Advertisement

ಚಿತ್ರ ವಿಮರ್ಶೆ: ಧರಣಿಯ ಒಡಲಲ್ಲಿ ಬಗೆದಷ್ಟೂ ಕುತೂಹಲ!

11:56 AM Dec 03, 2022 | Team Udayavani |

ಸ್ನೇಹ, ಪ್ರೀತಿ, ಪ್ರೇಮ, ಸಹಕಾರ, ಪ್ರತ್ಯುಪಕಾರ ಜೀವನದ ಮಂತ್ರಗಳಾದರೆ ಎಲ್ಲವೂ ಪ್ರಶಾಂತವಾಗಿರುತ್ತದೆ. ಆಸೆ, ದ್ವೇಷ, ಅಸೂಯೆಗಳಿಂದ ಧರಣಿ ಬರಡಾಗುತ್ತದೆ. ಇಲ್ಲೇ ಸ್ವರ್ಗ, ಇಲ್ಲೇ ನರಕ ಎಂಬ ಮಾತಿನಂತೆ, ನಾವಿರುವ “ಧರಣಿ ಮಂಡಲ ಮಧ್ಯದೊಳಗೆ’ಯೇ ಎಲ್ಲವೂ ಆವರಿಸಿಕೊಂಡಿರುತ್ತದೆ. ಯಾರು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೋ, ಅವರು ಅದರ ಪ್ರತಿಫ‌ಲ ಪಡೆಯುತ್ತಾರೆ. ಇಂಥದ್ದೊಂದು ಪಾಠವನ್ನು ಸಸ್ಪೆನ್ಸ್‌, ಕ್ರೈಂ-ಥ್ರಿಲ್ಲರ್‌ ಶೈಲಿಯಲ್ಲಿ ಹೇಳಿರುವ ಸಿನಿಮಾ “ಧರಣಿ ಮಂಡಲ ಮಧ್ಯದೊಳಗೆ…’

Advertisement

ಆರಂಭದಲ್ಲಿಯೇ ಚಿತ್ರತಂಡ ಹೇಳಿದಂತೆ, “ಧರಣಿ ಮಂಡಲ ಮಧ್ಯದೊಳಗೆ’ ಹೈಪರ್‌ ಲಿಂಕ್‌ ಸಿನಿಮಾ. ಬಾಕ್ಸಿಂಗ್‌ ಪಟುವಾಗಬೇಕೆಂಬ ಹಂಬಲದ ಹುಡುಗ, ಜೀವನದಲ್ಲಿ ಬೇಸತ್ತು ಡ್ರಗ್ಸ್‌ ವ್ಯಸನಿಯಾದ ಹುಡುಗಿ, ಪ್ರೀತಿಸಿ ಮದುವೆಯಾಗಿ ತಂದೆ-ತಾಯಿಯಿಂದ ದೂರವಾಗಿ ಒದ್ದಾಡುವ ಮಗ, ಮಗನನ್ನು ನೋಡಲು ತುದಿಗಾಲಿನಲ್ಲಿ ನಿಂತ ವೃದ್ಧ ತಂದೆ-ತಾಯಿ, ಪ್ರೀತಿಯಲ್ಲಿ ಸೋತು ಸಾಯಲು ಹೊರಡುವ ಭಗ್ನಪ್ರೇಮಿ, ಡ್ರಗ್ಸ್‌ ಮಾಫಿಯಾ, ಲೋಕಲ್‌ ರೌಡಿಸಂ.. ಹೀಗೆ ಒಂದಕ್ಕೊಂದು ನಂಟು ಬೆಸೆದ ಹತ್ತಾರು ವಿಷಯಗಳನ್ನು ಇಟ್ಟುಕೊಂಡು ಇಡೀ ಸಿನಿಮಾವನ್ನು ತೆರೆಮೇಲೆ ಕಟ್ಟಿಕೊಡಲಾಗಿದೆ.

ಸಿನಿಮಾದಲ್ಲಿ ಸಾಕಷ್ಟು ಟ್ವಿಸ್ಟ್‌, ಟರ್ನ್ಗಳು, ಕುತೂಹಲ ಎಲ್ಲವೂ ಒಟ್ಟಿಗೇ ಇರುವುದರಿಂದ ಪ್ರೇಕ್ಷಕ ಸಾವಧಾನವಾಗಿ ಸಿನಿಮಾ ಅರ್ಥ ಮಾಡಿಕೊಳ್ಳುವ ಸವಾಲು ಕೂಡಾ ಇಲ್ಲಿದೆ. ಒಂದು ದೃಶ್ಯವನ್ನು ಮಿಸ್‌ ಮಾಡಿಕೊಂಡರೂ, ಸಿನಿಮಾದ ಮುಂದಿನ ದೃಶ್ಯಗಳು ಅರ್ಥಮಾಡಿಕೊಂಡು ಕೂರುವುದು ಕಷ್ಟ. ಅಷ್ಟರ ಮಟ್ಟಿಗೆ ನಿರ್ದೇಶಕರು ಚಿತ್ರಕಥೆ ಮತ್ತು ನಿರೂಪಣೆಯಲ್ಲಿ ತಮ್ಮ ಜಾಣ್ಮೆ ಮತ್ತು ಬುದ್ಧಿವಂತಿಕೆ ಎರಡನ್ನೂ ಪ್ರದರ್ಶಿಸಿದ್ದಾರೆ. ಬಹುಶಃ ಇಂಥದ್ದೊಂದು ಚಾತುರ್ಯವೇ ಇಡೀ ಸಿನಿಮಾದ ಹೈಲೈಟ್‌ ಎಂದರೂ ತಪ್ಪಾಗಲಾರದು. ಇಂಥ ಅಂಶಗಳಿಂದಲೇ “ಧರಣಿ ಮಂಡಲ ಮಧ್ಯದೊಳಗೆ’ ಥ್ರಿಲ್ಲಿಂಗ್‌ ಅನುಭವ ನೀಡಿ ಥಿಯೇಟರ್‌ ಹೊರಗೂ ಕೆಲಹೊತ್ತು ಕಾಡುತ್ತದೆ.

ಬಾಕ್ಸಿಂಗ್‌ ಪಟುವಾಗಿ ಕೊಂಚ ಸೀರಿಯಸ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಾಯಕ ನವೀನ್‌ ಶಂಕರ್‌, ತನ್ನ ಮ್ಯಾನರಿಸಂ, ಫೈಟ್ಸ್‌ ಎರಡರಲ್ಲೂ ಸೈ ಎನಿಸಿಕೊಂಡಿದ್ದಾರೆ. ನಾಯಕಿ ಐಶಾನಿ ಶೆಟ್ಟಿ ಡ್ರಗ್ಸ್‌ ವ್ಯಸನಿಯಾಗಿ ತೆರೆಮೇಲೆ ಇರುವಷ್ಟು ಕಾಲ ಇಷ್ಟವಾಗುತ್ತಾರೆ. ಯಾರಧ್ದೋ ಯಡವಟ್ಟಿಗೆ ತಲೆ ಕೊಡುವಂತಾಗುವ ಯಶ್‌ ಶೆಟ್ಟಿ, ಲವಲವಿಕೆಯ ಹುಡುಗನಾಗಿ ಸಿದ್ದು ಮೂಲಿಮನಿ, ಲೋಕಲ್‌ ಡಾನ್‌ ಆಗಿ ಓಂಕಾರ್‌, ಡ್ರಗ್‌ ಪೆಡ್ಲರ್‌ ಆಗಿ ಬಲರಾಜವಾಡಿ, ಅಲ್ಲಲ್ಲಿ ಹಾಸ್ಯದ ಹೊನಲು ಹರಿಸುವ ಪ್ರಕಾಶ್‌ ತುಮ್ಮಿನಾಡು ತಮ್ಮ ಪಾತ್ರಗಳಿಗೆ ಫ‌ುಲ್‌ ಮಾರ್ಕ್ಸ್ ಪಡೆದುಕೊಳ್ಳುತ್ತಾರೆ. ಉಳಿದಂತೆ ಬಹುತೇಕ ಕಲಾವಿದರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ತಾಂತ್ರಿಕವಾಗಿ ಸಿನಿಮಾದ ಛಾಯಾಗ್ರಹಣ ಮತ್ತು ಸಂಕಲನ ಕಾರ್ಯ ಗಮನ ಸೆಳೆಯುತ್ತದೆ. ಮಹಾನಗರದ ಜನಜೀವನದ ಚಿತ್ರಣ ಫ್ರೇಮ್‌ ನಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿದೆ. ಉಳಿದಂತೆ ಎರಡು ಹಾಡುಗಳು, ಹಿನ್ನೆಲೆ ಸಂಗೀತ, ರೀ-ರೆಕಾರ್ಡಿಂಗ್‌, ಕಲರಿಂಗ್‌ ಹೀಗೆ ತೆರೆಮರೆಯ ತಾಂತ್ರಿಕ ಕೆಲಸಗಳ ಗುಣಮಟ್ಟ ತೆರೆಮೇಲೆ ಎದ್ದು ಕಾಣುತ್ತದೆ.

Advertisement

 ಜಿ.ಎಸ್‌.ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next