ಮುಂಬಯಿ: ಟೀಮ್ ಇಂಡಿಯಾದ ಸ್ಟಾರ್ ಸ್ನಿನ್ನರ್ ಯಜುವೇಂದ್ರ ಚಹಾಲ್ (Yuzvendra Chahal) ಪತ್ನಿ ಧನಶ್ರೀ ವರ್ಮಾ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿದೆ ಎನ್ನುವುದರ ಬಗ್ಗೆ ವರದಿಯಾಗಿದೆ.
ಚಹಾಲ್ ಹಾಗೂ ಧನಶ್ರೀ ವರ್ಮಾ (Dhanashree Verma) ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಸೋಶಿಯಲ್ ಮೀಡಿಯಾ ಪ್ರಭಾವಿ ಆಗಿರುವ ಧನಶ್ರೀ ತನ್ನ ರೀಲ್ಸ್ , ಡ್ಯಾನ್ಸ್ ವಿಡಿಯೋಸ್ಗಳನ್ನು ಆಗಾಗ ಅಪ್ಲೋಡ್ ಮಾಡುತ್ತಿರುತ್ತಾರೆ. ಇತ್ತ ಬಿಡುವಿನ ವೇಳೆ ಚಹಾಲ್ ಕೂಡ ರೀಲ್ಸ್ಗಳನ್ನು ಅಪ್ಲೋಡ್ ಮಾಡಿ ನೆಟ್ಟಿಗರ ಗಮನ ಸೆಳೆಯುತ್ತಾರೆ.
ಚಹಾಲ್ – ಧನಶ್ರೀ ಮದುವೆಯಾದ ಸಮಯದಿಂದ ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲಿದ್ದಾರೆ. ಡ್ಯಾನ್ಸರ್ ಆಗಿ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿರುವ ಧನಶ್ರೀ ತನ್ನ ಗೆಳೆಯರ ಜತೆ ಹಂಚಿಕೊಳ್ಳುತ್ತಿದ್ದ ಕೆಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದವು.
2023ರಲ್ಲಿ ಧನಶ್ರೀ ಅವರು ತನ್ನ ಹೆಸರಿನಿಂದ ʼಚಹಾಲ್ʼ ಹೆಸರನ್ನು ತೆಗೆದು ಹಾಕಿದ್ದರು. ಚಹಾಲ್ ಅವರು ಇನ್ಸ್ಟಾಗ್ರಾಮ್ನಲ್ಲಿ “New life loading” ಎನ್ನುವ ಸ್ಟೋರಿ ಹಾಕಿದ ಒಂದು ದಿನದ ನಂತರ ಧನಶ್ರೀ ʼಚಹಾಲ್ʼ ಹೆಸರನ್ನು ತೆಗೆದು ಹಾಕಿದ್ದರು. ಆ ದಿನದಿಂದಲೇ ಇಬ್ಬರ ನಡುವೆ ಎಲ್ಲವೂ ಸರಿಯಾಗಿಲ್ಲ ಎನ್ನುವ ಗುಸು ಗುಸು ಹಬ್ಬಲು ಶುರುವಾಗಿತ್ತು.
ಇದೀಗ ಚಹಾಲ್ – ಧನಶ್ರೀ ಅವರು ತನ್ನ ಇನ್ಸ್ಟಾಗ್ರಾಮ್ನಲ್ಲಿ ಒಬ್ಬರನ್ನೊಬ್ಬರು ಅನ್ ಫಾಲೋ ಮಾಡಿದ್ದಾರೆ. ಚಹಾಲ್ ಅವರು ಪತ್ನಿ ಜತೆಗಿನ ಎಲ್ಲಾ ಫೋಟೋಸ್ಗಳನ್ನು ಡಿಲೀಟ್ ಮಾಡಿದ್ದಾರೆ. ಆದರೆ ಧನಶ್ರೀ ಚಹಾಲ್ ಜತೆಗಿನ ಫೋಟೋಗಳನ್ನು ಇದುವರೆಗೆ ಡಿಲೀಟ್ ಮಾಡಿಲ್ಲ.
ಇಬ್ಬರ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ. ಇಬ್ಬರು ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ.
“ವಿಚ್ಛೇದನವು ಅನಿವಾರ್ಯವಾಗಿದೆ ಮತ್ತು ಇದು ಅಧಿಕೃತವಾಗಲು ಸ್ವಲ್ಪ ಸಮಯ ಬೇಕಾಗುತ್ತದೆ. ಇಬ್ಬರ ಪ್ರತ್ಯೇಕತೆಗೆ ನಿಖರವಾದ ಕಾರಣಗಳು ಇನ್ನೂ ತಿಳಿದಿಲ್ಲ. ಆದರೆ ದಂಪತಿಗಳು ಪ್ರತ್ಯೇಕವಾಗಿ ತಮ್ಮ ಜೀವನವನ್ನು ಮುಂದುವರಿಸಲು ನಿರ್ಧರಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ” ಎಂದು ಮೂಲವೊಂದು ತಿಳಿಸಿರುವುದಾಗಿ ʼಟೈಮ್ಸ್ ಆಫ್ ಇಂಡಿಯಾʼ ವರದಿ ಮಾಡಿದೆ.
ಧನಶ್ರೀ – ಚಹಾಲ್ 2020ರ ಡಿಸೆಂಬರ್ 11 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಚಹಾಲ್ ಲಾಕ್ ಡೌನ್ ಸಮಯದಲ್ಲಿ ಧನಶ್ರೀ ಅವರಿಂದ ನೃತ್ಯ ಕಲಿಯಲು ಇಚ್ಛಿಸಿದ್ದರು. ಈ ಸಮಯದಲ್ಲಿ ಇಬ್ಬರ ನಡುವೆ ಆತ್ಮೀಯತೆ ಮೂಡಿ ಪ್ರೀತಿ ಶುರುವಾಗಿತ್ತು.