ಔರಾದ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸಿಬ್ಬಂದಿ ಮಾಡುವ ಕೆಲಸದ ಮಾದರಿಯನ್ನು ಸರ್ಕಾರಿ ಕಚೇರಿ ಅಧಿಕಾರಿಗಳು ಮಾಡಲು ಮುಂದಾಗಬೇಕು. ಅಂದಾಗ ಮಾತ್ರ ಸುವರ್ಣ ಕರ್ನಾಟಕ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದು ಹಣೆಗಾಂವ ಶಂಕರಲಿಂಗ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಸೋಮವಾರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ತಾಲೂಕು ಶಾಖೆಯ ಕಚೇರಿ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅವರು ಹಾಕಿಕೊಟ್ಟಿರುವ ದಾರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಸಂಸ್ಥೆಯಿಂದ ಬಡ ಮತ್ತು ನಿರ್ಗತಿಕ ಕುಟುಂಬದ ಸದಸ್ಯರಿಗೆ ಹಲವು ರೀತಿಯ ಅನುಕೂಲಗಳು ಆಗುತ್ತಿವೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ನೂರಾರು ಜನರ ಜೀವನಕ್ಕೆ ದಾರಿ ದೀಪವಾಗುವುದರ ಜೊತೆಗೆ ಮನೆಯಲ್ಲಿನ ಗೃಹಣಿಯರಿಗೆ ಹಣಕಾಸಿನ ವ್ಯವಹಾರದ ಜ್ಞಾನದ ಜೊತೆಗೆ ಸ್ವಾವಲಂಬಿ ಜೀವನಕ್ಕಾಗಿ ತರಬೇತಿಗಳು ನೀಡಿರುವ ಉದಾಹರಣೆಗಳು ಸಾಕಷ್ಟಿವೆ ಎಂದರು.
ತಹಶೀಲ್ದಾರ್ ಮಲ್ಲಶೆಟ್ಟಿ ಚಿದ್ರೆ ಮಾತನಾಡಿದರು. ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಶಿವಕುಮಾರ ಘಾಟೆ, ಹಣಕಾಸು ಪ್ರಬಂಧಕ ಅಮರೇಗೌಡ, ಮೇಲ್ವಿಚಾರಕ ಸತೀಶ ಮೋಟ್ಟೆ, ಲೋಕೇಶ ಭಾಲ್ಕೆ, ರವೀಂದ್ರ ತೋಟಪ್ಪಾ, ವಿನೋದ ಬಾವಗೆ, ಭಾಗ್ಯಶ್ರೀ, ಮಲ್ಲಿಕಾರ್ಜುನ ಸೇರಿದಂತೆ ಇನ್ನಿತರರು ಇದ್ದರು.