ಧಾರವಾಡ: ರಾಜ್ಯದ ಮೊದಲ ಐಐಟಿ (ಭಾರತೀಯ ತಂತ್ರಜ್ಞಾನ ಸಂಸ್ಥೆ)ಯಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಸೀಟುಗಳನ್ನು ಮೀಸಲಿರಿಸಬೇಕು ಎನ್ನುವ ರಾಜ್ಯದ ಮನವಿಯನ್ನು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ತಿರಸ್ಕರಿಸಿದೆ. ಹೀಗಾಗಿ, ಕೇಂದ್ರದೊಂದಿಗೆ ಸಂಘರ್ಷ ಅನಿವಾರ್ಯ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಕಿಡಿ ಕಾರಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ಕೇಂದ್ರದ ವಿರುದ್ಧ ಕಿಡಿ ಕಾರಿದರು. ಐಐಟಿಗಾಗಿ ರಾಜ್ಯ ಸರ್ಕಾರ 500 ಎಕರೆಗೂ ಹೆಚ್ಚಿನ ಭೂಮಿ ನೀಡಿದೆ. ಇದರ ಮೌಲ್ಯ ಸುಮಾರು 500 ಕೋಟಿ ರೂ.ಗಳು. ಜತೆಗೆ, ನೀರು, ವಿದ್ಯುತ್ ಸೇರಿದಂತೆ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸಿಕೊಟ್ಟಿದೆ. ಆದರೆ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 120 ವಿದ್ಯಾರ್ಥಿಗಳ ಪೈಕಿ ರಾಜ್ಯದಿಂದ ಕೇವಲ 7 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಹೀಗಾದರೆ, ನಾವು ಐಐಟಿಯನ್ನು ಬೇರೆ ರಾಜ್ಯದ ವಿದ್ಯಾರ್ಥಿಗಳಿಗಾಗಿ ಮಾಡಿದಂತಾಗುತ್ತದೆ. ಇದರಿಂದ ನಮಗೇನೂ ಉಪಯೋಗವಿಲ್ಲ. ರಾಜ್ಯದ ವಿದ್ಯಾರ್ಥಿಗಳಿಗೆ ಉಪಯೋಗಕ್ಕೆ ಬಾರದ ಐಐಟಿ ರಾಜ್ಯದಲ್ಲಿರುವುದು ನಿಷ್ಪ್ರಯೋಜಕ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧಾರವಾಡ ಐಐಟಿಯಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಸೀಟುಗಳನ್ನು ಮೀಸಲಿರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಈ ಸಂಬಂಧ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ ಜಾವಡೇಕರ್ ಅವರು ಕಳೆದ ಒಂದೂವರೆ ತಿಂಗಳ ಹಿಂದೆ ರಾಜ್ಯದ ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದು, ಕೇಂದ್ರ ಸರ್ಕಾರಿ ಸ್ವಾಮ್ಯದ ಇಂತಹ ಸ್ವಾಯತ್ತ ವಿದ್ಯಾಸಂಸ್ಥೆಗಳಲ್ಲಿ ರಾಜ್ಯಗಳಿಗೆ ಯಾವುದೇ ರೀತಿಯ ಸೀಟುಗಳನ್ನು ಮೀಸಲಿರಿಸಲು ಬರುವುದಿಲ್ಲ ಎಂದು ತಿಳಿಸಿದ್ದಾರೆ. ಆ ಮೂಲಕ ನಮ್ಮ ಮನವಿಯನ್ನು ತಿರಸ್ಕರಿಸಿದ್ದಾರೆ. ಹೀಗಾಗಿ, ಕೇಂದ್ರದೊಂದಿಗೆ ಸಂಘರ್ಷ ಅನಿವಾರ್ಯ ಎಂದು ಕಿಡಿ ಕಾರಿದರು.
ಸಂಘರ್ಷಕ್ಕೆ ಸಿದ್ಧ: “ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ರಾಜ್ಯದ ಮನವಿಯನ್ನು ತಿರಸ್ಕರಿಸಿದ್ದಕ್ಕೆ ತಕ್ಕ ಉತ್ತರ ನೀಡುತ್ತೇನೆ. ಈ ಸಂಬಂಧ ಧಾರವಾಡದಲ್ಲೇ ಅಭಿಪ್ರಾಯ ಸಂಗ್ರಹಕ್ಕೆ ರಾಜ್ಯಮಟ್ಟದ ವಿಚಾರ ಸಂಕಿರಣ ಏರ್ಪಡಿಸುತ್ತೇನೆ. ಅಷ್ಟೇ ಏಕೆ, ಈ ವಿಚಾರದಲ್ಲಿ ಕೇಂದ್ರದೊಂದಿಗೆ ನಾನು ಸಂಘರ್ಷಕ್ಕೂ ಸಿದ್ಧ. ಈ ಬಗ್ಗೆ ನ್ಯಾಯ ಸಿಗುವವರೆಗೂ ಹೋರಾಟ ಬಿಡಲಾರೆ’ ಎಂದು ಕಿಡಿ ಕಾರಿದರು.
ಐಐಟಿ ನೇರವಾಗಿ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುತ್ತದೆ. ಹೀಗಾಗಿ, ಕೇಂದ್ರ ಈ ಬಗ್ಗೆ ರಾಜ್ಯ ಸರ್ಕಾರದ ಮತ್ತು ಉನ್ನತ ಶಿಕ್ಷಣ ಇಲಾಖೆಯ ಅಭಿಪ್ರಾಯವನ್ನು ಪರಿಗಣನೆಗೆ ತೆಗೆದುಕೊಳ್ಳುವುದೇ ಇಲ್ಲ. ನಿರ್ದೇಶಕರ ನೇಮಕಾತಿ, ವಿದ್ಯಾರ್ಥಿಗಳ ಮೀಸಲಾತಿ ಸೇರಿದಂತೆ ಎಲ್ಲ ವಿಚಾರದಲ್ಲೂ ಅದರದೇ ತೀರ್ಮಾನ. ಈ ಯಾವ ವಿಚಾರದಲ್ಲೂ ರಾಜ್ಯದತ್ತ ಅದು ನೋಡದಿರುವುದು ವಿಷಾದದ ಸಂಗತಿ ಎಂದರು.
ರಾಜ್ಯದ ವಿದ್ಯಾರ್ಥಿಗಳಿಗೆ ಐಐಟಿಗಳಲ್ಲಿ ಶೇ.25ರಷ್ಟು ಮೀಸಲಾತಿ ನೀಡಬೇಕು ಎನ್ನುವ ವಿಚಾರವನ್ನು ನಾನು ದೆಹಲಿಯಲ್ಲಿ ನಡೆದ ಎಲ್ಲ ರಾಜ್ಯಗಳ ಉನ್ನತ ಶಿಕ್ಷಣ ಇಲಾಖೆಯ ಸಚಿವರ ಸಭೆಯಲ್ಲಿ ಪ್ರಸ್ತಾಪಿಸಿದ್ದೆ. ಅದಕ್ಕೆ ಬಹುತೇಕ ಎಲ್ಲಾ ರಾಜ್ಯಗಳ ಸಚಿವರು ಬೆಂಬಲ ವ್ಯಕ್ತಪಡಿಸಿದ್ದರು. ಆದರೂ, ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ನಮ್ಮ ಮನವಿಯನ್ನು ತಿರಸ್ಕರಿಸಿದ್ದು ಸರಿಯಲ್ಲ.
– ಬಸವರಾಜ ರಾಯರಡ್ಡಿ, ಉನ್ನತ ಶಿಕ್ಷಣ ಸಚಿವ