Advertisement

ಧರ್ಮ ಸಮ್ಮೇಳನ ದಾರಿದೀವಿಗೆ: ಸೋಮಣ್ಣ

10:45 PM Dec 15, 2020 | mahesh |

ಬೆಳ್ತಂಗಡಿ: ಧರ್ಮ ಸಮ್ಮೇಳನದಲ್ಲಿ ತೋರುವ ಶಾಂತಿಯ ಬೆಳಕು ಮತ್ತು ಸಾರುವ ಸಾಮರಸ್ಯದ ಸಂದೇಶ ಕೇವಲ ನಾಡಿಗೆ ಮಾತ್ರ ಸೀಮಿತವಲ್ಲ. ಬದಲಾಗಿ ಅಸಂಖ್ಯಾತ ಜನರ ಲಕ್ಷ್ಯವನ್ನು ಸೆಳೆಯುವ ಲಕ್ಷದೀಪದಂತೆ ವಿಶ್ವವ್ಯಾಪಿಯಾಗಿದೆ. ಅದಕ್ಕಾಗಿ ಡಾ| ಹೆಗ್ಗಡೆ ಮತ್ತು ಅವರ ಯೋಜನೆಗಳು ವಿಶ್ವಮಾನ್ಯ ಎಂದು ರಾಜ್ಯ ವಸತಿ ಸಚಿವ ವಿ.ಸೋಮಣ್ಣ ಅಭಿಮತ ವ್ಯಕ್ತಪಡಿಸಿದರು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ ಪ್ರಯುಕ್ತ ಧರ್ಮಸ್ಥಳ ಅಮೃತವರ್ಷಿಣಿ ಸಭಾಭವನದಲ್ಲಿ ಡಿ.13ರಂದು ನಡೆದ ಸರ್ವಧರ್ಮ ಸಮ್ಮೇಳನ 88ನೇ ಅಧಿವೇಶನ ಉದ್ಘಾಟಿಸಿ ಅವರು ಮಾತನಾಡಿದರು.

ಧರ್ಮಸ್ಥಳ ಸಮ್ಮೇಳನ ನಿತ್ಯ ನಿರಂತರ
ಪ್ರಸ್ತುತ ಸಮಾಜದಲ್ಲಿ ಮತಧರ್ಮಗಳ ನಡುವೆ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ, ಅಶಾಂತಿಯ ವಾತಾವರಣಕ್ಕೆ ಧರ್ಮ ಕಾರಣವಲ್ಲ. ಧರ್ಮದ ನಿಜವಾದ ಸಾರವನ್ನು ತಿಳಿದುಕೊಳ್ಳದ ಜನರು ಇದಕ್ಕೆ ಕಾರಣ. ಹಾಗಾಗಿ ಅಂತಹ ಜನರಿಗೆ ಧರ್ಮದ ನಿಜವಾದ ಸಾರವನ್ನು ತಿಳಿಸುವ, ತಿದ್ದುವ ಕೆಲಸ ಆಗಬೇಕಾಗಿದೆ. ಈ ರೀತಿಯ ಕ್ಷಮತೆಯನ್ನು ಧರ್ಮಸ್ಥಳದ ಸಮ್ಮೇಳನ ನಿತ್ಯನಿರಂತರವಾಗಿ ಧಾರೆಯೆರೆಯುತ್ತ ಬರುತ್ತಿರುವುದು ಹೆಮ್ಮೆಯ ವಿಚಾರ ಎಂದ ಅವರು ಕೋವಿಡ್‌ ಮಹಾಮಾರಿಯಿಂದ ನಾಡಿಗೆ ಮುಕ್ತಿ ಸಿಗಲಿ ಎಂದು ಆಶಿಸಿದರು.

ಲೋಕಕಲ್ಯಾಣವೇ ಉದ್ದೇಶ
ಸಮ್ಮೇಳದ ಸ್ವಾಗತ ಭಾಷಣ ಮಾಡಿದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು, ಮಾನವ ಹಿತ ಹಾಗೂ ಲೋಕಕಲ್ಯಾಣವೇ ಎಲ್ಲ ಧರ್ಮಗಳ ಉದ್ದೇಶವಾಗಿದೆ. ಧರ್ಮದ ಮರ್ಮವಿರುವುದು ಆಚರಣೆಯಲ್ಲಿ. ಧರ್ಮದಲ್ಲಿ ಸತ್ವವಿದೆ, ಸತ್ಕಾರ್ಯಕ್ಕೆ ಪ್ರೇರಣೆ ಇದೆ. ಧರ್ಮವು ಎಲ್ಲರನ್ನು ಒಗ್ಗೂಡಿಸುವ ಸಾಧನವಾಗಿದ್ದು, ಮಾನವ ಧರ್ಮವೇ ಶ್ರೇಷ್ಠವಾಗಿದೆ ಎಂದು ನುಡಿದರು.

ಅತೀ ಹೆಚ್ಚು ವಿಮೆ ಮಾಡಿದ ಸಂಸ್ಥೆ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ 5 ಲಕ್ಷ ಸ್ವ-ಸಹಾಯ ಸಂಘಗಳನ್ನು ರಚಿಸಿದ್ದು 43 ಲಕ್ಷ ಸದಸ್ಯರು ಸೇರ್ಪಡೆಯಾಗಿದ್ದಾರೆ. ಇವರಿಗೆ ಬ್ಯಾಂಕ್‌‍ಗಳ ಮೂಲಕ 13 ಸಾವಿರ ಕೋಟಿ ರೂ. ವ್ಯವಹಾರಕ್ಕಾಗಿ ಒದಗಿಸಲಾಗಿದೆ. 20 ಲಕ್ಷ ಜೀವನ ಮಧುರ ಪಾಲಿಸಿಯ ಮೂಲಕ ವಿಮಾರಕ್ಷಣೆಯನ್ನು ಮಾಡಿಸಿಕೊಂಡಿದ್ದಾರೆ. ಈ ಮೂಲಕ ಅತೀ ಹೆಚ್ಚು ವಿಮೆ ಮಾಡಿದ ಸಂಸ್ಥೆಯಾಗಿ ಮೂಡಿಬಂದಿದೆ ಎಂದು ಹೆಗ್ಗಡೆಯವರು ತಿಳಿಸಿದರು.

Advertisement

ಸಹಜ ಸ್ವಭಾವವೇ ಧರ್ಮ
ಅಧ್ಯಕ್ಷತೆ ವಹಿಸಿದ ಕನಕಗಿರಿ ಜೈನ ಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಪ್ರತಿಯೊಂದು ವಸ್ತುವಿನಲ್ಲಿರುವ ಸಹಜ ಸ್ವಭಾವವೇ ಧರ್ಮವಾಗಿದೆ. ಪ್ರಾಣಿ ಪಕ್ಷಿಗಳು ಹಾಗೂ ಪ್ರಕೃತಿ ಮತ್ತು ಪರಿಸರ ತಮ್ಮ ಸಹಜ ಸ್ವಭಾವವನನ್ನು ಕಾಪಾಡಿಕೊಂಡು ಬಂದಿದ್ದರೆ ಮನುಷ್ಯನ ಅತಿಯಾದ ಆಸೆ-ಅಕಾಂಕ್ಷೆಗಳಿಂದ ಎಲ್ಲವನ್ನು ಮಲಿನ ವಾಗಿಸಿದ್ದಾನೆ. ನಮ್ಮ ಆಚರಣೆಯಲ್ಲಿ ಪ್ರಮಾದ ಮಾಡದೆ ಪ್ರಕೃತಿ ಪರಿಸರವನ್ನು ಪರಿಶುದ್ಧವಾಗಿ ಸಂರಕ್ಷಣೆ ಮಾಡಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.

ಉಪನ್ಯಾಸ
ಕಬೀರನ ವಿಚಾರಗಳ ಸಮಕಾಲೀನತೆ ಮತ್ತು ಭಕ್ತಿ ಪಂಥಗಳು ಎಂಬ ವಿಚಾರದಲ್ಲಿ ಕಥೆಗಾರ, ಚಿಂತಕ ಬೆಂಗಳೂರಿನ ಕೇಶವ ಮಳಗಿ, ಮಾನವೀಯತೆಯೇ ಶ್ರೇಷ್ಠ ಧರ್ಮ ವಿಚಾರವಾಗಿ ಉಡುಪಿ ಬಿಷಪ್‌ ಹೌಸ್‌ ಸಾರ್ವಜನಿಕ ಸಂಪರ್ಕಾಧಿಕಾರಿ ರೆ| ಫಾ| ಚೇತನ್‌ ಲೋಬೋ ಉಪನ್ಯಾಸ ನೀಡಿದರು.

ಸಚಿವರನ್ನು ಹಾಗೂ ಸ್ವಾಮೀಜಿ ಯವರನ್ನು ಡಾ| ಹೆಗ್ಗಡೆಯವರು ಮತ್ತು ಉಪನ್ಯಾಸಕರನ್ನು ಡಿ.ಸುರೇಂದ್ರ ಕುಮಾರ್‌ ಗೌರವಿಸಿದರು. ಧರ್ಮಸ್ಥಳದ ಹೇಮಾವತಿ ವೀ.ಹೆಗ್ಗಡೆ, ಶೈಲಾ ವಿ.ಸೋಮಣ್ಣ ಉಪಸ್ಥಿತರಿದ್ದರು. ಸಮ್ಮೇಳನ ಸ್ವಾಗತ ಸಮಿತಿ ಕಾರ್ಯದರ್ಶಿ ಡಾ| ಬಿ. ಯಶೋವರ್ಮ ಹಾಗೂ ಉಪನ್ಯಾಸಕ ಸುನೀಲ್‌ ಪಂಡಿತ್‌ ಸಮ್ಮಾನ ಪತ್ರ ವಾಚಿಸಿದರು. ಉಜಿರೆ ಎಸ್‌ಡಿಎಂ ಕಾಲೇಜಿನ ಉಪನ್ಯಾಸಕ ಡಾ| ಶ್ರೀಧರ ಭಟ್‌ ಕಾರ್ಯಕ್ರಮ ನಿರ್ವಹಿಸಿದರು. ಡಾ| ಸುಧೀರ್‌ ಪ್ರಭು ವಂದಿಸಿದರು.

ಡಾ| ಹೆಗ್ಗಡೆ ಭಾರತ ರತ್ನಕ್ಕೆ ಅರ್ಹರು
ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಆರೋಗ್ಯ ಸಹಿತ ಚತುರ್ದಾನಾದಿ ಗಳಲ್ಲಿ ಡಾ| ಹೆಗ್ಗಡೆ ಅವರ ದೂರದರ್ಶಿತ್ವ ಮತ್ತು ಅಭಿವೃದ್ಧಿ ದೃಷ್ಟಿಕೋನದೆಡೆಗಿನ ವೈವಿಧ್ಯಮಯ ಚಟುವಟಿಕೆ ಅಮೋಘವಾಗಿದೆ. ಅವರು ಸಲ್ಲಿಸಿದ ಸೇವೆಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಕೇಂದ್ರ ಸರಕಾರಕ್ಕೆ ಪತ್ರ ಬರೆಯುವುದಾಗಿ ಸಚಿವ ವಿ.ಸೋಮಣ್ಣ ಉಲ್ಲೇಖೀಸಿದರು.

Advertisement

Udayavani is now on Telegram. Click here to join our channel and stay updated with the latest news.

Next