Advertisement
ಇನ್ನು ಮುಂದೆ ಹೀಗೆ ಧಾರವಾಡ ಆಕಾಶವಾಣಿಯಿಂದ ಯಾವುದೇ ಸ್ಥಳೀಯ ಕಾರ್ಯಕ್ರಮದ ವಿವರ ಬರುವುದಿಲ್ಲ. ಬದಲಿಗೆ ಎಲ್ಲವೂ ನೇರವಾಗಿ ಬೆಂಗಳೂರು ಮತ್ತು ದೆಹಲಿ ಆಕಾಶವಾಣಿ ಕೇಂದ್ರದ ಹಿಡಿತಕ್ಕೆ ಸೇರಿಕೊಂಡಿದ್ದು, ಇನ್ನೇನಿದ್ದರೂ ಖಾಸಗಿ ಮತ್ತು ವಿದೇಶಿ ಕಂಪನಿಗಳು ನೀಡುವ ಪ್ರಾಯೋಜಿತ ಕಾರ್ಯಕ್ರಮಗಳು ಮಾತ್ರ ಪ್ರಸಾರವಾಗಲಿವೆ. ಇಂತಹ ಒಂದು ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದು, ಇದಕ್ಕೆ ಇಂಬು ನೀಡುವಂತೆಯೇ ಏ.13ರಿಂದ ಧಾರವಾಡ ಆಕಾಶವಾಣಿಯ ಕಾರ್ಯಕ್ರಮಗಳ ಪಟ್ಟಿಯೇ ಬದಲಾಗಿದೆ. ಎಲ್ಲವೂ ಬೆಂಗಳೂರು ಕೇಂದ್ರಿತ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ.
Related Articles
Advertisement
ಆಗಿರುವುದೇನು?
ಪ್ರಸಾರ ಭಾರತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಕಾಶವಾಣಿ ಕೇಂದ್ರದಲ್ಲಿ ಏ.13ರಿಂದ ಹೊಸ ನಿಯಮಗಳು ಜಾರಿಯಾಗಿದ್ದು, ಸ್ಥಳೀಯ ದೇಶಿ ಸೊಗಡಿನ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಲಾಗಿದೆ. ಚಿಂತನ, ರೈತರಿಗೆ ಸಲಹೆ, ಜನಪದ ಸಂಗೀತ, ಕೃಷಿ ರಂಗ, ಗಿಳಿವಿಂಡು, ಎಳೆಯರ ಬಳಗ, ಸುಗಮ ಸಂಗೀತ, ಬಸವ ಐಸಿರಿ, ಶ್ರೀಕೃಷ್ಣ ಪಾರಿಜಾತ, ದೊಡ್ಡಾಟ ಹೀಗೆ ಹತ್ತಾರು ಕಾರ್ಯಕ್ರಮಗಳಿಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಅದೂ ಅಲ್ಲದೇ ಯುವರಂಗದಂತಹ ಕಾರ್ಯಕ್ರಮದಲ್ಲಿ ದೇಶ, ಭಾಷೆ, ಸಂಸ್ಕೃತಿ ಸೇರಿದಂತೆ ಅನೇಕ ಉತ್ತಮ ಸಂಗೀತಗಳ ಮೇಲೆ ಬೆಳಕು ಚೆಲ್ಲುವ ಚಿಂತನ-ಮಂಥನ ನಡೆಸುವ ಹಾಗೂ ಅದರೊಂದಿಗೆ ಒಂದಿಷ್ಟು ಚಿತ್ರಗೀತೆಗಳನ್ನು ಪ್ರಸಾರ ಮಾಡುವ ಕಾರ್ಯಕ್ರಮಗಳು ಪ್ರಸಾರವಾಗುತ್ತಿಲ್ಲ.
ಉದ್ಘೋಷಕರಿಗೂ ಕುತ್ತು
ಸದ್ಯಕ್ಕೆ ಆಕಾಶವಾಣಿ ಕೇಂದ್ರದಲ್ಲಿ ಬೆರಳೆಣಿಕೆ ಕಾಯಂ ನೌಕರರಿದ್ದಾರೆ. ಇನ್ನುಳಿದಂತೆ ಅರೆಕಾಲಿಕ ಮತ್ತು ಗುತ್ತಿಗೆ ನೌಕರರೇ ಇದ್ದಾರೆ. ಆಕಾಶವಾಣಿಯ ಜೀವಾಳವೇ ಆಗಿರುವ ಉದ್ಘೋಷಕರಿಗೆ ಇದೀಗ ಸಂಕಷ್ಟ ಎದುರಾಗಿದೆ. ತಾತ್ಕಾಲಿಕವಾಗಿ ಇಲ್ಲಿ ಉದ್ಘೋಷಕರಾಗಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರಿಗೂ ತಿಂಗಳಿಗೆ 6 ದಿನ ಕಾರ್ಯಕ್ರಮ ನಿರ್ವಹಣೆ ನೀಡಲಾಗುತ್ತಿದ್ದು, ಪ್ರತಿ ಕಾರ್ಯಕ್ರಮಕ್ಕೆ 1300 ರೂ. ನೀಡಲಾಗುತ್ತಿದೆ. ಸ್ಥಳೀಯವಾಗಿರುವ ಸಂಸ್ಕೃತಿ, ಕಲೆ, ಕಲಾವಿದರು ಮತ್ತು ವಿಭಿನ್ನ ಪ್ರತಿಭೆಗಳನ್ನು ಗುರುತಿಸಿ ಕಾರ್ಯಕ್ರಮಗಳ ಮೂಲಕ ಪ್ರಸಾರ ಮಾಡುವುದು ಇವರೇ. ಈ ಕಾರ್ಯಕ್ರಮಗಳೇ ಇಲ್ಲದೆ ಹೋದರೆ ಉದ್ಘೋಷಕರು ಕೆಲಸ ಕಳೆದುಕೊಳ್ಳುವುದು ನಿಶ್ಚಿತ.
ಬರೀ ಧ್ವ ನಿಯಲ್ಲೋ ಅಣ್ಣಾ
ಧಾರವಾಡ ಆಕಾಶವಾಣಿ ಕೇಂದ್ರ ಬರೀ ಸಂಪರ್ಕ ಮಾಧ್ಯಮವಾಗಿ ಕೆಲಸ ನಿರ್ವಹಿಸಿಲ್ಲ. ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದ ಸಾಹಿತಿಗಳು, ಕಲಾವಿದರು, ಸಂಗೀತಗಾರರನ್ನು ಹುಟ್ಟು ಹಾಕಿ ಅವರ ಪ್ರತಿಭೆಗೆ ಪ್ರೋತ್ಸಾಹ ನೀಡಿದೆ. ಹಿಂದೂಸ್ತಾನಿ ಸಂಗೀತದ ದಿಗ್ಗಜರಾದ ಪಂ| ಮಲ್ಲಿಕಾರ್ಜುನ ಮನ್ಸೂರ, ಪಂ| ಭೀಮಸೇನ್ ಜೋಶಿ, ಪಂ| ಗಂಗೂಬಾಯಿ ಹಾನಗಲ್ ಅಂತವರು, ಸಿತಾರ್ ವಾದನದಲ್ಲಿ ಬಾಲೆಖಾನ್ ಸಹೋದರರು, ಜಾನಪದ ಸಂಗೀತದಲ್ಲಿ ಬಾಳಪ್ಪ ಹುಕ್ಕೇರಿ, ರಂಗಭೂಮಿಯಲ್ಲಿ ನಾಡೋಜ ಡಾ| ಏಣಗಿ ಬಾಳಪ್ಪ, ಚಿಂತನ ಮತ್ತು ವಿಚಾರ ವಾಗ¾ಯದಲ್ಲಿ ಡಾ| ಎಂ.ಎಂ.ಕಲಬುರ್ಗಿ, ಡಾ| ಗಿರೀಶ ಕಾರ್ನಾಡ, ಜಾನಪದ ಕ್ಷೇತ್ರದಲ್ಲಿ ಡಾ| ಚಂದ್ರಶೇಖರ ಕಂಬಾರ, ಅಸಂಗತ ವೈಚಾರಿಕತೆ ಕುರಿತು ಪ್ರೊ| ಚಂಪಾ, ಡಾ| ಗಿರಡ್ಡಿ, ಡಾ| ಪಟ್ಟಣಶೆಟ್ಟಿ ಹೀಗೆ ದೊಡ್ಡ ಪಟ್ಟಿಯೇ ಆಕಾಶವಾಣಿಗೆ ಅಂಟಿಕೊಂಡು ನಿಲ್ಲುತ್ತದೆ. ಇಂತಹ ಆಕಾಶವಾಣಿಯಲ್ಲಿ ದೇಶಜ್ಞಾನ ಪರಂಪರೆಯ ಕೊಂಡಿಯೇ ಕಳಚಿದರೆ ಅಲ್ಲಿ ಇನ್ನೇನು ಉಳಿಯಲು ಸಾಧ್ಯ ಎನ್ನುತ್ತಿದ್ದಾರೆ ಶ್ರೋತೃಗಳು.
ಡಾ. ಬಸವರಾಜ್ ಹೊಂಗಲ್