Advertisement

ಕೃಷಿ ಕೂಲಿ ಮಾಡುವ ದಾನೇಶ್ವರಿಗೆ ಜಿಲ್ಲಾಧಿಕಾರಿಯಾಗುವಾಸೆ!

10:38 PM Jun 23, 2022 | Team Udayavani |

ರಬಕವಿ-ಬನಹಟ್ಟಿ : ಸಾಗುವಳಿ ಮಾಡಲೂ ಸಾಧ್ಯವಾಗದೇ ಜೌಗು ಹಿಡಿದಿರುವ ಒಂದೆಕರೆಗೂ ಕಡಿಮೆ ಇರುವ ಜಮೀನು ಹೊಂದಿರುವ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಕುಲಹಳ್ಳಿ ಗ್ರಾಮದ ಗುರುಲಿಂಗಪ್ಪ ಚನಬಸಪ್ಪ ಜಂಬಗಿ ತನ್ನ ತಂದೆಯ ಹೃದ್ರೋಗಕ್ಕಾಗಿ ತೆರೆದ ಶಸ್ತ್ರ ಕ್ರಿಯೆ ಮಾಡಿಸಿ ಸಾಲ ಮಾಡಿದ್ದರೂ ಫಲಪ್ರದವಾಗದೇ ಸಾಲ ತುಂಬಲು ಹಾಗೂ ತಾಯಿಯ ಮಧುಮೇಹ ಮತ್ತು ಹೃದಯರೋಗಕ್ಕೆ ಚಿಕಿತ್ಸೆ ಮತ್ತು ಮಾತ್ರೆಗಳಿಗಾಗಿ ದಿನನಿತ್ಯ ಪತ್ನಿ ಸುನಂದಾ ಜತೆ ಅವರಿವರ ಜಮೀನುಗಳಲ್ಲಿ ಕೂಲಿ ಕೆಲಸ ಮಾಡುತ್ತ ಇಬ್ಬರು ಪುತ್ರಿಯರು, ಓರ್ವ ಪುತ್ರ ಸೇರಿದಂತೆ ಕುಟುಂಬದ ಒಟ್ಟು 6 ಜನರ ಉದರಪೋಷಣೆಗೆ ಹೆಣಗಾಡುತ್ತಿದ್ದಾನೆ.

Advertisement

ಈ ದಂಪತಿಗಳ ಹಿರಿಯ ಪುತ್ರಿ ದಾನೇಶ್ವರಿ ಮತ್ತಿಬ್ಬರು ಮಕ್ಕಳು ಓದಿನಲ್ಲಿ ತುಂಬ ಬುದ್ದಿವಂತರಾಗಿದ್ದಾರೆ. ಬಡತನದ ಬವಣೆಯಲ್ಲೂ ದಾನೇಶ್ವರಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಗ್ರಾಮದ ಸರ್ಕಾರಿ ಹೈಸ್ಕೂಲ್‌ನಲ್ಲಿ ಎಸ್ಸೆಎಲ್‌ಸಿ ಪರೀಕ್ಷಯಲ್ಲಿ ಶೇ.90 ಅಂಕ ಪಡೆದು ಕನ್ನಡ ವಿಷಯದಲ್ಲಿ 125 ಅಂಕಗಳನ್ನು ಗಳಿಸಿದ್ದಳು. ಮನೆಯಲ್ಲಿನ ಕಿತ್ತು ತಿನ್ನುವ ಬಡತನದ ಕಾರಣಕ್ಕೆ ವಿಜ್ಞಾನ ವಿಷಯ ಕಲಿಯುವ ಆಸೆಗೆ ತಿಲಾಂಜಲಿಯಿಟ್ಟು ನೆರೆಯ ಹುನ್ನೂರಿನ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ದಾಖಲಾದಳು. ನದಿ ತಟದಲ್ಲಿನ ವಾಸಿಸುವ ಶೆಡ್‌ನಿಂದ ಪ್ರತಿನಿತ್ಯ ಕನಿಷ್ಠ 4 ಕಿಮಿ ನಡೆಯುತ್ತ ಗ್ರಾಮದ ಬಸ್ ನಿಲ್ದಾಣಕ್ಕೆ ತೆರಳುವ ದಾನೇಶ್ವರಿ ಈ ಬಾರಿಯ ಪಿಯೂ ಪರೀಕ್ಷೆಯಲ್ಲಿ ಶೇ.95.9 ರಷ್ಟು ಅಂಕಗಳನ್ನು ಪಡೆಯುವ ಮೂಲಕ ಪರೀಕ್ಷಾ ಕೇಂದ್ರಕ್ಕೆ ಪ್ರಥಮಳಾಗಿದ್ದಾಳೆ. ಈಕೆಯ ಭವಿತವ್ಯದ ಶಿಕ್ಷಣಕ್ಕೆ ಬಡತನವೇ ಅಡ್ಡಿಯಾಗಿದೆ. ಪದವಿ ಶಿಕ್ಷಣದೊಡನೆ ಯುಪಿಎಸ್‌ಸಿ ಪರೀಕ್ಷೆ ಬರೆದು ಜಿಲ್ಲಾದಿಕಾರಿಯಾಗುವ ಕನಸು ಕಂಡಿರುವ ದಾನೇಶ್ವರಿಗೆ ಹಿರಿಯ ಐಪಿಎಸ್ ಅದಿಕಾರಿ ಶಂಕರ ಬಿದರಿ ಮಾದರಿಯಾಗಿದ್ದಾರೆ.

ಧಾರವಾಡ, ಬೆಂಗಳೂರ ಹೊರತಾಗಿ ನಮ್ಮ ಭಾಗದಲ್ಲಿ ತರಬೇತಿ ಕೇಂದ್ರಗಳಿಲ್ಲ ಎಂಬ ಕೊರಗು ಇವಳಿಗಿದೆ. ಅಲ್ಲಿ ತೆರಳಿ ತರಬೇತಿ ಪಡೆಯುವ ಆರ್ಥಿಕ ಸಾಮರ್ಥ್ಯ ಈಕೆಗಿಲ್ಲ. ಪತ್ರಿಕೆ ದಾನೇಶ್ವರಿಯನ್ನು ಕಾಣ ಹೋದಾಗ ಪಕ್ಕದ ಹೊಲದಲ್ಲಿ ಮೇವು ಮಾಡಲು ತೆರಳಿದ್ದ ಈಕೆ ತನ್ನ ಐಎಎಸ್ ಕನಸಿನ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟಳು. ಕಿರಿಯ ತಂಗಿ ಪ್ರಥಮ ಪಿಯೂ ಕಲಿಯುತ್ತಿದ್ದು, ಕಿರಿಯ ತಮ್ಮ6 ನೇ ತರಗತಿ ಓದುತ್ತಿದ್ದಾನೆ. ಮನೆಯಲ್ಲಿ ಹೃದ್ರೋಗ ಮತ್ತು ಮಧುಮೇಹ ರೋಗದಿಂದ ನರಳುತ್ತಿರುವ ನೀಲವ್ವಅಜ್ಜಿಗೆ ಚಿಕಿತ್ಸೆ ಮತ್ತು ಮಾತ್ರೆಗಳಿಗೆ ಹಾಗೂ ಕುಟುಂಬದ ಉದರ ಪೋಷಣೆಗೆ ಹೆಣಗುತ್ತಿರುವ ತಂದೆ-ತಾಯಿಯರ ಕಷ್ಟದ ಬದುಕು ಕಂಡಿರುವ ದಾನೇಶ್ವರಿ ತಾನೂ ಅವರೊಡನೆ ಕೂಲಿ ಕೆಲಸಕ್ಕೆ ತೆರಳುತ್ತಾಳೆ. ರಾತ್ರಿ 2-3 ಗಂಟೆ ಮಾತ್ರ ಅಧ್ಯನ ಮಾಡುವುದಾಗಿ ಹೇಳುವ ಈಕೆಗೆ ಮುಂದಿನ ವಿದ್ಯಾಭ್ಯಾಸಕ್ಕೆ ಹಣಕಾಸಿನ ನೆರವು ಅಗತ್ಯವಾಗಿ ಬೇಕಿದೆ.

ಕುಲಹಳ್ಳಿ ಗ್ರಾಮದ ಬಣಜಿಗರ ಸಮಾಜದ ಪ್ರಮುಖರು ದಾನೇಶ್ವರಿಯ ವಿದ್ಯಾಭ್ಯಾಸಕ್ಕೆ ನೆರವಾಗಲು ಯಾವುದೇ ಕೇಂದ್ರದಲ್ಲಿನ ವಸತಿ ವೆಚ್ಚವನ್ನು ಭರಿಸುವ ಭರವಸೆ ನೀಡದ್ದಾರೆ. ಇಲ್ಲಿಯವರೆಗೆ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಶಿಕ್ಷಣ ಪಡೆದಿರುವ ದಾನೇಶ್ವರಿಗೆ ಇದೀಗ ಮುಂದಿನ ವಿದ್ಯಾಭ್ಯಾಸ ಖರ್ಚು ಸರಿದೂಗಿಸುವುದೇ ಬಹು ದೊಡ್ಡ ಚಿಂತೆಯಾಗಿದೆ. ಕುಲಹಳ್ಳಿಯ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಸಂಖ್ಯೆ : 89058062447 ಐಎಫ್‌ಎಸ್‌ಸಿ ಕೋಡ್ ಕೆವಿಜಿಬಿ 0001414 ಹೊಂದಿರುವ ದಾನೇಶ್ವರಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ನೆರವು ನೀಡಬಯಸುವ ಶಿಕ್ಷಣಪ್ರೇಮಿಗಳು ಆರ್ಥಿಕ ಸಹಾಯ ನೀಡಬಹುದಾಗಿದೆ.

Advertisement

ತೀವೃ ಬಡತನದ ನಡುವೆಯೂ ಉನ್ನತ ಶಿಕ್ಷಣದಲ್ಲಿ ಸಾಧನೆ ಮೆರೆದು ಆರ್ಥಿಕವಾಗಿ ಸ್ವಾವಲಂಬಿಯಾಗಿ ತನ್ನಂತೆ ಬಡತನದ ನಡುವೆ ಜ್ಞಾನಾರ್ಜನೆಗೆ ನೆರವಾಗುವ ಗುರಿ ಹೊಂದಿರುವ ದಾನೇಶ್ವರಿಗೆ ಯಶಸ್ಸು ಲಭಿಸಲಿ ಎಂಬುದೇ ಎಲ್ಲರ ಹಾರೈಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next