Advertisement

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ : ರಾಜ್ಯಾದ್ಯಂತ 1 ಲಕ್ಷ ಜನರಿಗೆ ಶುದ್ಧಜಲ

12:07 AM Jan 04, 2023 | Team Udayavani |

ಬೆಳ್ತಂಗಡಿ: ರಾಜ್ಯಾದ್ಯಂತ ಜನವರಿಯಲ್ಲಿ ಶುದ್ಧಜಲ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, 1 ಲಕ್ಷ ಜನರಲ್ಲಿ ಶುದ್ಧಜಲ ಬಳಕೆಯ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್‌. ಮಂಜುನಾಥ ತಿಳಿಸಿದ್ದಾರೆ.

Advertisement

ರಾಜ್ಯದ ವಿವಿಧೆಡೆಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುವ ಭಕ್ತರಿಂದ ಫ್ಲೋರೈಡ್‌ ಹಾಗೂ ಅಶುದ್ಧ ನೀರಿನಿಂದಾಗುತ್ತಿರುವ ಸಮಸ್ಯೆಯನ್ನು ಕೇಳಿ ತಿಳಿದುಕೊಂಡ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು 2009ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಗಟಿಯಲ್ಲಿ ರಾಜ್ಯದ ಪ್ರಥಮ ಸಮುದಾಯ ಶುದ್ಧಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿದರು. ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರು ಲೋಕಾರ್ಪಣೆ ಮಾಡಿದ್ದರು.

ಇತ್ತೀಚಿನ ದಿನಗಳಲ್ಲಿ ಅಧಿಕಗೊಂಡ ಜನಸಂಖ್ಯೆ ಹಾಗೂ ಪರಿಸರ ನಾಶದ ಪರಿಣಾಮದಿಂದ ನೀರಿನ ಅಭಾವ ತಲೆದೋರಿದ್ದು ಶುದ್ಧ ಕುಡಿಯುವ ನೀರನ್ನು ಜನರಿಗೆ ಪೂರೈಸುವುದು ಕಷ್ಟಕರವಾಗಿದೆ. ರಾಜ್ಯದ ಶೇ. 60ರಷ್ಟು ಪ್ರದೇಶಗಳಲ್ಲಿ ಕುಡಿಯುವ ನೀರಿನಲ್ಲಿ ಅಗತ್ಯ ಪ್ರಮಾಣಕ್ಕಿಂತ ಹೆಚ್ಚು ಫ್ಲೋರೈಡ್‌, ಶೇ. 20ರಷ್ಟು ಅಧಿಕ ನೈಟ್ರೇಟ್‌ ಹಾಗೂ ಶೇ. 30ರಷ್ಟು ಸೂಕ್ಷ್ಮಾಣುಗಳಿಂದಾಗಿ ಜನರು ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಬೆಳಗಾವಿ, ಬೀದರ್‌, ವಿಜಯಪುರ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗುಲ್ಬರ್ಗಾ, ಹಾಸನ, ಹಾವೇರಿ, ಗದಗ, ಕೋಲಾರ, ತುಮಕೂರು, ಕೊಪ್ಪಳ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಫ್ಲೋರೈಡ್‌ ಸಮಸ್ಯೆ ಹೆಚ್ಚಾಗಿ ಕಂಡುಬಂದಿದೆ.

ಶುದ್ಧಜಲ ಜಾಗೃತಿ ಅಭಿಯಾನ
ಶುದ್ಧಜಲ ಬಳಕೆಯ ಕುರಿತಂತೆ ಜನ ಸಾಮಾನ್ಯರಲ್ಲಿ ಅರಿವಿನ ಕೊರತೆಯಿದೆ. ಇದಕ್ಕಾಗಿ ಜನವರಿ ಪೂರ್ತಿ ಶುದ್ಧಜಲ ಜಾಗೃತಿ ಅಭಿಯಾನವನ್ನು ಶುದ್ಧಗಂಗಾ ಘಟಕಗಳಿರುವ ಪ್ರದೇಶದ ಜನರಿಗೆ ಆಯೋಜಿಸಲಾಗುತ್ತಿದೆ. ಶಾಲಾ ಮಕ್ಕಳಿಗೆ ಮಾಹಿತಿ, ಜಾಥಾ, ಕರಪತ್ರ ಹಂಚಿಕೆ, ಬೀದಿನಾಟಕ, ಸಾರ್ವಜನಿಕ ಮಾಹಿತಿ ಕಾರ್ಯಕ್ರಮ, ಒಕ್ಕೂಟ ಸಭೆಗಳು ಹಾಗೂ ಜ್ಞಾನವಿಕಾಸ ಕೇಂದ್ರಗಳಲ್ಲಿ ಮಾಹಿತಿ ಹಾಗೂ ಮನೆಮನೆಗೆ ತೆರಳಿ ನೋಂದಣಿ ಮೊದಲಾದ 400ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಡಾ| ಮಂಜುನಾಥ ತಿಳಿಸಿದ್ದಾರೆ.

ಧರ್ಮಸ್ಥಳ ಯೋಜನೆ ವತಿಯಿಂದ “ಶುದ್ಧಗಂಗಾ’ ಹೆಸರಿನಲ್ಲಿ ರಾಜ್ಯಾದ್ಯಂತ 371 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಪ್ರತೀ ನಿತ್ಯ ಸುಮಾರು 3,36,000 ಜನರು ಶುದ್ಧನೀರನ್ನು ಬಳಸುತ್ತಿದ್ದಾರೆ. ಪ್ರತೀದಿನ 17 ಲಕ್ಷ ಲೀ. ಶುದ್ಧ ಕುಡಿಯುವ ನೀರನ್ನು ಈ ಘಟಕಗಳ ಮೂಲಕ ನೀಡಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳು ಕೈಜೋಡಿಸಿವೆ.

Advertisement

ಇದನ್ನೂ ಓದಿ: ಪದಾರ್ಪಣ ಪಂದ್ಯದಲ್ಲೇ ಶಿವಂ ಮಾವಿ ಮಿಂಚು; ಭಾರತಕ್ಕೆ ರೋಚಕ ಗೆಲುವು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next