Advertisement

ಪ್ರತಿಪಕ್ಷಗಳಿಗೆ ಧರಂ ಸಂಕಟ

05:56 PM Apr 10, 2018 | |

ಕಲಬುರಗಿ: ಹೈದ್ರಾಬಾದ್‌ ಕರ್ನಾಟಕದಿಂದ ಎರಡನೇ ಸಿಎಂ ನೀಡಿದ ಹಾಗೂ ಧರ್ಮಸಿಂಗ್‌ ಅವರನ್ನು ಸತತ ಎಂಟು ಸಲ ಗೆಲ್ಲಿಸಿದ ಜೇವರ್ಗಿ ಮತಕ್ಷೇತ್ರದಲ್ಲಿ ಈ ಸಲ ಚುನಾವಣೆ ತಾರಕ್ಕೇರಿಸಿದೆ. ಧರ್ಮಸಿಂಗ್‌ ಅವರ ಪುತ್ರನಿಂದ ಕ್ಷೇತ್ರ ಬಿಡಿಸಿಕೊಳ್ಳಬೇಕು ಎಂದು ವಿಪಕ್ಷಗಳು ತಂತ್ರಗಾರಿಕೆ ನಡೆಸಿದ್ದರೆ, ಹಾಲಿ ಶಾಸಕ ಡಾ| ಅಜಯಸಿಂಗ್‌ ಅವರು ಶತಾಯಗತಾಯ ಈ ಸಲ ಗೆಲ್ಲಲೇಬೇಕು ಎಂದು ಪಣ ತೊಟ್ಟಿದ್ದರಿಂದ ಚುನಾವಣೆ ಯುದ್ಧ ಎನ್ನುವ ರೀತಿಯಲ್ಲಿ ಮಾರ್ಪಾಡಾಗಿದೆ. ಧರ್ಮಸಿಂಗ್‌ ಸಿಎಂ ಆಗುವವರೆಗೂ ಎಂಟು ಸಲ ಗೆಲ್ಲಿಸಿದ್ದ ಮತದಾರರು ನಂತರ ಬಿಜೆಪಿಗೆ ಜಯ ತಂದುಕೊಟ್ಟಿದ್ದರು. ತದನಂತರ ಧರ್ಮಸಿಂಗ್‌ ಅವರ ಮಗನನ್ನೇ ಕೈ ಹಿಡಿದಿದ್ದಾರೆ. ಜೇವರ್ಗಿ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿ ಮೂರು ಸಲ ಮಾತ್ರ ಕಾಂಗ್ರೆಸ್‌ ಗೆದ್ದಿಲ್ಲ. ಉಳಿದೆಲ್ಲ ಸಂದರ್ಭಗಳಲ್ಲಿ ಗೆಲುವು ಹೊಂದಿರುವುದು ಗಮನಾರ್ಹ ಸಂಗತಿ. ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಅವರ ಕ್ಷೇತ್ರವಾಗಿರುವ ಜೇವರ್ಗಿಯಲ್ಲಿ ಈ ಸಲ ಬಿಜೆಪಿ ಗೆಲ್ಲುವ ಮುಖಾಂತರ ಎರಡನೇ ಬಾರಿಗೆ ಕಮಲ ಅರಳಿಸಬೇಕು ಎಂದು ಹವಣಿಸುತ್ತಿದೆ. ಮತ್ತೂಂದೆಡೆ ರೈತ ನಾಯಕ ಕೇದಾರಲಿಂಗಯ್ಯ ಹಿರೇಮಠ ತಮ್ಮದು ಕೊನೆ ಚುನಾವಣೆ. 

Advertisement

ಈ ಸಾರೆ ಗೆಲ್ಲಲೇಬೇಕು ಎಂದು ಹಂಬಲಿಸಿ ಕಳೆದ ಮೂರ್‍ನಾಲ್ಕು ತಿಂಗಳಿನಿಂದ ಕ್ಷೇತ್ರದಲ್ಲಿಯೇ ಬಿಡಾರ ಹೂಡಿ ಹಗಲಿರಳು ಸಂಚರಿಸುತ್ತಿದ್ದಾರೆ. ಇದೇ ಕಾರಣಕ್ಕೆ ಜೇವರ್ಗಿ ಕ್ಷೇತ್ರದ ಈ ಸಲದ ಚುನಾವಣೆ ತನ್ನನ್ನು ನೋಡು ಎನ್ನುವಂತಾಗಿದೆ. ಕ್ಷೇತ್ರದಲ್ಲಿ ಒಂದು ಸುತ್ತು ಹಾಕಿದಾಗ ಕಾಂಗ್ರೆಸ್‌-ಜೆಡಿಎಸ್‌ ಹಾಗೂ ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿರುವುದು ಪ್ರಮುಖವಾಗಿ ಕಂಡು ಬರುತ್ತಿದೆ. ಇದರ ನಡುವೆ ಜೆಡಿಯು ಸ್ಪರ್ಧಿಸುತ್ತದೆ ಎಂಬ ಮಾತು ಕೇಳಿ ಬರುತ್ತಿದೆ. ಬಹು ಮುಖ್ಯವಾಗಿ ಶಿವಸೇನೆಯಿಂದ ಶ್ರೀರಾಮ ಸೇನೆಯ
ಆಂದೋಲಾದ ಸಿದ್ದಲಿಂಗ ಮಹಾಸ್ವಾಮಿಗಳು ಸಹ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಈ ಎಲ್ಲವುಗಳನ್ನು ಅವಲೋಕಸಿದರೆ ಜೇವರ್ಗಿ ಚುನಾವಣಾ ಅಖಾಡ ಮಹತ್ವ ಪಡೆದುಕೊಳ್ಳಲಿದೆ.

ಕ್ಷೇತ್ರದ ಬೆಸ್ಟ್‌ ಏನು?
120 ಕೋಟಿ ರೂ. ವೆಚ್ಚದಲ್ಲಿ 20 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಸಲುವಾಗಿ ವಸ್ತಾರಿ-ಹಿಪ್ಪರಗಾ ನಡುವೆ ಸೋಲಾರ್‌ ಪಾರ್ಕ್‌ ಸ್ಥಾಪನೆಯಾಗುತ್ತಿರುವುದು, ಬಹು ದಶಕಗಳ ಬೇಡಿಕೆಯಾಗಿರುವ ಕೋನಹಿಪ್ಪರ್ಗಾ-ಸರಡಗಿ ಸೇತುವೆ ಮುಗಿಯುವ ಹಂತಕ್ಕೆ ಬಂದಿರುವುದು, ಕ್ಷೇತ್ರದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಾಗಿರುವುದು, ನರಿಬೋಳ-ಚಾಮನಾಳ ನಡುವೆ ಭೀಮಾ ನದಿಗೆ ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಿರುವುದು, ಜೇವರ್ಗಿ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಕಾಮಗಾರಿಗೆ ಚಾಲನೆ ನೀಡಿರುವುದು ಉತ್ತಮ ಕಾರ್ಯಗಳು ಎನ್ನಬಹುದಾಗಿದೆ.

ಕ್ಷೇತ್ರದ ದೊಡ್ಡ ಸಮಸ್ಯೆ?
ಬಹಳ ವರ್ಷಗಳಿಂದ ನಿಂತಲ್ಲೇ ನಿಂತಿರುವ ಜೇವರ್ಗಿ ಪಟ್ಟಣದಲ್ಲಿನ ಫುಡ್‌ ಪಾರ್ಕ್‌ ಕಣ್ಣೆತ್ತಿ ನೋಡದಿರುವುದು ಹಾಗೂ ಫುಡ್‌ ಪಾರ್ಕ್‌ನ ಭೂಮಿ ನುಂಗಣ್ಣರ ಕಣ್ಣಿಗೆ ಬಿದ್ದಿರುವುದು ಕ್ಷೇತ್ರದಲ್ಲಿ ದೊಡ್ಡ ಸಮಸ್ಯೆಯಾಗಿದೆ. ಅದೇ ರೀತಿ ಮಲ್ಲಾಬಾದ ಏತ ನೀರಾವರಿ ಯೋಜನೆ ಕಾಮಗಾರಿ ವೇಗದ ಗತಿಯಲ್ಲಿ ನಡೆದು ಪೂರ್ಣಗೊಳ್ಳದಿರುವುದು, ಸಾವಿರಾರು ಕೋಟಿ ರೂ. ಅನುದಾನ ಬಂದಿದ್ದರೂ ಅನುಷ್ಠಾನದಲ್ಲಿ ಸ್ವಲ್ಪ ದೋಷ ಆಗಿರುವುದು ಕ್ಷೇತ್ರದ ಇತರ ಸಮಸ್ಯೆಗಳು ಎನ್ನಬಹುದಾಗಿದೆ.

ಶಾಸಕರು ಏನಂತಾರೆ?
ಹಲವು ದಶಕಗಳ ಬೇಡಿಕೆಯಾಗಿದ್ದ ಸರಡಗಿ-ಕೋನಹಿಪ್ಪರ್ಗಾ ಸೇತುವೆಗೆ ಹೆಚ್ಚಿನ ಆದ್ಯತೆ ನೀಡಿ ಅಗತ್ಯ ಅನುದಾನ ತಂದು ಕಾಮಗಾರಿ ಪೂರ್ಣಗೊಳಿಸಲು ಅವಿರತವಾಗಿ ಶ್ರಮಿಸಿರುವುದು, ಹಿಪ್ಪರಗಾ- ವಸ್ತಾರಿ ಬಳಿ 120 ಕೋಟಿ ರೂ. ವೆಚ್ಚದಲ್ಲಿ 20 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಸೋಲಾರ್‌ ಪಾರ್ಕ್‌ ಸ್ಥಾಪನೆಗೆ ಮುಂದಾಗಿರುವುದು, ಜೇವರ್ಗಿ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆಗೆ ಚಾಲನೆ ದೊರಕಿರುವುದು, ಆರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಾರ್ಯಾರಂಭವಾಗಿರುವುದು, ತಾಲೂಕಿನ ಬಹುತೇಕ ರಸ್ತೆಗಳನ್ನು ಅಭಿವೃದ್ಧಿ ಸೇರಿದಂತೆ ಇತರ ಕಾರ್ಯಗಳನ್ನು ಸಾಧ್ಯವಾದ ಮಟ್ಟಿಗೆ ಮಾಡಲಾಗಿದೆ.
ಡಾ.ಅಜಯಸಿಂಗ್‌

Advertisement

ಕ್ಷೇತ್ರ ಮಹಿಮೆ
ಷಣ್ಮುಖ ಶಿವಯೋಗಿಗಳ ಮಠ, ಮಹಾದಾಸೋಹಿ ಶರಣಬಸವೇಶ್ವರ ಜನ್ಮ ಸ್ಥಳ ಅರಳಗುಂಡಗಿ, ವಿಶ್ವಾರಾಧ್ಯರ ಜನ್ಮ ಸ್ಥಳ ಗಂವ್ಹಾರ, ತತ್ವಪದಕಾರ ರಾಮಪುರ ಬಕ್ಕಪ್ಪ ಪ್ರಭು, ಕಡಕೋಳ ಮಡಿವಾಳೇಶ್ವರ ಮಠ, ಚನ್ನೂರ ಜಲಾಲಸಾಬ, ರಾಸಣಗಿ ಹನುಮಾನ
ದೇವಾಲಯ, ಜೇವರ್ಗಿ ಪಟ್ಟಣದ ಮಹಾಲಕ್ಷ್ಮೀ, ಕೋಳಕೂರ ಸಿದ್ಧಬಸವೇಶ್ವರ, ಯನಗುಂಟಾ ಬೆಂಕಿತಾತಾ, ಸೊನ್ನ ಸಿದ್ಧಲಿಂಗೇಶ್ವರ ಮಠ ತಾಲೂಕಿನ ಪ್ರಮುಖ ಐತಿಹಾಸಿಕ ಹಾಗೂ ದೇವಸ್ಥಾನಗಳಾಗಿವೆ.

ಕಳೆದ 40 ವರ್ಷಗಳಲ್ಲಿ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ಅವರು ಮಾಡದ ಕೆಲಸ ಕಳೆದ 5 ವರ್ಷಗಳಲ್ಲಿ ಅವರ ಪುತ್ರ ಶಾಸಕ
ಡಾ| ಅಜಯಸಿಂಗ್‌ ಮಾಡಿದ್ದಾರೆ. ಸಾವಿರಾರು ಕೋಟಿ ರೂ. ಅನುದಾನ ತಂದು ತಾಲೂಕಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇದಕ್ಕೆ
ಕೋನಹಿಪ್ಪರಗಾ-ಸರಡಗಿ ಸೇತುವೆಯೇ ಪ್ರಮುಖ ಸಾಕ್ಷಿ. ಮುಂದಿನ ದಿನಗಳಲ್ಲಿ ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡುವ ಕೆಲಸವಾಗಬೇಕಿದೆ. 
ಗುರುನಾಥ ಅರಳಗುಂಡಗಿ

ಕಳೆದ ಚುನಾವಣೆ ಸಂದರ್ಭದಲ್ಲಿ ಶಾಸಕರು ಹಲವಾರು ಭರವಸೆ ನೀಡಿದ್ದರು. ಆದರೆ ಅವುಗಳಲ್ಲಿ ಹಲವು ಈಡೇರಿಲ್ಲ. ತಂದೆ
ಧರ್ಮಸಿಂಗ್‌ ಹೆಸರಿನಲ್ಲಿ ವಿವಿ, ಇಂಜನಿಯರಿಂಗ್‌ ಕಾಲೇಜು ಸ್ಥಾಪನೆ ಮಾಡುವುದಾಗಿ ಹೇಳಿದ್ದರು. ಜತೆಗೆ ಉನ್ನತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಿಲ್ಲ. ಅನುದಾನ ಸಾಕಷ್ಟು ಬಂದಿದೆ. ಆದರೆ ಅದು ಎಷ್ಟರ ಮಟ್ಟಿಗೆ ಸಾರ್ಥಕತೆಗೊಂಡಿದೆ ಎಂಬುದನ್ನು ಚಿಂತನೆ ನಡೆಯಬೇಕು.
ಮೋಹಿನುದ್ದೀನ್‌ ಇನಾಮ್‌ದಾರ್‌

ಜೇವರ್ಗಿ ತಾಲೂಕಿನ ಪ್ರಮುಖ ಯೋಜನೆಗಳಲ್ಲಿ ಒಂದಾದ ಮಲ್ಲಾಬಾದ ಏತ ನೀರಾವರಿ ಕಾಮಗಾರಿ ಕುಂಠಿತಗೊಂಡಿದೆ. ಬಹು ಮುಖ್ಯವಾಗಿ ಫುಡ್‌ ಪಾರ್ಕ್‌ ಕಾಮಗಾರಿ ಕಡೆ ಕಣ್ಣೆತ್ತಿ ಸಹ ನೋಡಿಲ್ಲ. ಶಾಸಕರು ಅಡಿಗಲ್ಲು ಹಾಕುವುದರತ್ತ ಹೆಚ್ಚು ಗಮನ ಹರಿಸಿದ್ದಾರೆ. ಆದರೆ ಕಾಮಗಾರಿ ಮುಗಿಯುವತ್ತ ಹಾಗೂ ಗುಣಮಟ್ಟದ ಕಡೆ ಗಮನಹರಿಸಿಲ್ಲ.
ರಾಜು ನಾಯಕ,

ಗುಡೂರು ಎಸ್‌ಎ ಶಾಸಕರು ಐದು ವರ್ಷದ ಅವಧಿಯಲ್ಲಿ ಒಂದೇ ಒಂದು ದಿನ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಲಿಲ್ಲ. ಕ್ಷೇತ್ರಕ್ಕೆ ಬಂದರೂ
ಬೆಂಬಲಿಗರೇ ಸುತ್ತುವರಿಯುತ್ತಿದ್ದರು. ಜನರೊಂದಿಗೆ ಇನ್ನಷ್ಟು ಬೆರೆತ್ತಿದ್ದರೆ ಮತ್ತಷ್ಟು ಅಭಿವೃದ್ಧಿಗೆ ಸಹಕಾರಿಯಾಗುತ್ತಿತ್ತು. ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಲು ಕಠಿಣ ಪರಿಶ್ರಮ ಅಗತ್ಯವಿದೆ. 
ಮಲ್ಲು ಲಕ್ಕಣ್ಣಿ,ಆಂದೋಲಾ

ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next