ಧಾರವಾಡ: ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಮಾಜಿ ಸಚಿವ ವಿನಯ್ ಕುಲಕರ್ಣಿ ಮತ್ತು ಹಾಲಿ ಶಾಸಕ ಅಮೃತ ದೇಸಾಯಿ ಮಧ್ಯೆ ಸ್ಪರ್ಧೆ ನಡೆಯುವುದೋ ಇಲ್ಲವೋ ಎಂಬುದು ಕುತೂಹಲ ಮೂಡಿಸಿದೆ.
ಬಿಜೆಪಿ ಭದ್ರಕೋಟೆಯಾಗಿರುವ ಧಾರವಾಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಅತೀ ಹೆಚ್ಚು ಜಿದ್ದಾಜಿದ್ದಿನ ಕಣ ಈ ಕ್ಷೇತ್ರ. ಇದಕ್ಕೆ ಕಾರಣ ಕಾಂಗ್ರೆಸ್ನ ಹುರಿಯಾಳು ವಿನಯ್ ಕುಲಕರ್ಣಿ. ಕೈ ಪಕ್ಷವನ್ನು ಗಟ್ಟಿಯಾಗಿಸಿದ್ದು ವಿನಯ್. ಸ್ವಸ್ಥಾನ ಎನಿಸಿರುವ ಈ ಕ್ಷೇತ್ರದಲ್ಲೇ ಅವರು ಈ ಬಾರಿ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎಂಬುದನ್ನು ಪತ್ನಿ ಶಿವಲೀಲಾ ಕುಲಕರ್ಣಿ ಹಾಗೂ ಪಕ್ಷದ ಮುಖಂಡರು ಅನೇಕ ಬಾರಿ ಸ್ಪಷ್ಟಪಡಿಸಿದ್ದಾರೆ.
ಆದರೆ ಬಿಜೆಪಿಯಿಂದ ಹಾಲಿ ಶಾಸಕ ಅಮೃತ ದೇಸಾಯಿ ಮತ್ತೆ ಕಣಕ್ಕಿಳಿಯುವುದನ್ನು ಅವರ ಬೆಂಬಲಿಗರೇ ಸ್ಪಷ್ಟವಾಗಿ ಹೇಳುತ್ತಿಲ್ಲ. ಬಿಜೆಪಿ ನಡೆಸಿದ ಆಂತರಿಕ ಸಮೀಕ್ಷೆಗಳಲ್ಲಿ ಸದ್ಯಕ್ಕೆ ದೇಸಾಯಿ ಅವರ ಗೆಲುವು ಕಠಿನ ಎನ್ನುವ ಅಂಶ ಗೊತ್ತಾಗುತ್ತಿದ್ದಂತೆಯೇ ಬಿ.ಎಸ್. ಯಡಿ ಯೂರಪ್ಪ ಅವರ ಕಟ್ಟಾ ಬೆಂಬಲಿಗ, ಜೈನ ಸಮುದಾಯದ ತವನಪ್ಪ ಅಷ್ಟಗಿ ಅವರ ಹೆಸರು ಮುಂಚೂಣಿಗೆ ಬಂದು ನಿಂತಿದೆ. ಒಂದು ವೇಳೆ ಬಿಜೆಪಿ ಹೈಕಮಾಂಡ್ ಕರ್ನಾ ಟಕದಲ್ಲೂ ಗುಜರಾತ್ ಮಾದರಿ ಟಿಕೆಟ್ ಹಂಚಿಕೆ ಮಾಡಿದರೆ ಹುಬ್ಬಳ್ಳಿ ತಾಲೂಕು ಮೂಲದ ಬೆಂಗಳೂರಿನ ಖಾಸಗಿ ವಾಹಿನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಯುವ ಪತ್ರಕರ್ತನ ಹೆಸರು ಕೂಡ ಕೇಳಿಬರುತ್ತಿದೆ. ಒಂದೊಮ್ಮೆ ವಿನಯ್ ಕುಲಕರ್ಣಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಶಿಗ್ಗಾವಿಯ ಕಾಂಗ್ರೆಸ್ ಅಭ್ಯರ್ಥಿಯಾದರೆ ದೇಸಾಯಿಗೇ ಟಿಕೆಟ್ ಪಕ್ಕಾ ಎನ್ನಲಾಗಿದೆ.
ಸಚಿವ ಜೋಶಿ ತಂತ್ರಗಾರಿಕೆ: ಇನ್ನು ಧಾರವಾಡ ಗ್ರಾಮೀಣ ಕ್ಷೇತ್ರವಷ್ಟೇ ಅಲ್ಲ ತಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಮೇಲೂ ಹಿಡಿತ ಸಾಧಿಸಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ಧಾರವಾಡ ಗ್ರಾಮೀಣ ಕ್ಷೇತ್ರದಲ್ಲೂ ಪರೋಕ್ಷವಾಗಿ ತಮ್ಮ ರಾಜಕೀಯ ಪ್ರಭಾವ ಇಟ್ಟುಕೊಂಡೇ ಬಂದಿದ್ದಾರೆ.
Related Articles
ಅದರಲ್ಲೂ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಸೋಲಿಸಲು ಜೋಶಿ ಅವರು ಹೆಣೆದ ರಾಜಕೀಯ ತಂತ್ರಗಾರಿಕೆ 2018ರ ಚುನಾವಣೆಯಲ್ಲಿ ಯಶಸ್ವಿಯಾಗಿ, ಅಮೃತ ದೇಸಾಯಿ ಜಯಗಳಿಸಿದ್ದರು ಎಂಬ ಮಾತು ಈಗಲೂ ರಾಜಕೀಯ ವೇದಿಕೆಗಳಲ್ಲಿ ಕೇಳಿಬರುತ್ತಿದೆ. ಆದರೆ ಈ ಬಾರಿ ಪಾಳೆಗಾರರಾದ ಅಮೃತ ದೇಸಾಯಿ ಮತ್ತು ವಿನಯ್ ಕುಲಕರ್ಣಿ ಮಧ್ಯೆ ಫೈಟ್ ನಡೆಯುತ್ತದೆಯೇ? ಎಂಬುದು ಮಾತ್ರ ಯಕ್ಷ ಪ್ರಶ್ನೆಯಾಗಿದೆ. ಕಾರಣ ಈ ಇಬ್ಬರ ಮಧ್ಯೆ ಮಾತ್ರ ಇಲ್ಲಿ ಜುಗಲ್ ಬಂದಿ ನಡೆಯಲು ಸಾಧ್ಯ. ಈ ಪೈಕಿ ಯಾರೇ ಕಣದಿಂದ ಹಿಂದೆ ಸರಿದರೂ ಪಾಳೆಗಾರರ ಬಿಗ್ ಫೈಟ್ ಮುಗಿದು ಫಲಿತಾಂಶವೂ ವ್ಯತ್ಯಾಸವಾಗುತ್ತದೆ.
ವಿನಯ್ಗೆ ಅನುಕಂಪ: ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಕ್ಷೇತ್ರ ಮತ್ತು ಧಾರವಾಡ ಜಿಲ್ಲೆಗೆ ಪ್ರವೇ ಶಕ್ಕೆ ನಿರ್ಬಂಧ ಇರುವ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿ ಭಾಗಗಳಲ್ಲಿ ಬಂದು ಉಳಿದುಕೊಂಡು ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ತಮ್ಮ ಅವಧಿಯಲ್ಲಿ ಮಾಡಿದ ಕೆಲಸ ಮತ್ತೂಮ್ಮೆ ಕ್ಷೇತ್ರದ ಮತ ದಾರರಿಗೆ ಮನವರಿಕೆ ಮಾಡಿಕೊಟ್ಟು ಮತ ಕೇಳುತ್ತಿದ್ದಾರೆ.
ಜಿಲ್ಲಾ ಪ್ರವೇಶ ನಿಷೇಧಿಸಿದ್ದರ ಬಗ್ಗೆ ಅವರ ಅಭಿಮಾನಿಗಳಲ್ಲಿ ಅನುಕಂಪದ ಅಲೆ ಶುರುವಾಗಿದ್ದು, ವಿನಯ್ ಮತ್ತೆ ಗೆಲ್ಲ ಬೇಕೆಂದು ಈಗಲೇ ಮನೆ ಮನೆ ಪ್ರಚಾರ ಶುರು ಮಾಡಿದ್ದಾರೆ. ಅದು ಅಲ್ಲದೇ ವಿನಯ್ ಪಂಚಮಸಾಲಿ ಸಮುದಾಯದ ಹುರಿಯಾಳು ಮಾತ್ರವಲ್ಲ, ಇತರಲಿಂಗಾಯತ ಒಳಪಂಗಡ ಗಳ ಜತೆಗೂ ಇಂದಿಗೂ ಉತ್ತಮ ಸಂಬಂಧ ಹೊಂದಿದ್ದಾರೆ. ಹೀಗಾ ಗಿ ಬಿಜೆಪಿ ಅಲೆ ಎದ್ದರೆ ಮಾತ್ರ ದೇಸಾಯಿ ತೇಲಲು ಸಾಧ್ಯ ಎನ್ನುತ್ತಿದ್ದಾರೆ ಗ್ರಾಮೀಣ ಕ್ಷೇತ್ರದ ಜನ. ಹೀಗಾ ಗಿಯೇ ಕ್ಷೇತ್ರ ದಲ್ಲಿ ಯಾರಿಗೆ ಟಿಕೆಟ್? ಯಾರ ನಡುವೆ ಸ್ಪರ್ಧೆ ಎಂಬ ಕುತೂ ಹಲ ಏರ್ಪಟ್ಟಿದೆ.
ತಮಟೆ ಹೊಡೆದ ಇಸ್ಮಾಯಿಲ್
ಈ ಕ್ಷೇತ್ರದಲ್ಲಿ ಕೈ ಮತ್ತು ಕಮಲ ಪಡೆ ಮಾತ್ರ ತೀವ್ರ ಸೆಣಸಾಟ ನಡೆಸುವುದು ಪಕ್ಕಾ. ಇಲ್ಲಿ ಜೆಡಿಎಸ್ ಅಥವಾ ಪಕ್ಷೇತರ ಅಭ್ಯರ್ಥಿಗಳ ಪ್ರಭಾವ ಅಷ್ಟಕ್ಕಷ್ಟೇ. ಸದ್ಯಕ್ಕೆ ಕಾಂಗ್ರೆಸ್ನಿಂದ ಇಸ್ಮಾಯಿಲ್ ತಮಟಗಾರ ಕೂಡ ಕಣಕ್ಕಿಳಿಯಲು ಸಜ್ಜಾಗಿದ್ದು, ಒಂದು ವೇಳೆ ಹೈಕಮಾಂಡ್ ಟಿಕೆಟ್ ನಿರಾಕರಿಸಿದರೆ ಜೆಡಿಎಸ್ನಿಂದ ಹುರಿಯಾಳಾಗುವ ಸಾಧ್ಯತೆ ಇದೆ. ಇತ್ತ ಬಿಜೆಪಿಯಲ್ಲಿ ಮಾಜಿ ಶಾಸಕಿ ಸೀಮಾ ಮಸೂತಿ, ತವನಪ್ಪ ಅಷ್ಟಗಿ ಹಾಗೂ ಸವಿತಾ ಅರಮಶೆಟ್ಟಿ ಹೆಸರು ಜೋರಾಗಿ ಕೇಳಿಬರುತ್ತಿವೆ. ಒಟ್ಟಿನಲ್ಲಿ ಕೈ ಮತ್ತು ಕಮಲಕ್ಕೆ ಈ ಬಾರಿ ಬಂಡಾಯದ ಬಿಸಿ ತಟ್ಟುವುದಂತೂ ಪಕ್ಕಾ.
-ಬಸವರಾಜ್ ಹೊಂಗಲ್