Advertisement

ಧರ್ಮಸ್ಥಳ ಉಜಿರೆ ಸಮೀಪ ಮಿನಿ ವಿಮಾನ ನಿಲ್ದಾಣಕ್ಕೆ ಶೀಘ್ರ ಅಡಿಗಲ್ಲು

08:51 PM Sep 09, 2022 | Team Udayavani |

ಬೆಂಗಳೂರು: ಧರ್ಮಸ್ಥಳದ ಉಜಿರೆ ಸಮೀಪ ಮಿನಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಆದಷ್ಟು ಬೇಗ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ವಸತಿ ಹಾಗೂ ಮೂಲಸೌಕರ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿ, ಈ ಸಂಬಂಧ ಸ್ಥಳ ಪರಿಶೀಲನೆಗೆ ಅಧಿಕಾರಿಗಳ ತಂಡ ಕಳುಹಿಸಲಾಗಿದೆ. 100 ಎಕರೆ ಜಾಗ ಗುರುತಿಸಿ ಸುಸಜ್ಜಿತ ಮಿನಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗುವುದು. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಪ್ರವಾಸಿ ಕಾರಿಡಾರ್‌ ಅಭಿವೃದ್ಧಿಗೆ ತೀರ್ಮಾನಿಸಲಾಗಿದ್ದು, ಈ ನಿಟ್ಟಿನಲ್ಲಿ ವಿಮಾನ ನಿಲ್ದಾಣಕ್ಕೂ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದ ಅತಿ ಉದ್ದದ ರೈಲ್ವೇ ಸುರಂಗ ಮಾರ್ಗ ನಿರ್ಮಾಣಕ್ಕೆ ಹಸಿರು ನಿಶಾನೆ ಸಿಕ್ಕಿದೆ.

ಕನಕಪುರದಿಂದ ತಮಿಳುನಾಡಿನ ಸೇಲಂಗೆ ಹೊಸ ರೈಲು ಸಂಪರ್ಕ ಕಲ್ಪಿಸುವ ಯೋಜನೆಗೆ ಸಂಬಂಧಿಸಿದಂತೆ ಸರ್ವೇ ಕಾರ್ಯ ಆರಂಭಗೊಂಡಿದೆ. ಕನಕಪುರ-ಮಳವಳ್ಳಿ-ಕೊಳ್ಳೇಗಾಲ-ಯಳಂದೂರು-ಸತ್ಯೆಗಾಲ -ಈರೋಡ್‌ ಮೂಲಕ ಸೇಲಂಗೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ ಎಂದರು.

ಯಳಂದೂರಿನಿಂದ ತಮಿಳುನಾಡಿನ ಈರೋಡ್‌ ನಡುವೆ ಅರಣ್ಯ ಪ್ರದೇಶ ಇರುವುದರಿಂದ ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳಲು ನೆಲದಡಿ ಸುರಂಗ ಮಾರ್ಗದ ಮೂಲಕ 9 ಕಿ.ಮೀ. ದೂರ ರೈಲು ಸಂಚರಿಸಲಿದೆ. ಯೋಜನೆ ಅನುಷ್ಠಾನಗೊಂಡ ನಂತರ ಈ ಮಾರ್ಗದಲ್ಲಿ ಸಂಚರಿಸುವವರಿಗೆ 62 ಕಿ.ಮೀ.ದೂರ ಕಡಿಮೆಯಾಗಲಿದೆ ಎಂದರು.

Advertisement

ಕೇರಳದ ತಲಚ್ಚೇರಿಯಿಂದ ಚಾಮರಾಜನಗರಕ್ಕೆ ರೈಲು ಸಂಪರ್ಕಿಸುವ ಯೋಜನೆಗೆ ರಾಜ್ಯ ಸರ್ಕಾರ ಅನುಮತಿ ನೀಡುವುದಿಲ್ಲ. ಈ ಮಾರ್ಗದಲ್ಲಿ ನಾಗರಹೊಳೆ ಮತ್ತು ಬಂಡೀಪುರ ಸಂರಕ್ಷಿತ ಅರಣ್ಯ ಪ್ರದೇಶದ 22 ಕಿಮೀ ಉದ್ದದಷ್ಟು ರೈಲ್ವೇ ಸುರಂಗ ಮಾರ್ಗ ರೂಪಿಸಲು ಕೇರಳ ಸರ್ಕಾರ ಯೋಜನೆ ರೂಪಿಸಿ ಅನುಮತಿ ನೀಡಿದೆ. ಆದರೆ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಇಷ್ಟು ಬೃಹತ್‌ ಗಾತ್ರದ ಸುರಂಗ ಮಾರ್ಗ ನಿರ್ಮಿಸುವುದು ಸುರಕ್ಷಿತವಲ್ಲ, ಹಾಗೊಂದು ವೇಳೆ ಇದರ ನಿರ್ಮಾಣಕ್ಕೆ ಅನುಮತಿ ನೀಡಿದರೆ ಅರಣ್ಯ ಪ್ರದೇಶಕ್ಕೆ ಧಕ್ಕೆ ಆಗುತ್ತದೆ. ವನ್ಯ ಜೀವಿಗಳಿಗೆ ಹಾನಿಯಾಗುತ್ತದೆ ಎಂದು ಹೇಳಿದರು.

ಮಲೆ ಮಹದೇಶ್ವರ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಹುಲಿ ಸಂರಕ್ಷಿತ ಪ್ರದೇಶ ಯೋಜನೆಗೆ ಅನುಮತಿ ನೀಡದೇ ಇರಲು ತೀರ್ಮಾನಿಸಲಾಗಿದೆ ಇದೇ ಸಂದರ್ಭದಲ್ಲಿ ತಿಳಿಸಿದರು.

ರಾಯಚೂರು ವಿಮಾನ ನಿಲ್ದಾಣ ನಿರ್ಮಾಣ ಕಾರ್ಯಕ್ಕೆ ಈ ತಿಂಗಳ 18ರಂದು ಅಡಿಗಲ್ಲು ಹಾಕುತ್ತಿದ್ದು, ಶಿವಮೊಗ್ಗದ ವಿಮಾನ ನಿಲ್ದಾಣ ಈ ವರ್ಷಾಂತ್ಯದ ವೇಳೆಗೆ ಜನ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next