Advertisement

ಏಕ ಸಂಸ್ಕೃತಿಗೆ ತಳ್ಳುವ ಒತ್ತಡ ವೃದ್ಧಿ 

05:28 PM Dec 07, 2018 | |

ಧಾರವಾಡ: ಇಂದು ದೇಶದಲ್ಲಿ ಏಕ ಸಂಸ್ಕೃತಿಯನ್ನು ಒತ್ತಾಯಪೂರ್ವಕವಾಗಿ ಹೇರಲಾಗುತ್ತಿದೆ. ಆದರೆ, ನಮಗೆ ಬಹು ಸಂಸ್ಕೃತಿಯ ಸಮಾಜದ ಅಗತ್ಯವಿದೆ ಎಂದು ಜಗದ್ಗುರು ತೋಂಟದಾರ್ಯ ಶಾಖಾ ಮಠದ ಶ್ರೀ ನಿಜಗುಣಾನಂದ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.

Advertisement

ಕರ್ನಾಟಕ ವಿಶ್ವವಿದ್ಯಾಲಯದ ಡಾ| ಬಿ.ಆರ್‌. ಅಂಬೇಡ್ಕರ್‌ ವಿಭಾಗವು ಸುವರ್ಣ ಮಹೋತ್ಸವ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಡಾ| ಬಿ.ಆರ್‌. ಅಂಬೇಡ್ಕರ್‌ 62ನೇ ಮಹಾಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದು ನಾವು ಸಂಪ್ರದಾಯವಾದಿಗಳ ಕೈಗೊಂಬೆ ಆಗಿದ್ದು, ಏಕ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿದ್ದೇವೆ. ಹೀಗಾಗಿ ನಮಗೆ ಅಂಬೇಡ್ಕರ, ಬುದ್ಧ ಮತ್ತು ಬಸವ ಚಿಂತನೆಗಳು ಬೇಕಾಗಿವೆ. ದ್ರಾವಿಡ ಸಂಸ್ಕೃತಿಯನ್ನು ಮರುಸ್ಥಾಪಿಸಬೇಕಾದ ಸಂದರ್ಭ ಒದಗಿ ಬಂದಿದೆ ಎಂದರು.

ಸಮಾಜದಲ್ಲಿಂದು ದಲಿತರಿಗೆ ಸಂವಿಧಾನಾತ್ಮಕವಾಗಿ ಮಾತ್ರ ಗೌರವ ಕೊಡುತ್ತಿದ್ದಾರೆ ಹೊರತು ಮನಃಪೂರ್ವಕವಾಗಿ ಅಲ್ಲ. ಈ ದೇಶ ಉಳಿಯ ಬೇಕಾದರೆ ಶ್ರಮಿಕರ ಸಂಸ್ಕೃತಿಯ ದ್ರಾವಿಡ ಸಂಸ್ಕೃತಿ ಬೇಕು. ಅದರಲ್ಲೂ ವಿವೇಕಾನಂದರು, ಕನಕದಾಸರು, ಬಸವಣ್ಣವರು ನೀಡಿರುವ ಸಂದೇಶ, ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. 

ಮಾಜಿ ಸಚಿವ ಡಾ| ಎಚ್‌.ಸಿ. ಮಹದೇವಪ್ಪ ಮಾತನಾಡಿ, ಕೇಂದ್ರ ಸರಕಾರ ಇಂದು ಸುಪ್ರೀಂ ಕೋರ್ಟ್‌ಗೆ ನಿರ್ದೇಶನ ಮಾಡುತ್ತಿದೆ. ಸಂವಿಧಾನ ರಕ್ಷಣೆ ಮಾಡುವವರು ನಾಲಿಗೆಯನ್ನು ಕತ್ತರಿಸಿ ಎಂದು ಅಪ್ಪಣೆ ಮಾಡುತ್ತಿದ್ದಾರೆ. ಮತದಾನದ ಮೂಲಕ ಸಂವಿಧಾನ ರಕ್ಷಣೆ ಮಾಡಬೇಕಾದ್ದು ನಮ್ಮ ಕರ್ತವ್ಯವಾಗಿದೆ. ಜಾತಿ ರಹಿತ, ವರ್ಗ ರಹಿತ ಸಮಾಜ ನಿರ್ಮಿಸಬೇಕಾದ ಅವಶ್ಯಕತೆ ಹೆಚ್ಚಿದೆ ಎಂದರು.

ಕುಲಪತಿ ಪ್ರೊ| ಪ್ರಮೋದ ಗಾಯಿ ಅಧ್ಯಕ್ಷತೆ ವಹಿಸಿದ್ದರು. ಜನವಾಡದ ಅಲ್ಲಮ ಪ್ರಭು ಆಶ್ರಮದ ಮಲ್ಲಿಕಾರ್ಜುನ ಸ್ವಾಮೀಜಿ, ಕುಲಸಚಿವ ಪ್ರೊ| ಕೆ.ಎಂ ಹೊಸಮನಿ, ಹಣಕಾಸು ಅಧಿಕಾರಿ ಡಾ| ಆರ್‌.ಎಲ್‌. ಹೈದ್ರಾಬಾದ, ಮೌಲ್ಯಮಾಪನ ಕುಲಸಚಿವ ಡಾ| ಎನ್‌.ಎಂ. ಸಾಲಿ, ಪ್ರಾಧ್ಯಾಪಕರಾದ ಡಾ| ಶಿವರುದ್ರ ಕಲ್ಲೋಳಕರ, ಡಾ| ಸದಾಶಿವ ಮರ್ಜಿ, ಡಾ| ಬಿ.ಕೆ.ಎಸ್‌. ವರ್ಧನ್‌, ಡಾ| ಜಿ.ಬಿ. ನಂದನ, ಅಂಬೇಡ್ಕರ ವಿಭಾಗದ ಸಂಯೋಜಕರಾದ ಡಾ| ಸುಭಾಸಚಂದ್ರ ನಾಟಿಕರ ಇದ್ದರು.

Advertisement

ನಾನೆಂದೂ ಬ್ರಾಹ್ಮಣ ವಿರೋಧಿಯಲ್ಲ. ಬದಲಾಗಿ ಸಂಪ್ರದಾಯ ವಿರೋಧಿಯಷ್ಟೆ. ಈ ದೇಶ ಮಾಂಸ ತಿಂದವರಿಂದ ಹಾಳಾಗಿಲ್ಲ, ಬದಲಾಗಿ ತುಪ್ಪ ತಿಂದವರಿಂದ ಹಾಳಾಗಿದೆ ಎಂದು ಹೇಳಿದನ್ನೇ ತಪ್ಪಾಗಿ ಅರ್ಥೈಸಲಾಗಿದೆ. ಒಂದು ವೇಳೆ ಸಂವಿಧಾನ ಇಲ್ಲದಿದ್ದರೆ ನನ್ನನ್ನು ಗುಂಡಿಟ್ಟೋ ಅಥವಾ ಪ್ರಸಾದದಲ್ಲಿಯೇ ವಿಷ ಹಾಕಿ ಕೊಲ್ಲುತ್ತಿದ್ದರು. ಅದಕ್ಕಾಗಿ ಪ್ರಸಾದ ಮಾಡಲೂ ಹೆದರುವಂತಾಗಿದೆ.
. ನಿಜಗುಣಾನಂದ ಸ್ವಾಮೀಜಿ

Advertisement

Udayavani is now on Telegram. Click here to join our channel and stay updated with the latest news.

Next