ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ “ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದಡಿ ರಾಜ್ಯದ ವಿವಿಧೆಡೆ ಕೆರೆಗಳಿಗೆ ಕಾಯಕಲ್ಪ ನಡೆಸುತ್ತಿದ್ದು, ಪ್ರಸ್ತುತ ವರ್ಷ ಜನಸಹಭಾಗಿತ್ವದಲ್ಲಿ ರಾಜ್ಯಾದ್ಯಂತ 116 ಕೆರೆಗಳ ಪುನಶ್ಚೇತನ ಕಾರ್ಯ ನಡೆಸಲಾಗಿದೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ್ ತಿಳಿಸಿದ್ದಾರೆೆ.
ರಾಜ್ಯದಲ್ಲಿ ಸುಮಾರು 36 ಸಾವಿರ ಕೆರೆಗಳಿವೆ ಎಂಬ ಮಾಹಿತಿಯಿದೆ. ಆದರೆ ಇಂದು ಎಷ್ಟೋ ಕೆರೆಗಳು ನಾದುರಸ್ತಿಯಲ್ಲಿವೆ. ನೀರಿಗಾಗಿ ಬಹುದೂರ ಅಲೆಯಬೇಕಿರುವ ಮಹಿಳೆಯರ ಸಂಕಷ್ಟ ಗಮನಿಸಿದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಹೇಮಾವತಿ ವೀ. ಹೆಗ್ಗಡೆಯವರು ಕೆರೆಗಳ ಪುನಶ್ಚೇತನಕ್ಕಾಗಿಯೇ “ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮವನ್ನು 2016ರಲ್ಲಿ ಪ್ರಾರಂಭಿಸಿದರು.
ಪ್ರಸ್ತುತ ವರ್ಷ ರಾಜ್ಯದ 116 ಕೆರೆಗಳ ಪುನಶ್ಚೇತನ ನಡೆಸಲಾಗಿದ್ದು, ಪುನಶ್ಚೇತನಗೊಂಡು ನೀರು ಸಂಗ್ರ ಹಣೆಗೆ ಅಣಿಯಾಗಿವೆೆ. 8 ಎಂಜಿನಿ ಯರ್‌ಗಳು, 101ನೋಡಲ್ ಅಧಿಕಾರಿಗಳು ಹಾಗೂ 116 ಕೆರೆ ಸಮಿತಿಯ ಸುಮಾರು 580ಕ್ಕೂ ಹೆಚ್ಚು ಪದಾಧಿಕಾರಿಗಳ ತಂಡ ಜಲ ಯೋಧರಾಗಿ ದುಡಿದು ಈ ಬೃಹತ್ ಕಾರ್ಯದ ಯಶಸ್ಸಿಗೆ ಶ್ರಮಿಸಿದ್ದಾರೆ. ಕೆರೆಗಳ ದುರಸ್ತಿಗಾಗಿ 412 ಜೆಸಿಬಿ ಹಾಗೂ ಹಿಟಾಚಿ ಯಂತ್ರಗಳು, 2,683ಕ್ಕೂ ಅಧಿಕ ಟ್ರ್ಯಾಕ್ಟರ್ ಹಾಗೂ ಟಿಪ್ಪರ್ ಬಳಸಲಾಗಿದೆ.
ಕೆರೆಗಳು ವೈಜ್ಞಾನಿಕ ಹಾಗೂ ಸುಂದರವಾಗಿ ಪುನರ್ ನಿರ್ಮಾಣ ಗೊಂಡಿವೆ. ಮಳೆ ಬಂದಾಗ ಮುಂದಿನ ಒಂದೆರಡು ವರ್ಷಕ್ಕೆ ಬೇಕಾದ ನೀರು ಸಂಗ್ರಹಿಸಿ ಸುತ್ತಲಿನ ಪ್ರದೇಶದ ಅಂತರ್ಜಲ ಮಟ್ಟ ಹೆಚ್ಚಿಸಿ, ಜನ-ಜಾನುವಾರುಗಳ ನೀರಿನ ಭವಣೆ ಯನ್ನು ಈ ಕೆರೆಗಳು ನೀಗಿಸಲಿವೆ.
Related Articles
ದುರಸ್ತಿಗೊಳಿಸಿದ ಕೆರೆಗಳ ವೈಶಿಷ್ಟ್ಯ
ವಿಜಯನಗರ ಶ್ರೀಕೃಷ್ಣ ದೇವ ರಾಯರು ನಿರ್ಮಿಸಿದ ಗಂಗಾ ವತಿಯ ಸಿಂಗಾರ ಕುಂಟೆ ಕೆರೆ, ಮೈಸೂರು ಅರಸರು ನಿರ್ಮಿಸಿದ ಎಚ್.ಡಿ. ಕೋಟೆಯ ಅಂತರಸಂತೆ ಕೆರೆ ಪುನ ಶ್ಚೇತನಗೊಂಡಿವೆ. ಕಣ್ವ ಋಷಿಯು ತಪಸ್ಸು ಮಾಡಿದ ಪುಣ್ಯಭೂಮಿಯಾದ ಕುಂದಾಪುರದ ಕನ್ನುಕೆರೆ, ಶರಣೆ ನೀಲಮ್ಮ ದಾನ ಮಾಡಿದ 19 ಎಕರೆಗಳಲ್ಲಿ ನಿರ್ಮಾಣವಾದ ನವಲಗುಂದದ ನೀಲಮ್ಮನ ಕೆರೆ ಜಲಸಂಗ್ರಹಣೆಗೆ ಅಣಿಯಾಗಿದೆ.
ಸ್ಥಳೀಯ ಗ್ರಾ.ಪಂ.ಗೆ ಹಸ್ತಾಂತರ
ಪುನಶ್ಚೇತನಗೊಂಡ ಕೆರೆಗಳ ಮುಂದಿನ ನಿರ್ವಹಣೆಗಾಗಿ ಕೆರೆ ಸಮಿತಿ ಹಾಗೂ ಗ್ರಾ.ಪಂ.ಗಳಿಗೆ ವಹಿಸಿಕೊಡಲಾಗುತ್ತಿದೆ. ಕೆರೆಗಳ ಸುತ್ತ ಅರಣ್ಯೀಕರಣಕ್ಕಾಗಿ ಮುಂದಿನ ಮಳೆಗಾಲದಲ್ಲಿ “ಕೆರೆಯಂಗಳದಲ್ಲಿ ಗಿಡನಾಟಿ’ ಹಮ್ಮಿಕೊಳ್ಳಲಾಗುವುದು.
ಈ ಬಾರಿ ಕೆರಗಳ ಪುನಶ್ಚೇತನ ಕಾರ್ಯದಲ್ಲಿ ರೈತರು ಉತ್ಸಾಹದಿಂದ ಹೂಳು ಸಾಗಾಟದಲ್ಲಿ ಭಾಗವಹಿಸಿದರು. ಕಾಮಗಾರಿ ಸಂದರ್ಭ ಸ್ವಾಮೀಜಿಗಳು, ಶಾಸಕರು ಹಾಗೂ ಇತರ ಜನಪ್ರತಿನಿಧಿಗಳು, ವಿವಿಧ ಇಲಾಖಾಧಿಕಾರಿಗಳು ಭೇಟಿ ನೀಡಿ ಮೆಚ್ಚಿ ಪ್ರೋತ್ಸಾಹಿಸಿರುವುದು ವಿಶೇಷವಾಗಿತ್ತು ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್.ಎಚ್. ಮಂಜುನಾಥ್ ಹೇಳಿದ್ದಾರೆ.
ಇದುವರೆಗಿನ ಸಾಧನೆ
-ಪುನಶ್ಚೇತನಗೊಂಡ ಒಟ್ಟು ಕೆರೆಗಳು: 568
-ಪುನಃಶ್ಚೇತನಗೊಂಡ ಕೆರೆಗಳ ವಿಸ್ತೀರ್ಣ: 3996.68 ಎಕರೆ
-ತೆಗೆದ ಹೂಳಿನ ಪ್ರಮಾಣ (ಕ್ಯೂ.ಮೀ): 153.69ಲಕ್ಷ
-ಹೆಚ್ಚಳವಾಗಿರುವ ನೀರಿನ ಸಂಗ್ರಹಣ ಸಾಮರ್ಥ್ಯ: 338.52 ಕೋ.ಗ್ಯಾಲನ್
-ಪ್ರಯೋಜನವಾಗಲಿರುವ ಕೃಷಿಭೂಮಿ: 1.66 ಲಕ್ಷ ಎಕರೆ
-ಪ್ರಯೋಜನ ಪಡೆದ ಕುಟುಂಬಗಳು:2.68 ಲಕ್ಷ
-ಸಂಸ್ಥೆಯಿಂದ ನೀಡಿದ ಅನುದಾನ: 44.75 ಕೋಟಿ ರೂ.
-ಸ್ಥಳೀಯರ ಪಾಲು (ಹೂಳು ಸಾಗಾಟ): 39.27 ಕೋಟಿ ರೂ.
-ಒತ್ತುವರಿ ತೆರವುಗೊಳಿಸಿದ ಪ್ರದೇಶ: 171 ಎಕರೆ