ಬೆಳ್ತಂಗಡಿ: ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹ ಹಾಗೂ ಪೂರ್ವದ ಪುಣ್ಯದ ಫಲದಿಂದ ಹೆಗ್ಗಡೆ ಸ್ಥಾನ ಲಭಿಸಿದ್ದು, ಎಲ್ಲ ಅವಕಾಶಗಳನ್ನು ಬಳಸಿಕೊಂಡು ಜನರಿಗೆ ಸೇವೆ ನೀಡುತ್ತಿದ್ದೇವೆ. ಸಮಸ್ತ ಜನತೆ ತೋರಿಸುವ ಪ್ರೀತಿಯೇ ನನ್ನ ಪಾಲಿನ ಸಂಪತ್ತು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಧರ್ಮಸ್ಥಳದ ಲಕ್ಷದೀಪೋತ್ಸವದ ಮೊದಲ ದಿನವಾದ ರವಿವಾರ ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಆಗಮಿಸಿದ ಭಕ್ತರನ್ನುದ್ದೇಶಿಸಿ ಅವರು ಮಾತನಾಡಿದರು.
ಜನಸೇವೆಯ ಸಂದರ್ಭ ಹಿಂಜರಿಯಬಾರದು. ಅದರಂತೆ ನಾನು ಎಲ್ಲ ಕ್ಷೇತ್ರಗಳಲ್ಲೂ ಹೊಸ ಪ್ರಯೋಗಗಳನ್ನು ಮಾಡಿದ್ದು, ಅದಕ್ಕೆ ಕುಟುಂಬ ವರ್ಗ, ಕ್ಷೇತ್ರದ ಸಿಬಂದಿ ಹೆಗಲು ನೀಡಿದ್ದಾರೆ. ಜನತೆ ಅದನ್ನು ಒಪ್ಪಿಕೊಂಡು ನಡೆದಿದ್ದಾರೆ. ಎಲ್ಲ ಯೋಜನೆಗಳನ್ನು ಮೊದಲು ಬೆಳ್ತಂಗಡಿಯಲ್ಲೇ ಅನುಷ್ಠಾನಗೊಳಿಸಿದ್ದು, ಇಂದು ಎಲ್ಲರೂ ಅಸೂಯೆಪಡುವ ರೀತಿಯಲ್ಲಿ ತಾಲೂಕು ಅಭಿವೃದ್ಧಿಯತ್ತ ಮುನ್ನಡೆದಿದೆ ಎಂದರು. ಜಾತಿ, ಧರ್ಮದ ಭೇದವಿಲ್ಲದೆ ಸಂಘಟಿತರಾಗಿ ದುಡಿಯುವುದೇ ಯಶಸ್ಸಿನ ಲಕ್ಷಣ. ಕ್ಷೇತ್ರದ ಮೇಲಿನ ಭಕ್ತಿಯಿಂದ ಎಲ್ಲ ವರ್ಗದ ಜನರೂ ಬೇರೆ ಬೇರೆ ರೀತಿಯಲ್ಲಿ ಶ್ರೀ ಮಂಜುನಾಥನಿಗೆ ಸೇವೆ ಸಲ್ಲಿಸುವುದಕ್ಕೆ ಮುಂದೆ ಬರುತ್ತಿದ್ದಾರೆ ಎಂದರು.
ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಅತಿಥಿಗಳಾಗಿದ್ದರು. ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಾ| ಬಿ. ಯಶೋವರ್ಮ ಉಪಸ್ಥಿತರಿದ್ದರು. ಪಾದಯಾತ್ರೆ ಸಮಿತಿ ಸಂಚಾಲಕ ಕೆ. ಪ್ರತಾಪಸಿಂಹ ನಾಯಕ್ ಸ್ವಾಗತಿಸಿದರು. ಶ್ರೀನಿವಾಸ ರಾವ್ ನಿರ್ವಹಿಸಿದರು. ಉಜಿರೆ ದೇವಸ್ಥಾನದಿಂದ ಆರಂಭಗೊಂಡ ಪಾದಯಾತ್ರೆಯಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು.
ವಸ್ತು ಪ್ರದರ್ಶನ ಉದ್ಘಾಟನೆ
ಲಕ್ಷದೀಪೋತ್ಸವ ಸಂದರ್ಭ ಪ್ರೌಢಶಾಲಾ ವಠಾರದಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ವಸ್ತುಪ್ರದರ್ಶನವನ್ನು ರವಿವಾರ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು. ಮಂಗಳೂರಿನ ಶೋಭಾಕರ ಬಲ್ಲಾಳ್, ಕೆ. ರಾಜವರ್ಮ ಬಲ್ಲಾಳ್ ಮತ್ತು ನಿವೃತ್ತ ಪ್ರಾಂಶುಪಾಲ ಎ. ರಾಜೇಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಪ್ರದರ್ಶನದಲ್ಲಿ ಸರಕಾದ ವಿವಿಧ ಇಲಾಖೆಗಳ ಮಳಿಗೆಗಳು ಹಾಗೂ ಕೃಷಿ, ವಾಣಿಜ್ಯ, ಕೈಗಾರಿಕೆ, ಉದ್ಯಮ, ಗ್ರಾಮೀಣ ಗುಡಿಕೈಗಾರಿಕೆಗೆ ಸಂಬಂಧಪಟ್ಟ 300ಕ್ಕೂ ಮಿಕ್ಕಿ ಮಳಿಗೆಗಳಿದ್ದು, ಪ್ರವೇಶ ಉಚಿತ. ಲಕ್ಷದೀಪೋತ್ಸವದಲ್ಲಿ ರವಿವಾರ ರಾತ್ರಿ ಹೊಸಕಟ್ಟೆ ಉತ್ಸವ ನಡೆಯಿತು. ಮೊದಲ ದಿನವೇ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ಅಧಿಕವಾಗಿತ್ತು.