ಇತ್ತೀಚೆಗೆ ನನ್ನ ಸಿನಿಮಾಗಳು ಹಾಗೆ ಬಂದು ಹೀಗೆ ಹೋಗುತ್ತಿವೆ. ಬಹುಶಃ ಇದಕ್ಕೆ ಪ್ರಚಾರದ ಕೊರತೆ ಕಾರಣವಿರಬಹುದು. ಜನ ಸಿನಿಮಾ ನೋಡಿ ಚೆನ್ನಾಗಿದೆ ಎಂದರೂ ಕೆಲವೊಮ್ಮೆ ಈ ರೀತಿ ಆಗುತ್ತಿದೆ. ಒಂದು ಸಿನಿಮಾದಲ್ಲಿ ಅನೇಕರ ಪರಿಶ್ರಮವಿರುತ್ತದೆ. ಸಿನಿಮಾ ಗೆದ್ದರೆ ಎಲ್ಲರ ಪರಿಶ್ರಮ ಸಾರ್ಥಕವಾಗುತ್ತದೆ’ ಇದು ನಟ ಧರ್ಮ ಕೀರ್ತಿರಾಜ್ ಮಾತು.
ಇತ್ತೀಚೆಗೆ ಧರ್ಮ ಕೀರ್ತಿರಾಜ್, ತಿಲಕ್, ರುತ್ವಿ ಪಟೇಲ್ ಮುಖ್ಯಭೂಮಿಕೆ ಯಲ್ಲಿ ಅಭಿನಯಿಸಿರುವ ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರದ “ರೋನಿ’ ಸಿನಿಮಾದ ಟ್ರೇಲರ್ ಮತ್ತು ಹಾಡುಗಳು ಬಿಡುಗಡೆಯಾಯಿತು.
ಇದೇ ವೇಳೆ ಮಾತನಾಡಿದ ಧರ್ಮ ಕೀರ್ತಿರಾಜ್, “ನಾವುಗಳು ಯಾವುದೇ ನಿರ್ಮಾಪಕರಿಗೆ ತೊಂದರೆ ಕೊಡುತ್ತಿಲ್ಲ. ಒಮ್ಮೆಲೆ ಹಲವು ಸಿನಿಮಾಗಳು ಬಿಡುಗಡೆಯಾದರೆ ಯಾರಿಗೂ ಅದರಿಂದ ಪ್ರಯೋಜನವಾಗುವುದಿಲ್ಲ. ಸಿನಿಮಾವನ್ನು ಚೆನ್ನಾಗಿ ಮಾಡಿದಷ್ಟೇ ಪ್ರಚಾರವನ್ನೂ ಚೆನ್ನಾಗಿ ಮಾಡಿದರೆ, ಸಿನಿಮಾ ಗೆಲ್ಲಬಹುದು’ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
“ಲಕ್ಷೀ ಗಣಪತಿ ಸ್ಟುಡಿಯೋಸ್’ ಮತ್ತು “ರೋಶಿಕಾ ಎಂಟರ್‌ಪ್ರೈಸಸ್’ ಬ್ಯಾನರ್‌ನಲ್ಲಿ ನಿರ್ಮಾಣವಾಗಿ ರುವ “ರೋನಿ’ ಸಿನಿಮಾಕ್ಕೆ “ದ ಹಂಟರ್’ ಎಂಬ ಅಡಿಬರಹ ವಿದ್ದು, ಕಿರಣ್ ಆರ್. ಕೆ ಈ ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ಇದೇ ವೇಳೆ ಮಾತನಾಡಿದ “ರೋನಿ’ ನಿರ್ದೇಶಕ ಕಿರಣ್ ಆರ್. ಕೆ, “ಇದೊಂದು ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯ ಸಿನಿಮಾ. ಶ್ರೀಮಂತ ಹುಡುಗಿ ಮನೆಯಲ್ಲಿರುವ ಮೂವತ್ತು ಕೋಟಿ ದರೋಡೆ ಆಗುತ್ತದೆ. ಕೇಸ್ ಸಿಸಿಬಿ ಅಧಿಕಾರಿಗೆ ಬರುತ್ತದೆ. ಇದರ ಮಧ್ಯೆ ಎರಡು ಕೊಲೆಗಳು ನಡೆಯುತ್ತದೆ. ಕೊಲೆ ಮಾಡಿದವರು ಯಾರು? ಇದಕ್ಕೆ ಸಂಬಂದವೇನು? ಆಕೆಗೆ ನ್ಯಾಯ ಸಿಗುತ್ತದಾ? ಎಂಬುದೇ ಸಿನಿಮಾದ ಕಥೆಯ ಎಳೆ’ ಎಂದು ಕಥಾಹಂದರದ ಬಗ್ಗೆ ವಿವರಣೆ ನೀಡಿದರು.
ಮುಂಬೈ ಮೂಲದ ನಾಯಕಿ ರುತ್ವಿ ಪಟೇಲ್, ನಟರಾದ ತಿಲಕ್, ವರ್ಧನ್, ಸಾಹಿತಿ ಕಿನ್ನಾಳ್‌ರಾಜ್ ಮೊದಲಾದವರು ಸಮಾರಂಭದಲ್ಲಿ ಹಾಜರಿದ್ದು, “ರೋನಿ’ ಸಿನಿಮಾದ ಅನುಭವಗಳನ್ನು ಹಂಚಿಕೊಂಡರು