ಧಾರವಾಡ: ನೇಚರ್ ವ್ಯೂ ನಲ್ಲಿ ಫೋಟೋ ಶೂಟ್ ಮತ್ತು ರೀಲ್ಸ್ ಮಾಡುವ ಹುಚ್ಚಿಗೆ ಬಿದ್ದ ಅಪ್ರಾಪ್ತ ಬಾಲಕರ ಗುಂಪೊಂದು ಕಲ್ಲು ಕ್ವಾರಿಯ ಹೊಂಡಕ್ಕೆ ಇಳಿದಾಗ ಈಜು ಬಾರದ ಇಬ್ಬರು ಮುಳುಗಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಧಾರವಾಡ ತಾಲೂಕಿನ ಮನಸೂರು ಗ್ರಾಮದ ಬಳಿ ಸೋಮವಾರ ಸಂಭವಿಸಿದೆ.
ಧಾರವಾಡ ಮಾಳಮಡ್ಡಿ 2ನೇ ಕ್ರಾಸ್ ನಿವಾಸಿ ಶ್ರೇಯಸ್ ನವಲೆ (16) ಹಾಗೂ ಸಪ್ತಾಪುರದ ಧ್ರುವ್ ದಾಸರ್ (16) ಎಂಬುವವರೇ ಮೃತ ಬಾಲಕರು. ಮನಸೂರು ಗ್ರಾಮದ ಹೊರವಲಯದಲ್ಲಿನ ಕಲ್ಲು ಕ್ವಾರಿಯ ಹೊಂಡದಲ್ಲಿ ಈ ದುರ್ಘಟನೆ ನಡೆದಿದೆ.
ಧಾರವಾಡದ ಕೆಇ ಬೋರ್ಡ್ ಶಾಲೆಯ ವಿದ್ಯಾರ್ಥಿಗಳಾದ 16 ವರ್ಷದ ಆರು ಜನ ಬಾಲಕರು ಸೇರಿ, ಪೋಷಕರ ಬಳಿ ಸ್ನೇಹಿತನ ಮನೆಗೆ ಊಟಕ್ಕೆ ಹೋಗುವುದಾಗಿ ಹೇಳಿ ಬೆಳಗ್ಗೆ ಉಪಹಾರ ಮಾಡಿ ಮನೆ ತೊರೆದಿದ್ದರು. ಎಲ್ಲರೂ ಸೇರಿ ಔಟಿಂಗ್ ಹೋಗೋ ಪ್ಲ್ಯಾನ್ ಮಾಡಿದ್ದರು.
ಇತ್ತೀಚೆಗೆ ಸ್ನೇಹಿತರ ಪೈಕಿ ಕೆಲವರು ಈ ಕಲ್ಲು ಕ್ವಾರಿಯಲ್ಲಿ ಹೋಗಿ ಈಜಾಡಿ, ರೀಲ್ಸ್ ಮಾಡಿದ್ದು ತಿಳಿದಿತ್ತು. ಅದನ್ನು ನೋಡಿ, ತಾವು ಇದೇ ಜಾಗ ಆಯ್ದುಕೊಂಡಿದ್ದರು. ಕಲ್ಲು ಕ್ವಾರಿಯ ಹೊಂಡಕ್ಕೆ ಇಳಿಯಲು ಸ್ಥಳೀಯ ದನಗಾಯಿಯೊಬ್ಬನ ಸಹಾಯ ಪಡೆದಿದ್ದರು. ಈ ಕಲ್ಲು ಕ್ವಾರಿ ತುಂಬಾ ಆಳವಾಗಿದ್ದು, ಇತ್ತೀಚೆಗೆ ಸುರಿದ ಮಳೆಗೆ ಹೊಂಡದಲ್ಲಿ ನೀರು ತುಂಬಿತ್ತು. ದೊಡ್ಡ ಪ್ರಪಾತದಂತೆ ಕಾಣುತ್ತಿತ್ತು. ಹೀಗಾಗಿ ಕೆಳಗಿಳಿದ ಆರು ಜನ ಬಾಲಕರ ಪೈಕಿ ನಾಲ್ವರು, ನೀರಿಗಿಳಿದರೆ ಇಬ್ಬರು ಮೊಬೈಲ್‌ನಲ್ಲಿ ಫೋಟೋ ತೆಗೆಯುವ ನಿರ್ಧಾರ ಮಾಡಿದ್ದಾರೆ. ಆದರೆ ಈ ವೇಳೆ ತೀರಾ ಆಳಕ್ಕೆ ಹೋದಾಗ ಈಜು ಬಾರದ ಶ್ರೇಯಸ್ ಮತ್ತು ಧ್ರುವ್ ಮುಳುಗಿದ್ದಾರೆ.
ಉಳಿದವರು ಹೆದರಿ ಮೇಲ್ಗಡೇ ಓಡಿ ಬಂದು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ಶ್ರೇಯಸ್ ಮತ್ತು ಧ್ರುವ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಸ್ಥಳಕ್ಕೆ ಅಗ್ನಿಶಾಮಕ ದಳದವರೊಂದಿಗೆ ಬಂದ ಪೊಲೀಸರು ಶವಗಳನ್ನು ಹುಡುಕುವ ಕೆಲಸ ಮಾಡಿದರು. ಮೊದಲಿಗೆ ಶ್ರೇಯಸ್‌ನ ಶವ ಸಿಕ್ಕರೆ ಕೊನೆಗೆ ಧ್ರುವನ ಶವ ದೊರೆತಿದೆ.
ತಮ್ಮ ಮಕ್ಕಳ ಶವಗಳನ್ನು ಕಂಡು ಅವರ ಪೋಷಕರು ಆ ಕಲ್ಲು ಕ್ವಾರಿ ಬಳಿ ಗೋಳಾಡುತ್ತಿದ್ದ ದೃಶ್ಯ ಮನ ಕಲಕುವಂತಿತ್ತು. ಈ ಸಂಬಂಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.