ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಾನದಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವದ ಎರಡನೇ ದಿನದ ರಾತ್ರಿ ಕೆರೆಕಟ್ಟೆ ಉತ್ಸವವು ಧರ್ಮಾಧಿಕಾರಿ ಡಾ| ಡಿ. ವಿರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ನೆರವೇರಿತು.
ದೇವಸ್ಥಾನದ ಅಂಗಣದಲ್ಲಿ ಸ್ವಾಮಿಗೆ ವೈದಿಕರಿಂದ ಪೂಜೆ ನಡೆದು ಸಂಪ್ರದಾಯದಂತೆ ಆಲಂಕೃತ ಪಲ್ಲಕ್ಕಿಯಲ್ಲಿ ಮಂಜುನಾಥ ಸ್ವಾಮಿಯನ್ನು ಇರಿಸಿ 16 ಸುತ್ತು ಪ್ರದಕ್ಷಿಣೆ ನೆರವೇರಿತು. ಬಳಿಕ ಗಜಪಡೆ, ಪಂಜು, ಗೊಂಬೆಗಳ ಮೆರವಣಿಗೆಯ ಜತೆಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಪಲ್ಲಕ್ಕಿಯಲ್ಲಿ ಕೆರೆಕಟ್ಟೆಗೆ 5 ಸುತ್ತು ಪ್ರದಕ್ಷಿಣೆ, ಸಂಗೀತ, ನಾದಸ್ವರ ಸಹಿತ ಪೂಜೆ ನೆರವೇರಿತು. ದಾರಿಯುದ್ದಕ್ಕೂ ಭಕ್ತರು ಹಣತೆ ದೀಪ ಬೆಳಗಿದರು. ಬಳಿಕ ದೇವರನ್ನು ಬೆಳ್ಳಿರಥದಲ್ಲಿ ಕುಳ್ಳಿರಿಸಿ ಮಂಗಳಾರತಿ ಬೆಳಗಿ, ದೇಗುಲಕ್ಕೆ ಪ್ರದಕ್ಷಿಣೆಯೊಂದಿಗೆ ಗುಡಿಗೆ ಕರೆತರುವ ಮೂಲಕ ಕೆರೆಕಟ್ಟೆ ಉತ್ಸವ ಪೂರ್ಣಗೊಂಡಿತು.
ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ನ. 21ರ ಸೋಮವಾರ ದೀಪೋತ್ಸವದ ಮೂರನೇ ದಿನ ರಾತ್ರಿ ಶ್ರೀ ಮಂಜುನಾಥ ಸ್ವಾಮಿಗೆ ಲಲಿತೋದ್ಯಾನ ಉತ್ಸವ ನೆರವೇರಿತು.
Related Articles
ಇಂದು ಸರ್ವಧರ್ಮ ಸಮ್ಮೇಳನ: ಉದ್ಘಾಟನೆಗೆ ಸಚಿವೆ ಸ್ಮೃತಿ ಇರಾನಿ:
ನ. 22ರಂದು ಸರ್ವಧರ್ಮ ಸಮ್ಮೇಳನ ನಡೆಯಲಿದ್ದು, ಸಂಜೆ 5ರಿಂದ ಅಮೃತವರ್ಷಿಣಿ ಸಭಾಭವನದಲ್ಲಿ 90ನೇ ಅಧಿವೇಶನವನ್ನು ಕೇಂದ್ರ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯ ಮತ್ತು ಅಲ್ಪಸಂಖ್ಯಾಕ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಉದ್ಘಾಟಿಸುವರು. ಬಹುಶ್ರತ ವಿದ್ವಾಂಸ, ಶಿವಮೊಗ್ಗದ ನ್ಯಾಯವಾದಿ ಎಂ.ಆರ್. ಸತ್ಯನಾರಾಯಣ ಅಧ್ಯಕ್ಷತೆ ವಹಿಸುವರು. ಬಸ್ರಿಕಟ್ಟೆ ಧರ್ಮಗುರು ಫಾ| ಮಾರ್ಸೆಲ್ ಪಿಂಟೋ, ವಿಜಯಪುರ ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ಇ ವಾಲೀಕಾರ, ವಿಶ್ರಾಂತ ಮುಖ್ಯೋಪಾಧ್ಯಯ ಮೂಡುಬಿದಿರೆಯ ಮುನಿರಾಜ ರೆಂಜಾಳ ಉಪನ್ಯಾಸ ನೀಡಲಿದ್ದಾರೆ.