ಧಾರವಾಡ: ಜಿಲ್ಲೆಯಲ್ಲಿ ಶಾಲಾ ಆರಂಭೋತ್ಸವಕ್ಕೆ ಹಬ್ಬದ ವಾತಾವರಣದೊಂದಿಗೆ ಚಾಲನೆ ದೊರೆತಿದ್ದು, ಮಕ್ಕಳು ಶಾಲೆಗಳತ್ತ ಹೆಜ್ಜೆ ಹಾಕಿದ್ದಾರೆ. ಆದರೆ ಈವರೆಗೆ ಶಾಲೆಗಳಿಗೆ ಶೇ.95 ಪಠ್ಯ-ಪುಸ್ತಕಗಳು ತಲುಪಿಸಿದ್ದರೆ ಸಮವಸ್ತ್ರ ಮಾತ್ರ ಈವರೆಗೂ ಬಂದಿಲ್ಲ. ಬರುವ ಲಕ್ಷಣವೂ ಕಾಣುತ್ತಿಲ್ಲ.
Advertisement
ಶಾಲಾ ಆರಂಭೋತ್ಸವ ದಿನ ಮಕ್ಕಳ ಕೈಗಳಲ್ಲಿ ಪಠ್ಯ-ಪುಸ್ತಕಗಳನ್ನಿಟ್ಟಿದ್ದ ಶಿಕ್ಷಕರು ಜೂನ್ ಮೊದಲ ವಾರದೊಳಗೆ ಸಮವಸ್ತ್ರ ನೀಡುವುದಾಗಿ ಹೇಳಿದ್ದರು. ಆದರೆ ಶೈಕ್ಷಣಿಕ ವರ್ಷ ಆರಂಭಗೊಂಡು ಶಾಲಾ ತರಗತಿಗಳು ಶುರುವಾಗಿ ಎರಡು ವಾರ ಗತಿಸಿದರೂ ಶೇ.100 ಪುಸ್ತಕಗಳು ಇನ್ನೂ ಶಾಲಾ ಮಕ್ಕಳ ಕೈ ಸೇರಿಲ್ಲ. ಶೇ.5 ಪಠ್ಯ-ಪುಸ್ತಕಗಳು ಬರುವುದು ಬಾಕಿ ಇದೆ. ಸಮವಸ್ತ್ರಗಳ ಸುಳಿವಂತೂ ಇಲ್ಲವೇ ಇಲ್ಲ.
Related Articles
Advertisement
ಕಳೆದ ಬಾರಿ ಸಮವಸ್ತ್ರ ಪೂರೈಸಲಾಗುತ್ತದೆ ಎಂಬ ಸಂದೇಶ ಪತ್ರವನ್ನಾದರೂ ಮೇ ತಿಂಗಳಾಂತ್ಯದಲ್ಲಿ ಆಯಾ ಡಿಡಿಪಿಐ ಕಚೇರಿಗಳಿಗೆ ರವಾನಿಸಲಾಗಿತ್ತು. ಆದರೆ ಈ ಸಲ ಸಮವಸ್ತ್ರ ಕೊಡುತ್ತೇವೆ. ಇಂತಹ ಸಮಯದಲ್ಲಿ ಪೂರೈಸುತ್ತೇವೆ ಎಂಬ ಯಾವ ಸ್ಪಷ್ಟ ಮಾಹಿತಿ ಡಿಡಿಪಿಐ ಕಚೇರಿಗೆ ಈವರೆಗೂ ತಲುಪಿಲ್ಲ. ಇದು ಡಿಡಿಪಿಐ ಕಚೇರಿ ಅಧಿಕಾರಿಗಳಲ್ಲಿ ಆಂತಕಕ್ಕೆ ಕಾರಣವಾಗಿದೆ.
ಪುಸ್ತಕಗಳೂ ಬರಬೇಕಿದೆ: ಕನ್ನಡ, ಆಂಗ್ಲ, ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು ಮಾಧ್ಯಮಕ್ಕೆ ಸಂಬಂಧಿಸಿದಂತೆ ಜಿಲ್ಲೆಯಿಂದ 1ರಿಂದ 10 ತರಗತಿಯ ಸರಕಾರಿ ಶಾಲೆಗಳ ಮಕ್ಕಳ ದಾಖಲಾತಿ ಅನ್ವಯ 15,79,734 ಉಚಿತ ಪುಸ್ತಕಗಳ ಬೇಡಿಕೆ ಇದೆ. ಈ ಪೈಕಿ 15,00,747 ಪುಸ್ತಕಗಳು ವಿತರಣೆಯಾಗಿದ್ದು, 78,987 ಪುಸ್ತಕಗಳು ಬರಬೇಕಿದೆ. ಇನ್ನು ಖಾಸಗಿ ಶಾಲೆಗಳಿಂದ 6,72,242 ಪುಸ್ತಕಗಳ ಬೇಡಿಕೆ ಇದೆ. ಬೇಡಿಕೆಯನುಸಾರ ಪುಸ್ತಕ ದಾಸ್ತಾನು ಮಾಡಲಾಗಿದ್ದು, ಶಾಲೆಗಳು ಡಿಡಿ ತುಂಬಿದಂತೆ ಅವುಗಳ ವಿತರಿಸುವ ಕಾರ್ಯ ಸಾಗಿದ್ದು, ಶಾಲೆಗಳ ವಿಳಂಬ ನೀತಿಯಿಂದ ಈ ಕಾರ್ಯವೂ ಈವರೆಗೂ ಪೂರ್ಣಗೊಂಡಿಲ್ಲ.