಂದಿದೆ.
Related Articles
Advertisement
ಹೈಟೆಕ್ ವೇಶ್ಯಾವಾಟಿಕೆ: ಇನ್ನು ಕಳೆದ ವರ್ಷ ಸಪ್ತಾಪೂರದ ಪಿ.ಜಿ.ಪಕ್ಕದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆದ ಗುಮಾನಿ ಬೆನ್ನಟ್ಟಿದ್ದ ಪೊಲೀಸರಿಗೆ ಸಾಕ್ಷಿ ಸಮೇತ ಮೂವರು ಸಿಕ್ಕಿ ಬಿದ್ದಿದ್ದರು. ನೇಪಾಳ ಮೂಲದ ಯುವತಿಯರನ್ನು ಬಳಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲ ಈಗಲೂ ಇಲ್ಲಿ ಸಕ್ರಿಯವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಪೊಲೀಸರಿಗೆ ಅನುಮಾನ ಬರದಂತೆ ಮಾಡಲು ಪಿ.ಜಿ.ಗಳೇ ಹೆಚ್ಚಿರುವ ಪ್ರದೇಶದ ಅಜ್ಞಾತ ಮನೆಯೊಂದನ್ನು ಬಾಡಿಗೆಗೆ ಪಡೆದು ಅಲ್ಲಿ ನೇಪಾಳಿ ವಿದ್ಯಾರ್ಥಿನಿಯರು ಓದಲು ಬಂದಿದ್ದಾರೆಂದು ನಟಿಸುವಂತೆ ಮಾಡಿ, ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲ ಪತ್ತೆಯಾಗಿತ್ತು. ಪ್ರತಿಷ್ಠಿತ ಕರಿಯರ್ ಅಕಾಡೆಮಿಯಲ್ಲಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದ ಪೂರ್ಣ ಸತ್ಯ ಇನ್ನು ಹೊರಗೆ ಬಂದಿಲ.
ಮಾದಕ ವಸ್ತುಗಳ ಜಾಲ
ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ ಫುಡ್ ಕೋರ್ಟ್‌ಗಳು, ಅಗತ್ಯ ವಸ್ತುಗಳ ಅಂಗಡಿ ಮುಂಗಟ್ಟುಗಳು ಎಲ್ಲೆಂದರಲ್ಲಿ ತಲೆ ಎತ್ತುತ್ತಿವೆ. ಅದರ ಜತೆಗೆ ವಿದ್ಯಾರ್ಥಿಗಳು ಮಾದಕ ವಸ್ತುಗಳಾದ ಗಾಂಜಾ, ಅಫೀಮು, ಸಾರಾಯಿ ದಾಸರಾಗುತ್ತಿದ್ದಾರೆ. ಇದನ್ನು ಪೂರೈಸುವ ಧನದಾಹಿ ಜಾಲವೂ ಇಲ್ಲಿ ಕೆಲಸ ಮಾಡುತ್ತಿದೆ. ಹೀಗಾಗಿ ಓದಿ ಭವಿಷ್ಯ ರೂಪಿಸಿಕೊಳ್ಳಬೇಕಾದ ವಿದ್ಯಾರ್ಥಿ ಸಮೂಹ ಕೊಂಚ ಮೋಜು ಮಸ್ತಿಗೆ ಇಳಿದಿದ್ದು, ನಿಧಾನಕ್ಕೆ ಅಲ್ಲಲ್ಲಿ ಅಪರಾಧ ಕೃತ್ಯಗಳು ನಡೆಯುತ್ತಿವೆ. ಜತೆಗೆ ವಿದ್ಯಾರ್ಥಿನಿಯರನ್ನೂ ಬೇರೆ ಆಮಿಷಗಳನ್ನೊಡ್ಡಿ ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಳ್ಳುವ ಅನೇಕ ಪ್ರಕರಣಗಳು ನಡೆದಿದ್ದು, ಅವುಗಳನ್ನು ಆಡಳಿತ ಮಂಡಳಿಗಳು ಅಲ್ಲಲ್ಲೇ ಹೊಸಕಿ ಹಾಕುತ್ತಿವೆ. ಈ ಬಗ್ಗೆ ಪೊಲೀಸ್ ಇಲಾಖೆ ಕಠಿಣ ಕ್ರಮ ವಹಿಸುವ ಅಗತ್ಯವಿದೆ ಎನ್ನುತ್ತಿದ್ದಾರೆ ಪೋಷಕರು.
ಐಟಿ-ಬಿಟಿಗೆ ಬೆಂಗಳೂರಿನಲ್ಲಿ ಸುಸಜ್ಜಿತ ನಗರವೊಂದನ್ನು ನಿರ್ಮಿಸಿದಂತೆ ಧಾರವಾಡದಲ್ಲಿ ಶಿಕ್ಷಣ ನಗರ ನಿರ್ಮಾಣದ ಅಗತ್ಯವಿದೆ. ಇದನ್ನು ಮುಂಬರುವ ದಿನಗಳಲ್ಲಿ ತಜ್ಞರೊಂದಿಗೆ ಚರ್ಚಿಸಿ ಸರ್ಕಾರದ ಗಮನಕ್ಕೆ ತರುತ್ತೇನೆ. ಇನ್ನು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳನ್ನು ವಿಕೇಂದ್ರಿಕರಣ ಮಾಡಿ, ವ್ಯವಸ್ಥಿತ ಜಾಗದಲ್ಲಿ ಬೆಳೆಸುವ ನೀಲನಕ್ಷೆ ಸಿದ್ಧಪಡಿಸುತ್ತೇವೆ. -ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ
ವಾಸದ ಮನೆಗಳನ್ನು ರಾತ್ರೋರಾತ್ರಿ ಪಿ.ಜಿ.ಗಳನ್ನಾಗಿ ಮಾಡಿ ಪಾಲಿಕೆಗೆ ಶುಲ್ಕ ಕಟ್ಟದೇ ನೂರಾರು ಪಿ.ಜಿ. ಮಾಲೀಕರು ಮೋಸ ಮಾಡಿದ್ದಾರೆ. ಅವರಿಗೆ ನೋಟಿಸ್ ಕೊಟ್ಟಿದ್ದು, ಪರಿಶೀಲಿಸಲು ಹೇಳಿದ್ದೇನೆ. ವಿದ್ಯಾರ್ಥಿನಿಯರ ಸುರಕ್ಷತೆ ದೃಷ್ಟಿಯಿಂದ ಇನ್ನಷ್ಟು ಕಠಿಣ ಕ್ರಮ ವಹಿಸುತ್ತೇವೆ. –ಈರೇಶ ಅಂಚಟಗೇರಿ, ಮೇಯರ್ ಹು-ಧಾ ಮಹಾನಗರ ಪಾಲಿಕೆ
ಕರಿಯರ್ ಕಾರಿಡಾರ್ ರಸ್ತೆ ಮತ್ತು ಸುತ್ತಲಿನ ನಗರಗಳಲ್ಲಿನ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳು ಮತ್ತು ಪಿ.ಜಿ.ಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದೇವೆ. ವಿದ್ಯಾರ್ಥಿನಿಯರಿಗೆ ಸೂಕ್ತ ಭದ್ರತೆ ಕೊಡುತ್ತೇವೆ. ಪೋಷಕರು ಆತಂಕಗೊಳ್ಳುವ ಅಗತ್ಯವಿಲ್ಲ. –ಲಾಬೂರಾಮ್, ಪೊಲೀಸ್ ಆಯುಕ್ತ,
-ಬಸವರಾಜ ಹೊಂಗಲ್