ಧಾರವಾಡ: ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ತೀವ್ರ ಸದ್ದು ಮಾಡಿದ್ದ ಸಚಿವ ಬೈರತಿ ಬಸವರಾಜ ಅವರು ಅಕ್ರಮವಾಗಿ ಜಮೀನು ಖರೀದಿ ಪ್ರಕರಣದಲ್ಲಿ ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯ, ಹೊರಡಿಸಿದ್ದ ಸಮನ್ಸ್ ಗೆ ಧಾರವಾಡ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿದೆ.
ಬೆಂಗಳೂರಿನ ಕೆ.ಆರ್. ಪುರಂ ಹೋಬಳಿ ವ್ಯಾಪ್ತಿಯಲ್ಲಿ 22 ಎಕರೆ ಜಮೀನನ್ನು ಅಣ್ಣಯ್ಯಪ್ಪ ಎಂಬುವರಿಂದ 2003ರಲ್ಲಿ ಕಾನೂನು ಬಾಹಿರವಾಗಿ ಬೈರತಿ ಬಸವರಾಜ್ ಅವರು ಖರೀದಿ ಮಾಡಿದ್ದಾರೆ ಎಂಬ ಆರೋಪವಿತ್ತು. ಈ ಕುರಿತ ಮಾದಪ್ಪ ಎಂಬುವರು ಪೊಲೀಸ್ ಠಾಣೆಗೆ ಹೋಗಿ ಪ್ರಕರಣ ದಾಖಲು ಮಾಡಿದ್ದರು. ನಂತರ ಪೊಲೀಸರು ವಿಚಾರಣೆ ಮಾಡಿ ಬಿ ರಿಪೋರ್ಟ್ ಹಾಕಿದ್ದರು. ಇದನ್ನು ಪ್ರಶ್ನಿಸಿ ಮಾದಪ್ಪನವರು, ಜನಪ್ರತಿನಿಧಿಗಳ ನ್ಯಾಯಾಲಯದ ಮೊರೆ ಹೋಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯವು, ಪೊಲೀಸರ ಬಿ ರಿಪೋರ್ಟ್ ಅನ್ನು ವಜಾಗೊಳಿಸಿ, ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ಸಚಿವ ಬೈರತಿ ಬಸವರಾಜ ಸೇರಿ ಇತರರ ವಿರುದ್ಧ ಕ್ರಿಮಿನಲ್ ಅಪರಾಧ ಪ್ರಕರಣವನ್ನು ದಾಖಲಿಸಿಕೊಂಡು, ಸಮನ್ಸ್ ಜಾರಿಗೊಳಿಸಿತ್ತು.
ಇದನ್ನು ಪ್ರಶ್ನಿಸಿ ಬೈರತಿ ಬಸವರಾಜ ಅವರು ಹೈಕೋರ್ಟ್ ಅರ್ಜಿ ಸಲ್ಲಿಸಿ, ಸಮನ್ಸ್ ಅನ್ನು ರದ್ದುಗೊಳಿಸಿ, ವಿಚಾರಣೆಗೆ ತಡೆಯಾಜ್ಞೆ ನೀಡಬೇಕು ಎಂದು ಕೋರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ನ ಪೀಠ, ಕೆಳ ನ್ಯಾಯಾಲಯ ಹೊರಡಿಸಿರುವ ಸಮನ್ಸ್ ಹಾಗೂ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿ, ಜನವರಿ ೨ನೇ ವಾರಕ್ಕೆ ವಿಚಾರಣೆ ಮುಂದೂಡಿತು.
ಕಳೆದ ವಾರ ವಿಧಾನ ಮಂಡಳ ಕಲಾಪದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಈ ವಿಷಯ ಪ್ರಸ್ತಾಪಿಸಿ ಸಚಿವ ಭೈರತಿ ಬಸವರಾಜ ಅವರ ರಾಜೀನಾಮೆಗೆ ಆಗ್ರಹಿಸಿ ಹೋರಾಟ ಮಾಡಿದ್ದವು. ಅಲ್ಲದೆ ಬಿಜೆಪಿ ಮುಖಂಡರಿಗೆ ಈ ಪ್ರಕರಣ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು.
ಇದನ್ನೂ ಓದಿ : ಬೆಳಗಾವಿಯಲ್ಲಿ 16.50 ಕೋಟಿ ವೆಚ್ಚದ ಕ್ರೀಡಾ ಸಮುಚ್ಚಯಗಳ ಲೋಕಾರ್ಪಣೆ