Advertisement

ಪಂಚಾಯ್ತಿ ಗದ್ದುಗೆಗಾಗಿ ಸದಸ್ಯರಿಗೆ ಪ್ರವಾಸ ಭಾಗ್ಯ

03:34 PM Feb 03, 2021 | Team Udayavani |

ಧಾರವಾಡ: ಕೆಲವರಿಗೆ ಉತ್ತರ ಭಾರತ, ಕೆಲವರಿಗೆ ದಕ್ಷಿಣಭಾರತ ಪ್ರವಾಸ ಭಾಗ್ಯ, ಕೈತುಂಬಾ ಝಣ ಝಣ ಕಾಂಚಾಣ, ಕೆಲವರಿಗೆ ಬೀಗರ ಮನೆಗಳೇ ರೆಸಾರ್ಟ್‌, ಇನ್ನು ಕೆಲವರಿಗೆ ತೋಟದ ಮನೆಗಳೇ ಗತಿ. ಒಟ್ಟಿನಲ್ಲಿ ಕೈ ಬಿಟ್ಟು ಖರ್ಚು ಮಾಡಿ ಗೆದ್ದವರು ಇದೀಗ ಗ್ರಾಮಗಳಿಂದ ಓಟ ಕಿತ್ತಿದ್ದಾರೆ. ಇನ್ನು ಕೆಲವರು ಪ್ರವಾಸ ಮುಗಿಸಿ ಬಂದು ನೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸಿ ಬೀಗಿದ್ದಾರೆ. ಒಂದು ತಿಂಗಳ ಹಿಂದಷ್ಟೇ ಮುಗಿದ ಗ್ರಾಪಂ
ಚುನಾವಣೆಯಲ್ಲಿ ಗೆದ್ದು ನೂತನ ಸದಸ್ಯರಾಗಿರುವ ಎಲ್ಲರೂ ಇದೀಗ ನಿಮಗೆ ಆ ಗ್ರಾಮಗಳಲ್ಲಿ ಸಿಕ್ಕುತ್ತಿಲ್ಲ. ಬದಲಿಗೆ ಅಕ್ಕಪಕ್ಕದ ರಾಜ್ಯಗಳಾದ ಗೋವಾ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶಗಳ ಪ್ರವಾಸಿ ತಾಣದಲ್ಲಿ ಸಿಕ್ಕಬಹುದು. ಕೆಲವರಂತೂ ದಕ್ಷಿಣ ಭಾರತವಷ್ಟೇ ಅಲ್ಲ,
ಉತ್ತರ ಭಾರತದ ಪ್ರವಾಸಿ ತಾಣಗಳಲ್ಲೂ ಸೆಲ್ಪಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ ಎಂದರೆ ನಂಬಲೇಬೇಕು. ಜಿಲ್ಲೆಯ 136 ಗ್ರಾಪಂಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಫೆಬ್ರವರಿ ಮೊದಲ ವಾರದಲ್ಲಿ ಚುನಾವಣೆಗಳು ನಿಗದಿಯಾಗಿದ್ದು, ಮೀಸಲಾತಿ ಕೂಡ ಪ್ರಕಟವಾಗಿದೆ. ಮೀಸಲಾತಿ ಪ್ರಕಟಗೊಂಡ ಬೆನ್ನಲ್ಲೇ ಮಿತ್ರಪಡೆ ರಚಿಸಿಕೊಂಡಿದ್ದವರು ಕೂಡ ಇದೀಗ ತೃತೀಯ ರಂಗದ ಬೆನ್ನು ಹತ್ತಿ ಯಾರ ಸಂಪರ್ಕಕ್ಕೂ ಸಿಕ್ಕದೇ ಕಾಲು ಕಿತ್ತಿದ್ದಾರೆ. ಕೆಲವರು ಮರಳಿ ಮನೆಗೂ ಬಂದಿದ್ದಾರೆ.

Advertisement

ದೈತ್ಯ ಗ್ರಾಪಂಗಳಲ್ಲಿ ಜಿದ್ದಾಜಿದ್ದಿ: ಜಿಲ್ಲೆಯ ದೈತ್ಯ ಗ್ರಾಮಗಳಾದ ಹೆಬ್ಬಳ್ಳಿ, ಅಮ್ಮಿನಭಾವಿ, ಗರಗ, ಸಂಶಿ, ಮೊರಬ, ತಿರ್ಲಾಪೂರ, ಹುಲಕೊಪ್ಪ, ದೇವಿಕೊಪ್ಪ, ತಡಸ, ವರೂರು ಸೇರಿದಂತೆ 20ಕ್ಕಿಂತಲೂ ಹೆಚ್ಚಿನ ಗ್ರಾಪಂ ಸದಸ್ಯ ಬಲವನ್ನು ಹೊಂದಿದ ದೈತ್ಯ ಗ್ರಾಮಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ತೀವ್ರ ಜಿದ್ದಾಜಿದ್ದಿಗೆ ಬಿದ್ದಿತ್ತು. ಸದಸ್ಯರ ಸಂಖ್ಯೆ ಹೆಚ್ಚಿರುವಲ್ಲಿ ಎಲ್ಲಾ ಸದಸ್ಯರನ್ನು ಬಹುಮತ ಸಾಬೀತುಗೊಳಿಸುವ ವರೆಗೂ ಹಿಡಿದಿಟ್ಟುಕೊಳ್ಳಲು ಆಕಾಂಕ್ಷಿಗಳು ಲಕ್ಷ ಲಕ್ಷ ಹಣ ಖರ್ಚು ಮಾಡಿ ಬರೋಬ್ಬರಿ 20 ದಿನಗಳಿಂದ ಪ್ರವಾಸಿ ತಾಣಗಳನ್ನು ಸುತ್ತಿಸುತ್ತಿದ್ದಾರೆ. ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ ಸೇರಿದಂತೆ ಕರಾವಳಿ ಪ್ರವಾಸಿ ತಾಣಗಳಲ್ಲಿ ಅತೀ ಹೆಚ್ಚು ಗ್ರಾಪಂ ಸದಸ್ಯರು ಕಾಲ ಕಳೆಯುತ್ತಿದ್ದಾರೆ. ಅದೂ ಅಲ್ಲದೆ ಪಕ್ಕದ ಗೋವಾ ರಾಜ್ಯದಲ್ಲಿನ ಅನೇಕ ರೆಸಾರ್ಟ್‌ಗಳಲ್ಲಿ ಕೆಲವರು ಐಷಾರಾಮಿ ಐಭೋಗ ಅನುಭವಿಸುತ್ತಿದ್ದಾರೆ. ಇನ್ನು ಫೆ. 2ರಂದು ಕೆಲವು ಗ್ರಾಪಂಗಳಿಗೆ ಮರಳಿದ ಸದಸ್ಯರು ಬಹುಮತ ಸಾಬೀತು ಪಡಿಸಿ ನೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸಿ ಮನೆ ಸೇರಿದ್ದಾರೆ.

ಮಠಾಧೀಶರ ಮಧ್ಯಸ್ಥಿಕೆ-ದೇವರ ಸಾಕ್ಷಿ

ಕೆಲವು ಗ್ರಾಮಗಳಲ್ಲಿ ಮಠಾಧೀಶರೇ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರನ್ನು ನೇಮಿಸಿದ್ದಾರೆ. ಮೀಸಲಾತಿ ಪ್ರಕಟಗೊಂಡಾಗ ಆಯಾ ಸಮುದಾಯಗಳ ಪೈಕಿ ಒಂದಕ್ಕಿಂತ ಹೆಚ್ಚು ಜನರು ಆಯ್ಕೆಯಾದ ಕಡೆಗಳಲ್ಲಿ ಸ್ಥಳೀಯವಾಗಿರುವ ಧಾರ್ಮಿಕ ಮುಖಂಡರು, ಗ್ರಾಮದ ಹಿರಿಯರು ಹೊಂದಾಣಿಕೆ ಮಾಡಿಕೊಂಡು ಹೋಗುವಂತೆ ನೂತನ ಸದಸ್ಯರಿಗೆ ಮಾರ್ಗದರ್ಶನ ಮಾಡಿದ್ದಾರೆ. ಆದರೂ ಅವರ ಪೈಕಿ ಕೆಲವಷ್ಟು ಜನರನ್ನು ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಯ ಆಕಾಂಕ್ಷಿಗಳು ಪ್ರವಾಸಕ್ಕೆಂದು ಕರೆದುಕೊಂಡು ಹೋಗಿದ್ದಾರೆ.

ಪ್ರವಾಸದಿಂದ ನೇರವಾಗಿ ಗ್ರಾಪಂಗೆ!

Advertisement

ಬಹುಮತ ಸಾಬೀತು ಪಡಿಸುವ ಪ್ರಕ್ರಿಯೆ ಜಿಲ್ಲೆಯಲ್ಲಿ ಆರಂಭಗೊಂಡಿದೆ. ಮಂಗಳವಾರ ಜಿಲ್ಲೆಯ 35ಕ್ಕೂ ಹೆಚ್ಚು ಗ್ರಾಪಂಗಳ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯಿತು. ಆದರೆ ಪ್ರವಾಸ ಮುಗಿಸಿ ನೇರವಾಗಿ ಮನೆಗೂ ಬಾರದೇ ಗ್ರಾಪಂಗಳಿಗೆ ತೆರಳಿ ತಮ್ಮ ನೆಚ್ಚಿನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರು. ಆದರೆ ಸೋತ ಅಭ್ಯರ್ಥಿಗಳು ಮಾತ್ರ ಕೆಲವು ಸದಸ್ಯರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆಗಳು ಅಲ್ಲಲ್ಲಿ ನಡೆದಿದೆ.

*ಡಾ| ಬಸವರಾಜ ಹೊಂಗಲ್‌

ಓದಿ : ಕೇಂದ್ರದಿಂದ ರೈತ- ಜನ ವಿರೋಧಿ ಬಜೆಟ್‌

Advertisement

Udayavani is now on Telegram. Click here to join our channel and stay updated with the latest news.

Next