ಬೆಳ್ತಂಗಡಿ: ಅರ್ಹರಿಗೆ ಪದವಿ ಸಿಕ್ಕಾಗ ಪದವಿಗೆ ಗೌರವ ಸಲ್ಲುತ್ತದೆ. ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಹೃದಯದಲ್ಲೇ ಧರ್ಮಸ್ಥಳ ನೆಲೆಸಿದೆ. ಅದಕ್ಕಾಗಿ ಸಾಮಾನ್ಯ ಜನ ಆರೇಳು ಜನ್ಮವೆತ್ತು ಸಾಧಿಸಬಹುದಾದ ಸೇವೆಯನ್ನು ಪೂಜ್ಯರು ಕೇವಲ ಒಂದೇ ಜೀವನದಡಿ ಜನಕಲ್ಯಾಣ ಸೇವಾ ಬಾಹುಳ್ಯವನ್ನು ಸಮಾಜಕ್ಕೆ ಅರ್ಪಿಸಿದ್ದಾರೆ ಎಂದು ಖ್ಯಾತ ಚಲನಚಿತ್ರ ನಟ ರಮೇಶ್ ಅರವಿಂದ್ ಬಣ್ಣಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಬುಧವಾರ ನಡೆದ ಡಾ| ಡಿ. ವೀರೇಂದ್ರ ಹೆಗ್ಗಡೆ ಹಾಗೂ ಡಾ| ಹೇಮಾವತಿ ವೀ. ಹೆಗ್ಗಡೆಯವರ ಗೌರವಾರ್ಪಣೆ ಕಾರ್ಯಕ್ರಮ “ಸಂಭ್ರಮದ ಸಂಗಮ’ ಕಾರ್ಯಕ್ರಮದ ಭಾಗವಹಿಸಿ ಅವರು ಮಾತನಾಡಿದರು.
ಡಾ| ಹೆಗ್ಗಡೆಯವರ ಸಮಚಿತ್ತ, ನಿರ್ಲಿಪ್ತ ಮನೋಭಾವ, ಶಾಂತಾ ಸ್ವಭಾವ, ಆದರ್ಶ ಅನುಕರಣೀಯವಾಗಿದೆ. ಹೆಗ್ಗಡೆಯವರು ರಾಜ್ಯಸಭಾ ಸದಸ್ಯರಾಗುವ ಮೂಲಕ ಈ ಭಾಗದ ಜನತೆಯ ಕನಸು ಈಡೇರುವ ವಿಶ್ವಾಸವಿದೆ ಎಂದ ಅವರು, ದೇವರು ಎಲ್ಲೆಡೆ ಇರಲು ಸಾಧ್ಯವಿಲ್ಲ ಎಂಬುದಕ್ಕೆ ತಾಯಿಯನ್ನು ಸೃಷ್ಟಿಸಿದ. ಎಲ್ಲರ ಮಾತೆಯಾಗಿ ಮಾತೃಶ್ರೀ ಹೇಮಾವತಿ ಅಮ್ಮನವರು ರಾಜ್ಯದ ಸಾವಿರಾರು ಕುಟುಂಬಕ್ಕೆ ವಾತ್ಸಲ್ಯ ಕರುಣಿಸಿದ್ದಾರೆ. ಹೆಗ್ಗಡೆ ದಂಪತಿ ಯುಗ ಯುಗಕ್ಕೂ ಆದರ್ಶಪ್ರಾಯರು ಎಂದರು.
ಗೌರವಾಭಿನಂದನೆ ಸ್ವೀಕರಿಸಿದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಧರ್ಮಸ್ಥಳವನ್ನು ಭಕ್ತರು ತಮ್ಮದೇ ಕ್ಷೇತ್ರ ಎಂದು ಶ್ರದ್ಧಾ -ಭಕ್ತಿ ತೋರಿದ್ದರಿಂದ ಸಾನ್ನಿಧ್ಯ ಕಳೆ ಹೆಚ್ಚಿದೆ. ಪತ್ನಿ ಹೇಮಾವತಿ ವೀ. ಹೆಗ್ಗಡೆ, ಸಹೋದರರ ಹಾಗೂ ಕುಟುಂಬ ಸದಸ್ಯರ ಸಕ್ರಿಯ ಸಹಕಾರ ಮತ್ತು ನೌಕರರ ಪ್ರಾಮಾಣಿಕ ಹಾಗೂ ನಿಷ್ಠೆಯ ಸೇವೆಯಿಂದ ತನ್ನ ಎಲ್ಲ ಕಾರ್ಯಗಳು ಸುಗಮವಾಗಿವೆ ಎಂದರು.
Related Articles
52 ಲಕ್ಷ ಮಂದಿಗೆ ಬೆಳಕು
ಅಭಿನಂದನೆಗೆ ಕೃತಜ್ಞತೆ ಸಲ್ಲಿಸಿದ ಹೇಮಾವತಿ ವೀ. ಹೆಗ್ಗಡೆಯವರು, ದೀಪದಡಿ ಕತ್ತಲು ಎನ್ನುತ್ತಾರೆ, ಆದರೆ ಧರ್ಮಸ್ಥಳದ ದೀಪದಡಿ ಎಂದಿಗೂ ಬೆಳಕು ವಿಜೃಂಭಿಸುತ್ತದೆ.
ಮಂಜುನಾಥನ ಗುಡಿಯಿಂದ ಹೊರಟ ಮಾದರಿ ಸೇವಾ ಕಾರ್ಯಗಳ ಬೆಳಕು ಇಂದು 52 ಲಕ್ಷ ಮಂದಿಗೆ ತಲುಪುವಂತಾಗಿದೆ. ಹೆಗ್ಗಡೆಯವರ ಕರ್ತವ್ಯವೆಂಬ ಪಟ್ಟದಿಂದ ರಾಜ್ಯದೆಲ್ಲೆಡೆ ಓಡಾಡಿ ಭಿತ್ತಿದ ಪ್ರೀತಿ ವಿಶ್ವಾಸದ ಬೆಳೆ ನಮಗಿಂದು ಅಭಿಮಾನದ ರೂಪದಲ್ಲಿ ಫಲ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಅರ್ಚನಾ ರಮೇಶ್ ಅರವಿಂದ್, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಾ| ನಿರಂಜನ ಕುಮಾರ್, ಪದ್ಮಲತಾ, ಶ್ರದ್ಧಾ ಅಮಿತ್, ಶಾಸಕ ಹರೀಶ್ ಪೂಂಜ, ಶ್ರೇಯಸ್, ನಿಶ್ಚಲ್ ಹಾಗೂ ಹೆಗ್ಗಡೆ ಕುಟುಂಬಸ್ಥರು ಉಪಸ್ಥಿತರಿದ್ದರು.
ಎಸ್‌ಕೆಡಿಆರ್‌ಡಿಪಿ ಕಾ.ನಿ. ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ್ ಸ್ವಾಗತಿಸಿ, ಪ್ರಾ. ನಿರ್ದೇಶಕ ಆನಂದ ಸುವರ್ಣ ನಿರ್ವಹಿಸಿದರು.
ಹೈನುಗಾರರ ಪ್ರಗತಿಗೆ 6 ಕೋ.ರೂ. ಸಂಸದ ನಿಧಿ
ಧರ್ಮಸ್ಥಳದ ವತಿಯಿಂದ ಅನ್ನದಾನ, ವಿದ್ಯಾದಾನ, ಅಭಯದಾನ ಮತ್ತು ಔಷಧ ದಾನದ ಜತೆಗೆ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಕ್ಕೆ ಪ್ರತೀವರ್ಷ 4 ಕೋಟಿ ರೂ. ನೆರವು ನೀಡಲಾಗುತ್ತದೆ ಎಂದು ಹೇಳಿದರು. ತಮಗೆ ಸಿಗುವ 6 ಕೋಟಿ ರೂ. ಸಂಸದರ ನಿಧಿಯನ್ನು ಬೀದರ್ ಜಿಲ್ಲೆ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಹಾಲು ಉತ್ಪಾದನ ಸಹಕಾರಿ ಸಂಘಗಳ ಪ್ರಗತಿಗೆ ವಿನಿಯೋಗಿಸಲಾಗುವುದು ಡಾ| ಹೆಗ್ಗಡೆ ಘೋಷಿಸಿದರು.
ಸಂಭ್ರಮದ ಸಂಗಮ ವಿಶೇಷ
ಡಾ| ಹೆಗ್ಗಡೆ ದಂಪತಿಯ ವೈವಾಹಿಕ ಜೀವನದ ಸುವರ್ಣ ಸಂಭ್ರಮ, ಹೆಗ್ಗಡೆಯವರು 75ನೇ ಸಂವತ್ಸರಕ್ಕೆ ಪಾದಾರ್ಪಣೆಗೊಂಡ ಸಂಭ್ರಮ, ಹೆಗ್ಗಡೆಯವರನ್ನು ಪ್ರಧಾನಿಯವರು ರಾಜ್ಯಸಭಾ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿರುವ ಸಂಭ್ರಮ ಮತ್ತು ಹೇಮಾವತಿ ವೀ. ಹೆಗ್ಗಡೆಯವರಿಗೆ ಮಂಗಳೂರು ವಿ.ವಿ. ಗೌರವ ಡಾಕ್ಟರೆಟ್ ನೀಡಿರುವ ಸಂಭ್ರಮವನ್ನು ದೇಗುಲದ ಸಿಬಂದಿ ಮತ್ತು ಸಮಸ್ತ ನಾಗರಿಕರು ಆಯೋಜಿಸಿ ಹೆಗ್ಗಡೆ ದಂಪತಿಗೆ ಶ್ರದ್ಧಾ – ಭಕ್ತಿಯಿಂದ ಅಭಿನಂದನೆ ಅರ್ಪಿಸಿದರು.