Advertisement

ಖಾಸಗಿ ಗ್ರಂಥಾಲಯಗಳದ್ದೇ ದರ್ಬಾರ್‌!

05:39 PM May 31, 2022 | Team Udayavani |

ಧಾರವಾಡ: ದಿನದ 24 ಗಂಟೆಯೂ ತೆರೆದ ಬಾಗಿಲು, ಓದಲು ಎಲ್ಲಾ ಬಗೆಯ ಪುಸ್ತಕಗಳು, ಹೈಟೆಕ್‌ ಕಟ್ಟಡಗಳ ಮೂಲ ಸೌಕರ್ಯ. ತಿಂಗಳಿಗೆ 700 ರೂ. ಶುಲ್ಕ ಕೊಟ್ಟಾದರೂ ಓದಲೇ ಬೇಕೆಂಬ ವಿದ್ಯಾರ್ಥಿಗಳ ಹಂಬಲ. ಒಟ್ಟಿನಲ್ಲಿ ಇವು ಜ್ಞಾನದ ಹಸಿವಿನ ದಾಸೋಹ ಕೇಂದ್ರಗಳು. ಹೌದು. ಗ್ರಂಥಾಲಯಗಳು ದೇಗುಲಕ್ಕೆ ಸಮಾನ ಎನ್ನುವ ಮಾತಿನಂತೆ ಸಮಾಜದ ಸ್ವಸ್ಥ ಬದುಕಿಗೆ ಅಗತ್ಯವಾಗಿ ಬೇಕು. ಸಾಮಾನ್ಯವಾಗಿ ಗ್ರಂಥಾಲಯಗಳು ಸರ್ಕಾರದ ಇಲಾಖೆ
ವ್ಯಾಪ್ತಿಯಲ್ಲಿರುತ್ತಿದ್ದವು. ವಿಶ್ವವಿದ್ಯಾಲಯಗಳು, ಕಾಲೇಜುಗಳಲ್ಲಿ ಗ್ರಂಥಾಲಯಗಳಿವೆ. ಸಂಚಾರಿ ಗ್ರಂಥಾಲಯಗಳನ್ನು ನಾವು ನೋಡಿದ್ದೇವೆ. ಆದರೆ ಇದೀಗ ವಿದ್ಯಾನಗರಿ ಧಾರವಾಡದಲ್ಲಿ ಮೊಟ್ಟ ಮೊದಲ ಬಾರಿಗೆ ಖಾಸಗಿ ಗ್ರಂಥಾಲಯಗಳು ತಲೆ ಎತ್ತಿ ನಿಂತಿದ್ದು, ಹಣ ಕೊಟ್ಟು ಪುಸ್ತಕ ಓದುವ ಹೊಸ ಸಂಸ್ಕೃತಿಯೊಂದು ಇಲ್ಲಿ ಹುಟ್ಟುಕೊಂಡಿದೆ.

Advertisement

ಇದು ಬೇರೆ ಯಾವುದಕ್ಕೂ ಅಲ್ಲ, ತಮ್ಮ ಭವಿಷ್ಯ ರೂಪಿಸುಕೊಳ್ಳುವ ಸಲುವಾಗಿ ವಿದ್ಯಾರ್ಥಿಗಳಿಗೆ ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆ ಓದಲು ಬಂದವರಿಗಾಗಿ ಈ ಖಾಸಗಿ ಗ್ರಂಥಾಲಯಗಳು ಹುಟ್ಟಿಕೊಳ್ಳುತ್ತಿವೆ. ಧಾರವಾಡದ ಕರಿಯರ್‌ ಕಾರಿಡಾರ್‌ ಎಂದೇ ಖ್ಯಾತಿ ಪಡೆದಿರುವ ಅರಟಾಳು ರುದ್ರಗೌಡ ರಸ್ತೆ(ಸಪ್ತಾಪೂರದಿಂದ ಗಣೇಶ ನಗರವರೆಗಿನ 3.ಕಿ.ಮೀ. ರಸ್ತೆ.)ಯ ತುಂಬಾ ಎಲ್ಲಿ ನೋಡಿದರೂ ಖಾಸಗಿ ಗ್ರಂಥಾಲಯಗಳೇ ಕಾಣಿಸುತ್ತಿದ್ದು, ಗ್ರಂಥಾಲಯಗಳು ಇದೀಗ ವಿದ್ಯಾರ್ಥಿಗಳ ಓದಿನ ಬೇಡಿಕೆ ಈಡೇರಿಸುವ ತಾಣವಾಗಿ ರೂಪುಗೊಳ್ಳುತ್ತಿವೆ.

ಏನಿದು ಖಾಸಗಿ ಗ್ರಂಥಾಲಯ; ಸರ್ಕಾರಿ ಗ್ರಂಥಾಲಯ ಎಂದರೆ ಅಲ್ಲಿ ಕತೆ, ಕಾದಂಬರಿ, ಐತಿಹಾಸಿಕ ವಿಚಾರಗಳನ್ನು ತಿಳಿಸುವ ಪುಸ್ತಕಗಳು, ಅನ್ವೇಷಣೆಗೊಂಡ ವಿಚಾರಗಳ ಪುಸ್ತಕಗಳನ್ನು ಲಕ್ಷ ಲಕ್ಷ ಸಂಖ್ಯೆಯಲ್ಲಿ ಕಾಯ್ದಿರಿಸಲಾಗಿರುತ್ತವೆ. ಇನ್ನು ಕಾಲೇಜು ಮತ್ತು ವಿಶ್ವವಿದ್ಯಾಲಯದ ಗ್ರಂಥಾಲಯಗಳು ತಮ್ಮ ಕೋರ್ಸ್ ಗಳಿಗೆ ಸಂಬಂಧಪಟ್ಟ ಕೃತಿಗಳು, ಸಂಶೋಧನಾ ಪ್ರಬಂಧಗಳನ್ನೊಳಗೊಂಡ ಗ್ರಂಥಾಲಯಗಳನ್ನು ಸ್ಥಾಪಿಸಿರುತ್ತವೆ.

ಆದರೆ ಖಾಸಗಿ ಗ್ರಂಥಾಲಯಗಳು ಬರೀ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗುವ ಪುಸ್ತಕಗಳನ್ನು ಮಾತ್ರವೇ ಕಾಯ್ದಿರಿಸಿಕೊಂಡಿವೆ. ಇಲ್ಲಿ ಐಎಎಸ್‌, ಐಪಿಎಸ್‌,
ಕೆಎಎಸ್‌, ಪಿಎಸ್‌ಐ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ಅನ್ವಯವಾಗುವ ಕೃತಿಗಳು, ಸಮಕಾಲೀನ ವಿಚಾರಗಳನ್ನು ಬಿಂಬಿಸುವ ಪ್ರಕಟಣಾ ಪತ್ರಿಕೆಗಳಿದ್ದು, ಪ್ರತ್ಯೇಕವಾಗಿ ಇದಕ್ಕೆ ಹಣ ಹಾಕಿ ನಿರ್ಮಿಸುವ ಗುತ್ತಿಗೆದಾರರು ಹುಟ್ಟಿಕೊಂಡಿದ್ದಾರೆ. ಒಂದು ಖಾಸಗಿ ಗ್ರಂಥಾಲಯ ಸ್ಥಾಪಿಸಲು ಕನಿಷ್ಠ 10-20 ಲಕ್ಷ ರೂ. ಗಳವರೆಗೂ ಖರ್ಚಿದೆ. ಹೀಗಾಗಿ ಲಕ್ಷ ಲಕ್ಷ ರೂ. ಗಳನ್ನು ಖರ್ಚು ಮಾಡಿದವರು ಪರತ್‌ ತಮ್ಮ ಹಣ ಪಡೆಯಲು ವಿದ್ಯಾರ್ಥಿಗಳಿಗೆ ತಿಂಗಳು, 6 ತಿಂಗಳೂ
ಅಥವಾ ವರ್ಷಪೂರ್ತಿಯ ಲೆಕ್ಕದಲ್ಲಿ ಶುಲ್ಕ ವಿಧಿಸಿ ತಾವು ಹೂಡಿದ ಬಂಡವಾಳವನ್ನು ಮರಳಿ ಪಡೆಯುತ್ತಿದ್ದಾರೆ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ದೇಶದ ಗಮನ ಸೆಳೆಯುವ ಅತೀ ದೊಡ್ಡ ಗ್ರಂಥಾಲಯವಿದೆ. ಇಲ್ಲಿ 15 ಲಕ್ಷಕ್ಕೂ ಅಧಿಕ ಪುಸ್ತಕಗಳಿವೆ. ಇನ್ನು ಇಲ್ಲಿನ ಕೇಂದ್ರ ಗ್ರಂಥಾಲಯ, ಕರ್ನಾಟಕ ವಿದ್ಯಾವರ್ಧಕ ಸಂಘದ ಗ್ರಂಥಾಲಯ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಓದುಗರಿಗೆ ಉತ್ತಮ ವೇದಿಕೆ ಕಲ್ಪಿಸಿವೆ. ಇದೀಗ ಹಣ ಕೊಟ್ಟು ಓದುವ ಗ್ರಂಥಾಲಯಗಳಿಂದ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಸರ್ಕಾರವೇ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗುವಂತಹ ಪುಸ್ತಕಗಳು ಮತ್ತು ಇತರೇ ಸಮಕಾಲಿನ ಪುಸ್ತಕಗಳನ್ನು ಪೂರೈಸಿದರೆ ಬಡ ವಿದ್ಯಾರ್ಥಿಗಳು ಹಣ ಕೊಟ್ಟು ಅಕ್ಷರ ಪಡೆಯಲು ಆನುಕೂಲವಾಗುತ್ತದೆ ಎನ್ನುತ್ತಿದ್ದಾರೆ ಶಿಕ್ಷಣ ತಜ್ಞರು.

Advertisement

ಹಣ ಕಟ್ಟಿ ಓದಬೇಕು
ಗ್ರಂಥಾಲಯಗಳಿಂದ ಪುಸ್ತಕಗಳನ್ನು ಉಚಿತವಾಗಿ ಪಡೆದು ಓದುವ ಸಂಪ್ರದಾಯ ಈವರೆಗೂ ಇತ್ತು. ಕೆಲವು ಕಡೆಗಳಲ್ಲಿ ಸಾಮಾನ್ಯ ಶುಲ್ಕವೂ ಇರುತ್ತಿತ್ತು. ಇದಕ್ಕೇನು ಯಾರೂ ಹಣ ಕೊಡಬೇಕಿಲ್ಲ ಆದರೆ ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯ ಮಾಹಿತಿ ಒದಗಿಸುವ ಕೆಲವು ಹೈಟೆಕ್‌ ಗ್ರಂಥಾಲಯಗಳಂತೂ ಓರ್ವ ವಿದ್ಯಾರ್ಥಿಗೆ ಮಾಸಿಕ 2 ಸಾವಿರ ರೂ.ಗಳವರೆಗೂ ಶುಲ್ಕ ವಸೂಲಿ ಮಾಡುತ್ತಿವೆ.ದಿನದ 24 ಗಂಟೆ ಯಾವುದೇ ರಜೆ ಇಲ್ಲದೇ ಅಲ್ಲಿ ಕುಳಿತುಕೊಂಡು
ಆರಾಮಾಗಿ ಓದಬಹುದಾಗಿದೆ.

ಸರ್ಕಾರಿ ಸಂಸ್ಥೆಗಳಿಂದ ಅಸಾಧ್ಯವೇ?
ಐಎಎಸ್‌, ಕೆಎಎಸ್‌ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಬಡ ವಿದ್ಯಾರ್ಥಿಗಳು ನಿಜಕ್ಕೂ ಪುಸ್ತಕ, ಗ್ರಂಥಾಲಯಗಳು ಮತ್ತು ಇರಲು ವಸತಿ ನಿಲಯಗಳ ಆಸರೆ ಬಯಸುವುದು ಸಾಮಾನ್ಯ. ವಿದ್ಯಾಕಾಶಿ ಧಾರವಾಡದಲ್ಲಿ ಲಕ್ಷ ಲಕ್ಷ ವಿದ್ಯಾರ್ಥಿಗಳು ಇದೀಗ ಕರಿಯರ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಆದರೆ ಅವರಲ್ಲಿ ಕೆಲವರು ಶ್ರೀಮಂತರಿದ್ದರೆ, ಕೆಲವರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ವಸತಿ ನಿಲಯ, ಧನ ಸಹಾಯ ನೀಡದೇ ಹೋದರೂ, ಕೊನೆಪಕ್ಷ ಅವರಿಗೆ ಓದಲು ಉಚಿತ ಹೈಟೆಕ್‌ ಗ್ರಂಥಾಲಯವೊಂದನ್ನು ನಿರ್ಮಿಸಿ ಕೊಟ್ಟರೆ  ಅನುಕೂಲವಾಗಲಿದೆ.

ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಈಗಿರುವ ಸರ್ಕಾರಿ ಗ್ರಂಥಾಲಯಗಳಲ್ಲಿ ಸಮಕಾಲೀನ ಮತ್ತು ಪ್ರತಿನಿತ್ಯದ ವಿದ್ಯಮಾನ ದಾಖಲಿಸಿಕೊಂಡಿರುವ ಪುಸ್ತಕಗಳು ಲಭ್ಯವಿಲ್ಲ. ಹೀಗಾಗಿ ನಾವು ಖಾಸಗಿ ಗ್ರಂಥಾಲಯಗಳಿಗೆ ಹಣ ಕೊಟ್ಟು ಹೋಗಲೇ ಬೇಕಿದೆ.
*ಅಲ್ಲಮಪ್ರಭು ತಡಕೋಡ,
ಸ್ಪರ್ಧಾತ್ಮಕ ಪರೀಕ್ಷಾರ್ಥಿ

ವಿದ್ಯೆ ಪಡೆಯಲು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ನಾನು ಖಾಸಗಿ ಗ್ರಂಥಾಲಯ ಆರಂಭಿಸಿದ್ದೇನೆ. ಇದರಲ್ಲಿ ಸ್ವಲ್ಪ ಪ್ರಮಾಣದ ಶುಲ್ಕ ಕಟ್ಟಿ ವಿದ್ಯಾರ್ಥಿಗಳು ಓದಬೇಕಿದೆ. ಅವರ ಪರೀಕ್ಷೆಗೆ ಅಗತ್ಯವಾದ ಎಲ್ಲಾ ಪುಸ್ತಕಗಳನ್ನು ಇಲ್ಲಿ ಸಂಗ್ರಹಿಸಿದ್ದೇವೆ.
*ಬಸವನಗೌಡ ಪಾಟೀಲ, ಖಾಸಗಿ
ಗ್ರಂಥಾಲಯ ಮಾಲೀಕರು, ಸಪ್ತಾಪುರ, ಧಾರವಾಡ

*ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next