ಹೊಸದಿಲ್ಲಿ: ಒಂದು ವೇಳೆ ಬೆಂಗಳೂರಿನಲ್ಲಿ ಕೋವಿಡ್-19 ಸೋಂಕು ಹತೋಟಿಗೆ ಬಾರದೇ ಹೋದರೆ ಧರ್ಮಶಾಲಾವನ್ನು ಕ್ರಿಕೆಟ್ ಶಿಬಿರಗಳಿಗಾಗಿ ಮೀಸಲು ತಾಣವನ್ನಾಗಿ ಆರಿಸಬಹುದು ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಹೇಳಿದ್ದಾರೆ.
ಯಾವುದೇ ಕೋವಿಡ್-19 ಪ್ರಕರಣವನ್ನು ಹೊಂದಿರದ ಧರ್ಮಶಾಲಾ “ಸುರಕ್ಷಿತ ವಲಯ’ದಲ್ಲಿರುವುದೇ ಇದಕ್ಕೆ ಕಾರಣ ಎಂದಿದ್ದಾರೆ.
ಮೇ 25ರಿಂದ ದೇಶಿ ವಿಮಾನಗಳ ಹಾರಾಟ ಆರಂಭವಾಗುವುದರಿಂದ ಕ್ರಿಕೆಟಿಗರ ಪ್ರಯಾಣಕ್ಕೆ ಅನುಕೂಲವಾಗಲಿದೆ ಎಂಬುದು ಹಿಮಾಚಲ ಪ್ರದೇಶ ಕ್ರಿಕೆಟ್ ಮಂಡಳಿಯ ಸದಸ್ಯರೂ ಆಗಿರುವ ಧುಮಾಲ್ ಅವರ ಅಭಿಪ್ರಾಯ.
“ಇದು ನನ್ನ ವ್ಯಾಪ್ತಿಯ ರಾಜ್ಯ ಕ್ರಿಕೆಟ್ ಮಂಡಳಿಯಾಗಿರುವ ಕಾರಣ ಇದರಲ್ಲಿ ನಾನು ಮಧ್ಯ ಪ್ರವೇಶಿಸುವಂತಿಲ್ಲ. ಕ್ರಿಕೆಟ್ ಶಿಬಿರಗಳಿಗೆ ಮೀಸಲು ತಾಣವಾಗಿ ಧರ್ಮಶಾಲಾವನ್ನು ಬಿಸಿಸಿಐ ಪರಿಗಣಿಸಬಹುದು ಎಂದಷ್ಟೇ ನಾನು ಹೇಳಬಹುದು. ಇಲ್ಲಿ ಎಲ್ಲ ಮೂಲಭೂತ ಸೌಲಭ್ಯಗಳೂ ಇವೆ. ಭಾರತೀಯ ಕ್ರಿಕೆಟಿಗರು ತಂಗುವ “ಹೊಟೇಲ್ ಪೆವಿಲಿಯನ್’ ಕೂಡ ನಮ್ಮ ಕ್ರಿಕೆಟ್ ಮಂಡಳಿಯದ್ದಾಗಿದೆ’ ಎಂದು ಅರುಣ್ ಧುಮಾಲ್ ಹೇಳಿದರು.
ಭಾರತದಲ್ಲಿ ಕೋವಿಡ್-19 ಪೀಡಿತರ ಸಂಖ್ಯೆ 1.3 ಲಕ್ಷಕ್ಕೆ ಏರಿದರೂ ಹಿಮಾಚಲ ಪ್ರದೇಶದಲ್ಲಿ ಕಂಡುಬಂದದ್ದು 150 ಕೇಸ್ ಮಾತ್ರ. ಹೀಗಾಗಿ ಬೆಂಗಳೂರು ಬದಲು ಧರ್ಮಶಾಲಾದಲ್ಲಿ ಕ್ರಿಕೆಟ್ ಶಿಬಿರ ನಡೆಸುವುದು ಹೆಚ್ಚು ಸುರಕ್ಷಿತ ಎಂಬುದೊಂದು ಲೆಕ್ಕಾಚಾರ.