ವರದಿ: ಶಶಿಧರ್ ಬುದ್ನಿ
ಧಾರವಾಡ: ಜಿಲ್ಲೆಯಲ್ಲಿ 2014 ರಿಂದ ಜಿಲ್ಲಾಸ್ಪತ್ರೆಯ ಪರಿಕಲ್ಪನೆ ರೂಪದಲ್ಲಿ ಪಾಲಿ ಕ್ಲಿನಿಕ್ ಆರಂಭಗೊಂಡು ಏಳು ವರ್ಷಗಳೇ ಸಂದಿದ್ದು, ಹೊಸಕಟ್ಟಡ ಕಾಮಗಾರಿ ನಾಲ್ಕು ವರ್ಷಗಳ ಬಳಿಕ ಮುಕ್ತಾಯಗೊಂಡು ಬರೋಬ್ಬರಿ ನಾಲ್ಕು ತಿಂಗಳಾದರೂ ಕಾರ್ಯಾರಂಭವೇ ಕಾಣದಂತಾಗಿದೆ.
ನಗರದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರ ಕಚೇರಿ ಎದುರುಗಡೆ 2.17 ಕೋಟಿ ರೂ. ಅನುದಾನದಲ್ಲಿ ಪಾಲಿ ಕ್ಲಿನಿಕ್‌ನ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಮುಗಿದಿದ್ದು, ಕಾರ್ಯಾರಂಭಕ್ಕೆ ಕಾದು ನಿಂತಿದೆ. ಸುಸಜ್ಜಿತ ಹೊಸ ಕಟ್ಟಡ ನಿರ್ಮಾಣ ಆಗಿದ್ದು, ಆದರೆ ಟಿಸಿ ಅಳವಡಿಸಲು ಆಗಿರುವ ವಿಳಂಬದಿಂದ ಕಾರ್ಯಾರಂಭಕ್ಕೆ ಹೊಡೆತ ನೀಡಿದೆ.ಈ ಹಿಂದೆ ತಯಾರಿಸಿದ್ದ ನೂತನ ಕಟ್ಟಡದ ಕ್ರಿಯಾ ಯೋಜನೆಯಲ್ಲಿ ಟಿಸಿ ಅಳವಡಿಕೆ ಬಗ್ಗೆ ಅನುದಾನ ಒದಗಿಸಿಲ್ಲ. ಹೀಗಾಗಿ ವಿದ್ಯುತ್ ಸಂಪರ್ಕದ ಕೊರತೆಯಿಂದ ಕಾರ್ಯಾರಂಭ ಮಾಡದಂತಹ ಅನಿವಾರ್ಯತೆ ಎದುರಾಗಿದೆ.
ಪಾಲಿ ಕ್ಲಿನಿಕ್‌ನ ಏಳು-ಬೀಳು: ಪಾಲಿ ಕ್ಲಿನಿಕ್‌ಗೆ ಸುಸಜ್ಜಿತ ಕಟ್ಟಡ, ತಜ್ಞ ವೈದ್ಯರು ಹಾಗೂ ಏಕ್ಸರೆಯಂತಹ ಯಂತ್ರಗಳ ಕೊರತೆ ಇತ್ತು. 2017ರಲ್ಲಿ ಪಾಲಿ ಕ್ಲಿನಿಕ್‌ಗೆ ಹೊಸ ಸುಸಜ್ಜಿತ ಕಟ್ಟಡ ಮಂಜೂರು ಮಾಡಿ, 100 ಅಡಿ ಉದ್ದ ಹಾಗೂ 135 ಅಗಲ ಜಾಗದಲ್ಲಿ ನಿರ್ಮಿಸಲು 2.17 ಕೋಟಿ ಅನುದಾನ ಒದಗಿಸಲಾಗಿತ್ತು. 2018ರಲ್ಲಿ ಈ ಕಟ್ಟಡ ನಿರ್ಮಾಣ ಹೊಣೆಯನ್ನು ಕರ್ನಾಟಕ ಗೃಹ ಮಂಡಳಿಗೆ ನೀಡಲಾಗಿತ್ತು. ಆದರೆ ಈ ಮಂಡಳಿಯು ಎಂಜಿನಿಯರ್ ತಂಡದಿಂದ ಇಲ್ಲಿ ಕಟ್ಟಡ ನಿರ್ಮಾಣ ಮಾಡಬಹುದೆಂಬ ಬಗ್ಗೆ ಸರ್ವೇ ಹಾಗೂ ತಪಾಸಣೆ ಮಾಡಿಸಿ ಪ್ರಮಾಣಪತ್ರ ಪಡೆದ ಬಳಿಕ 2019ರ ಜನೆವರಿ ತಿಂಗಳಲ್ಲಿ ಕಾಮಗಾರಿಗೆ ಚಾಲನೆ ನೀಡಿದರೂ ಕಟ್ಟಡ ಕಾಮಗಾರಿ ಆರಂಭ ಆಗಲೇ ಇಲ್ಲ. ಇದಲ್ಲದೇ ಆ ವರ್ಷ ಸುರಿದ ಮಳೆಯಿಂದಈಜಾಗದ ತೆಗ್ಗು ಪ್ರದೇಶದಲ್ಲಿ ನೀರು ತುಂಬಿದ್ದರಿಂದ ಆರು ತಿಂಗಳ ಕಾಲ ಕಾಮಗಾರಿಯೇ ಆಗಲಿಲ್ಲ, ಇದೀಗ ಹೊಸ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಸುಸಜ್ಜಿತ ಕಟ್ಟಡದಲ್ಲಿ ಸೇವೆ ನೀಡಲು ಸಿದ್ಧಗೊಂಡು ನಿಂತಿದೆ.