ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎನ್.ಧರಂಸಿಂಗ್(80ವರ್ಷ) ಅವರು ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಗುರುವಾರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ನಾಳೆ ಕಲಬುರಗಿಯ ಜೇವರ್ಗಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಧರಂ ಪುತ್ರ ವಿಜಯ್ ಸಿಂಗ್ ತಿಳಿಸಿದ್ದಾರೆ.
ಸಂಜೆ ಜೇವರ್ಗಿಗೆ ಧರಂಸಿಂಗ್ ಅವರ ಪಾರ್ಥಿವ ಶರೀರ ರವಾನೆಯಾಗಲಿದೆ. ಜೇವರ್ಗಿಯಲ್ಲಿ ನಾಳೆ ಸಂಜೆಯವರೆಗೂ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ.
ಮಾಜಿ ಸಿಎಂ ಧರಂಸಿಂಗ್ ನಿಧನದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೂರು ದಿನಗಳ ಕಾಲ ಶೋಕಾಚರಣೆ. ರಾಜ್ಯ ಸರ್ಕಾರ ಇಂದು ಮಧ್ಯಾಹ್ನದಿಂದ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದೆ. ನಾಳೆ ಹೈದ್ರಾಬಾದ್ ಕರ್ನಾಟಕ ಜಿಲ್ಲೆಯ ಎಲ್ಲಾ ಶಾಲಾ,ಕಾಲೇಜುಗಳಿಗೆ ರಜೆ.
1936ರ ಡಿಸೆಂಬರ್ 25ರಂದು ಧರಂಸಿಂಗ್ ಅವರು ಜೇವರ್ಗಿ ತಾಲೂಕಿನ ನೇಲೋಗಿ ಗ್ರಾಮದಲ್ಲಿ ಜನನ. ಧರಂ ಸಿಂಗ್ ಅವರು ಉಸ್ಮಾನಿಯಾ ಯೂನಿರ್ವಸಿಟಿಯಲ್ಲಿ ಎಂಎ ಹಾಗೂ ಎಲ್ ಎಲ್ ಬಿ ಪದವಿಗಳನ್ನು ಪಡೆದಿದ್ದರು. ಕೆಲ ಕಾಲ ವಕೀಲರಾಗಿ ಕಾರ್ಯನಿರ್ವಹಿಸಿದ್ದ ಧರಂ ಸಿಂಗ್ ಅವರು 60 ರ ದಶಕದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು.
ಇವರು ಗುಲ್ಬರ್ಗಾ ಜಿಲ್ಲೆಯ ಜೇವರ್ಗಿ ವಿಧಾನಸಭಾ ಕ್ಷೇತ್ರದಿಂದ 7 ಬಾರಿ ಶಾಸಕರಾಗಿ ಹಾಗೂ ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. 2004ರಿಂದ 2006ರವರೆಗೆ ರಾಜ್ಯದ 17ನೇ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.
ಧರಂಸಿಂಗ್ ನಿಧನಕ್ಕೆ ಗಣ್ಯರ ಕಂಬನಿ:
ಮಾಜಿ ಮುಖ್ಯಮಂತ್ರಿ ಧರಂಸಿಂಗ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಜನಾರ್ದನ ಪೂಜಾರಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.