Advertisement
ಧನುರ್ಮಾಸದ ಆಚರಣೆ ಎಂದರೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು , ಸ್ನಾನ-ನಿತ್ಯ ಕರ್ಮಾದಿಗಳನ್ನು ಮುಗಿಸಿ ನಕ್ಷತ್ರಗಳು ಹೊಳೆಯುತ್ತಿರುವಾಗಲೇ ದೇವಾಲಯಗಳು ಬಾಗಿಲು ತೆರೆದು ಬೆಳಗಿನ ಪೂಜೆ ಆರಂಭಿಸಿ, ಸೂರ್ಯೋದಯಕ್ಕಿಂತ ಮುನ್ನವೇ ಮುಕ್ತಾಯವಾಗಬೇಕು. ಇದನ್ನು ಧನುಪೂಜೆ ಎಂದು ಕರೆಯುತ್ತಾರೆ. ಈ ಬಾರಿಯ ಧನುರ್ಮಾಸ ಡಿ.16ರಿಂದ ಪ್ರಾರಂಭವಾಗಿದ್ದು, ಜ. 14ರಂದು ಪೂರ್ಣಗೊಳ್ಳಲಿದೆ.
ಬೃಹತ್ ಸಾಮ ತಥಾ ಸಾಮ್ನಾಂ
ಗಾಯತ್ರೀ ಛಂದ ಸಾಮಹಮ್|
ಮಾಸಾನಾಂ ಮಾರ್ಗಶೀರ್ಷೋಹಂ
ಋತೂನಾಂ ಕುಸುಮಾಕರಃ||
ಅಂದರೆ, ವೇದಗಳಲ್ಲಿ ‘ಪ್ರಧಾನವಾದ ಬೃಹತ್ ಸಾಮವು ನಾನು, ಛಂದಸ್ಸುಗಳಲ್ಲಿ ಅತಿ ವಿಶಿಷ್ಟವಾದ ಗಾಯತ್ರಿ ಛಂದಸ್ಸು ನಾನು, ಮಾಸಗಳಲ್ಲಿ ಮಾರ್ಗಶೀರ್ಷ ಮಾಸವು ನಾನು, ಋತುಗಳಲ್ಲಿ ಚಿಗುರೊಡೆಯುವ ಋತು ವಸಂತವೂ ನಾನೇ ಆಗಿದ್ದೇನೆ’ ಎಂದು ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದ್ದಾನೆ.
Related Articles
ಒಮ್ಮೆ ಸೃಷ್ಟಿಕರ್ತರಾದ ಬ್ರಹ್ಮದೇವನು ಹಂಸ ಪಕ್ಷಿಯ ಅವತಾರದಲ್ಲಿ ಲೋಕ ಸಂಚಾರ ಮಾಡುತ್ತಿರುವಾಗ ಸೂರ್ಯದೇವನು ಹಂಸರೂಪಿ ಬ್ರಹ್ಮದೇವನ ಮೇಲೆ ಹೆಚ್ಚಿನ ಶಾಖ ಮತ್ತು ಬೆಳಕನ್ನು ಬಿಡುತ್ತಾನೆ. ಇದರಿಂದ ಕೋಪಗೊಂಡ ಹಂಸ ಸ್ವರೂಪಿ ಬ್ರಹ್ಮದೇವನು ನಿನ್ನ ತೇಜಸ್ಸು ಕ್ಷೀಣಿಸಲಿ ಎಂದು ಶಾಪ ಕೊಡುತ್ತಾನೆ.
Advertisement
ಸೂರ್ಯ ದೇವ ಕಾಂತಿಹೀನನಾಗಿ ತನ್ನ ಪ್ರಕಾಶ ಕಳೆದುಕೊಂಡನು. ಇದರಿಂದಾಗಿ ಭೂಮಂಡಲವೇ ಅಲ್ಲೋಲ ಕಲ್ಲೋಲವಾಯಿತು. ದೇವಾನುದೇವತೆಗಳು ಹಾಗೂ ಮುನಿವೃಂದವು ನಿತ್ಯ-ಪೂಜೆ ಹಾಗೂ ಹೋಮ ಹವನಾದಿಗಳನ್ನು ನಡೆಸದಂತಾಯಿತು. ಆಗ ಎಲ್ಲರೂ ಸೇರಿ ಬ್ರಹ್ಮ ದೇವರ ಕುರಿತು ತಪಸ್ಸು ಆಚರಿಸಿದರು. ಬ್ರಹ್ಮದೇವನು ಪ್ರತ್ಯಕ್ಷನಾಗಿ ಸ್ಥಿತಿ ಅರಿತು ಪರಿಹಾರ ಸೂಚಿಸುತ್ತಾನೆ.
ಸೂರ್ಯ ದೇವನು ಧನು ಮಾಸದ ಮೊದಲ ಜಾವದಲ್ಲಿ ಜಗದೊಡೆಯ ಶ್ರೀ ಮಹಾವಿಷ್ಣುವನ್ನು ಪೂಜಿಸುವಂತೆ ಸಲಹೆ ನೀಡಲಾಯಿತು. ಅಂತೆಯೇ ಸೂರ್ಯದೇವ ಧನುರ್ಮಾಸದ ಪೂಜೆಯನ್ನು ಬೆಳಗ್ಗಿನ ಜಾವದಲ್ಲಿ ಸತತ ಹದಿನಾರು ವರುಷಗಳ ಕಾಲ ನೇರವೆರಿಸಿದನು. ಶ್ರೀ ಮಾಹಾವಿಷ್ಣುವಿನ ಪೂರ್ಣಾನುಗ್ರಹದಿಂದ ಎಂದಿನಂತೆ ತೇಜಸ್ಸು ಹಾಗೂ ಕಾಂತಿಯಿಂದ ಜಗತ್ತನ್ನು ಬೆಳಗತೊಡಗಿದನು ಎಂದು ಪುರಾಣಗಳಿಂದ ತಿಳಿದುಬಂದಿದೆ. ಸೂರ್ಯದೇವ ಈ ಧನುರ್ಮಾಸದ ಪೂಜೆ ಮಾಡಿ ಜಗತ್ತಿಗೆ ಈ ಆಚರಣೆಯ ಮಹತ್ವ ತಿಳಿಯುವಂತೆ ಮಾಡಿದನು. ಈ ಮಾಸದ ಪುಣ್ಯ ಫಲ ಎಲ್ಲರಿಗೂ ಪ್ರಾಪ್ತಿಯಾಗಲಿ.
– ಸುಮುಖ ಪಂಡಿತ್