ಮಂಗಳೂರು: ನಗರದ ನಾಗುರಿಯಲ್ಲಿ ಶನಿವಾರ ಆಟೋ ರಿಕ್ಷಾದೊಳಗೆ ಸ್ಪೋಟವುಂಟಾದ ಘಟನೆಗೆ ಸಂಬಂಧಿಸಿದಂತೆ, ಇದು ಭಯೋತ್ಪಾದಕ ಕೃತ್ಯ ಎಂದು ಡಿಜಿಪಿ ಪ್ರವೀಣ್ ಸೂದ್ ಸ್ಪಷ್ಟ ಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಇದು ಆಕಸ್ಮಿಕ ಸ್ಫೋಟವಲ್ಲ. ಗಂಭೀರ ಹಾನಿಯನ್ನುಂಟು ಮಾಡುವ ಉದ್ದೇಶದಿಂದ ಮಾಡಿದ ಭಯೋತ್ಪಾದನೆಯ ಕೃತ್ಯವಾಗಿದೆ. ಕರ್ನಾಟಕ ರಾಜ್ಯ ಪೊಲೀಸರು ಕೇಂದ್ರ ಏಜೆನ್ಸಿಗಳೊಂದಿಗೆ ಇದರ ಬಗ್ಗೆ ಆಳವಾದ ತನಿಖೆ ನಡೆಸುತ್ತಿದ್ದಾರೆ” ಎಂದು ಹೇಳಿದ್ದಾರೆ.
ಕಂನಾಡಿ ರೈಲು ನಿಲ್ದಾಣದ ಕಡೆಯಿಂದ ಸಂಜೆ 4.30ರ ಸುಮಾರಿಗೆ ಬರುತ್ತಿದ್ದ ಆಟೋ ರಿಕ್ಷಾಕ್ಕೆ ನಾಗುರಿಯಲ್ಲಿ ಓರ್ವ ಹತ್ತಿದ್ದು ಆತ ಪಂಪ್ವೆಲ್ ಕಡೆಗೆ ಹೋಗುವಂತೆ ಚಾಲಕನಿಗೆ ಸೂಚಿಸಿದ್ದ. ಅದರಂತೆ ರಿಕ್ಷಾ ಸಂಚರಿಸುತ್ತಿದ್ದಾಗ ಘಟನೆ ಸಂಭವಿಸಿದೆ. ರಿಕ್ಷಾದಲ್ಲಿ ಸ್ಫೋಟಗೊಂಡ ಸ್ಥಿತಿಯಲ್ಲಿ ಕುಕ್ಕರ್ ಪತ್ತೆಯಾಗಿದೆ. ಆಟೋರಿಕ್ಷಾದ ಒಳಗಿನ ಕೆಲವು ಭಾಗ ಗಳು ಸುಟ್ಟು ಹೋಗಿವೆ.
Related Articles
ಪ್ರಯಾಣಿಕನ ಮೇಲೆ ಶಂಕೆ?
ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆತನನ್ನು ವಿಚಾರಿಸಿದಾಗ ಆತ ಅಸ್ಪಷ್ಟವಾಗಿ ಗೊಂದಲಕಾರಿ ಮಾಹಿತಿ ನೀಡಿದ್ದಾನೆ.
ಮೈಸೂರಿನಿಂದ ಬಂದಿರುವುದಾಗಿ ತಿಳಿಸಿದ್ದಾನೆ. ಸಹೋದರನ ಮೊಬೈಲ್ ಸಂಖ್ಯೆ ನೀಡಿದ್ದು ಅದಕ್ಕೆ ಪೊಲೀಸರು ಕರೆ ಮಾಡಿದಾಗ ನನ್ನ ಅಣ್ಣ ಬಾಬುರಾವ್ಗೆ ಕರೆ ಮಾಡಿ ಎಂದು ಹೇಳಿದ್ದಾನೆ. ಆತ ನೀಡಿದ ನಂಬರ್ಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದಾತ “ಆತ ನನ್ನ ಸಂಬಂಧಿಕನಲ್ಲ, ಬಾಡಿಗೆ ರೂಂನಲ್ಲಿದ್ದ. ಬೆಂಗಳೂರಿಗೆ ಹೋಗುತ್ತೇನೆಂದು ಹೇಳಿ ಹೋಗಿದ್ದ. ಬೇರೇನು ಗೊತ್ತಿಲ್ಲ ಎಂಬುದಾಗಿ ತಿಳಿಸಿದ್ದಾನೆ. ಆಟೋದಲ್ಲಿದ್ದ ಪ್ರಯಾಣಿಕ ಹಿಂದಿ ಭಾಷೆ ಮಾತನಾಡುತ್ತಿದ್ದ ಎಂದು ತಿಳಿದುಬಂದಿದೆ.