ಡಾಲಿ ಧನಂಜಯ್ ಮತ್ತು ತೆಲುಗಿನ ಸತ್ಯದೇವ್ ಜೊತೆಯಾಗಿ ನಟಿಸುತ್ತಿರುವ, ಪ್ಯಾನ್ ಇಂಡಿಯಾ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ. ಚಿತ್ರಕ್ಕೆ ‘ಜೀಬ್ರಾ’ಎಂಬ ಹೆಸರನ್ನು ಇಡಲಾಗಿದೆ.
ಓಲ್ಡ್ಟೌನ್ ಪಿಕ್ಚರ್ಸ್ ಎಲ್ಎಲ್ಪಿ ಮತ್ತು ಪದ್ಮಜಾ ಫಿಲಂಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ನಿರ್ಮಿಸುತ್ತಿರುವ ಈ ಮಲ್ಟಿಸ್ಟಾರರ್ ಚಿತ್ರವನ್ನು ‘ಪೆಂಗ್ವಿನ್’ ಖ್ಯಾತಿಯ ಈಶ್ವರ್ ಕಾರ್ತಿಕ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ 50 ದಿನಗಳ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಬಾಕಿ ಉಳಿದಿರುವ ಚಿತ್ರೀಕರಣವನ್ನು ಹೈದರಾಬಾದ್, ಕೊಲ್ಕತ್ತಾ, ಮುಂಬೈ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.
‘ಜೀಬ್ರಾ’ ಚಿತ್ರತಂಡಕ್ಕೆ ಇದೀಗ ‘ಕೆಜಿಎಫ್ 1 ಮತ್ತು 2’ ಮುಂತಾದ ಚಿತ್ರಗಳ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಆಗಮನವಾಗಿದೆ. ಇತ್ತೀಚೆಗಷ್ಟೇ ಅಜಯ್ ದೇವಗನ್ ನಿರ್ದೇಶನದ ‘ಭೋಲಾ’ ಚಿತ್ರಕ್ಕೆ ಹಿನ್ನೆಲೆ ಸಂಗೀತ ಸಂಯೋಜಿಸಿರುವ ರವಿ ಬಸ್ರೂರು, ಇದೀಗ ಜೀಬ್ರಾ ಚಿತ್ರಕ್ಕೂ ಸಂಗೀತ ಸಂಯೋಜಿಸುತ್ತಿದ್ದಾರೆ.
ಚಿತ್ರತಂಡಕ್ಕೆ ರವಿ ಬಸ್ರೂರು ಸೇರ್ಪಡೆಯಾಗಿರುವ ವಿಷಯ ಕುರಿತು ಮಾತನಾಡಿರುವ ನಿರ್ಮಾಪಕರಾದ ಬಾಲಸುಂದರಂ ಮತ್ತು ಪದ್ಮಜಾ ರೆಡ್ಡಿ, ‘ರವಿ ಬಸ್ರೂರು ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತವು ಈ ಚಿತ್ರದ ಹೈಲೈಟ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಅವರು ಚಿತ್ರದ ಆತ್ಮವನ್ನು ತಮ್ಮ ಸಂಗೀತದ ಮೂಲಕ ಅದ್ಭುತವಾಗಿ ಎತ್ತಿಹಿಡಿಯಲಿದ್ದಾರೆ’ ಎಂದು ಹೇಳಿದ್ದಾರೆ.
Related Articles
‘ಜೀಬ್ರಾ’ ಚಿತ್ರದಲ್ಲಿ ಧನಂಜಯ ಮತ್ತು ಸತ್ಯದೇವ್ ಜೊತೆಗೆ ‘ಕಟ್ಟಪ್ಪ’ ಖ್ಯಾತಿಯ ಸತ್ಯರಾಜ್, ಸುನೀಲ್ ಮುಂತಾದವರು ನಟಿಸುತ್ತಿದ್ದಾರೆ. ಸತ್ಯ ಪೊನ್ಮಾರ್ ಅವರ ಛಾಯಾಗ್ರಹಣ ಮತ್ತು ಅನಿಲ್ ಕ್ರಿಶ್ ಅವರ ಸಂಕಲನ ಈ ಚಿತ್ರಕ್ಕಿದೆ.