Advertisement

ದೌರ್ಜನ್ಯ ತಡೆಗೆ ಜಾಗೃತಿಯೇ ಮದ್ದು 

05:27 PM Sep 23, 2018 | |

ಧಾರವಾಡ: ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಗಳ ಬಗ್ಗೆ ತಳ ಹಂತದಲ್ಲಿಯ ಜನರಲ್ಲಿ ಅರಿವು ಮೂಡಿದರೆ ದೌರ್ಜನ್ಯ ತಡೆಯಲು ಸಹಕಾರಿಯಾಗುತ್ತದೆ ಎಂದು ಕರ್ನಾಟಕ ರಾಜ್ಯದ ಮಾನವ ಹಕ್ಕುಗಳ ಆಯೋಗದ ಸದಸ್ಯ ರೂಪಕ ಕುಮಾರ್‌ ಹೇಳಿದರು. ನಗರದ ಜಿಪಂ ಸಭಾಂಗಣದಲ್ಲಿ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಕಾನೂನು ಅನುಷ್ಠಾನ ಕುರಿತ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

Advertisement

2011ರ ನ್ಯಾಷನಲ್‌ ಕ್ರೈಂ ಬ್ಯೂರೋ ಎನ್‌ಸಿಬಿ ವರದಿ ಪ್ರಕಾರ ಕರ್ನಾಟಕದಲ್ಲಿ 697 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು. ಆ ಪೈಕಿ ಕಾನೂನು ಹೋರಾಟದಲ್ಲಿ ಕೇವಲ 52 ಅಪರಾಧಿ ಗಳಿಗೆ ಮಾತ್ರ ಶಿಕ್ಷೆಯಾಗಿದೆ. ಇನ್ನುಳಿದವರು ಕಾನೂನಿನಿಂದ ನುಣುಚಿಕೊಂಡಿದ್ದಾರೆ. ಹೀಗಾಗಿ ದಿನೇ ದಿನೇ ಅಪರಾಧಗಳು ಹೆಚ್ಚಾಗುವಂತಾಗಿದೆ ಎಂದರು.

ಇಂದು ದೌರ್ಜನ್ಯ ಎಸಗಿದ ವ್ಯಕ್ತಿ ಮೇಲೆ ಪ್ರಕರಣ ದಾಖಲಿಸಿದರೂ ಸಹಿತ ಅಪರಾ ಧಿಗಳಿಗೆ ಶಿಕ್ಷೆ ಆಗುವುದು ಅತ್ಯಲ್ಪ ಜನರಿಗೆ ಮಾತ್ರ. ರಾಷ್ಟ್ರದಲ್ಲಿ 2016ರ ಎನ್‌ಸಿಆರ್‌ ಪ್ರಕಟಣೆ ಪ್ರಕಾರ 1,20,088 ಅಪರಾಧಿಗಳಲ್ಲಿ 23,094 ಜನರಿಗೆ ಮಾತ್ರ ಶಿಕ್ಷೆ ಆಗಿದೆ. ಶೇ. 18.9ರಷ್ಟು ಶಿಕ್ಷೆ ಆಗಿದ್ದು, ಇನ್ನೂ ಶೇ. 80ರಷ್ಟು ಜನರು ಅಪರಾಧದಿಂದ ತಪ್ಪಿಸಿಕೊಂಡಿದ್ದಾರೆ. ಆದ್ದರಿಂದ ಗಟ್ಟಿಯಾಗಿರುವ ಕಾನೂನು ನಿಯಮಗಳನ್ನು ದಾಖಲಿಸಿ ಎಫ್‌ಐಆರ್‌ ಹಾಕಬೇಕು ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚನ್ನಣ್ಣವರ ಮಾತನಾಡಿ, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಎಲ್ಲ ಕಾನೂನಾತ್ಮಕ ಸಲಹೆ-ಸೂಚನೆ ಹಾಗೂ ಸಹಕಾರ ನೀಡಲಾಗುವುದು. ಆ ನಿಟ್ಟಿನಲ್ಲಿ ಸರ್ಕಾರಿ ಅಭಿಯೋಜಕರು ಸನ್ನದ್ಧರಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ಗ್ಲೋಬಲ್‌ ಇಂಡಿಯಾದ ಸಂಚಾಲಕ ಬೃಂದಾ ಅಡಿಗ ಪ್ರಾಸ್ತಾವಿಕ ಮಾತನಾಡಿದರು. ಮಾನವ ಹಕ್ಕುಗಳ ಸಾಧನಾ ಕೇಂದ್ರದ ಇಸಬೆಲ್ಲಾ ಜುಬೇರಾ ನಿರೂಪಿಸಿದರು. ಕಾರ್ಯಾಗಾರದಲ್ಲಿ ಬೆಳಗಾವಿ ಮತ್ತು ಧಾರವಾಡ ಸರ್ಕಾರಿ ಅಭಿಯೋಜಕರು, ನಿಯೋಜಿತ ನ್ಯಾಯವಾದಿಗಳು, ಸಿಡಿಪಿಒಗಳು ಮತ್ತು ಬೆಳಗಾವಿ ವಿಭಾಗದ ಸರ್ಕಾರಿ ಅಭಿಯೋಜಕರ ಕಚೇರಿ ಉಪನಿರ್ದೇಶಕಿ ಶೈಲಜಾ ಎಂ. ಪಾಟೀಲ, ಸಾಂತ್ವನ ಕೇಂದ್ರದ ಸದಸ್ಯರು, ಪದಾಧಿಕಾರಿಗಳು ಪಾಲ್ಗೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next