Advertisement

ತಾರಕಕ್ಕೇರಿದ ಡಿಜಿಪಿ-ಡಿಐಜಿ ಸಂಘರ್ಷ 

03:45 AM Jul 16, 2017 | Team Udayavani |

ಬೆಂಗಳೂರು: ಕಾರಾಗೃಹದಲ್ಲಿನ ಅಕ್ರಮಗಳ ವಿಚಾರದಲ್ಲಿ ಸರ್ಕಾರ ತನಿಖೆಗೆ ಆದೇಶಿಸಿದ ಬೆನ್ನಲ್ಲೇ ಶನಿವಾರ ಡಿಜಿಪಿ ಸತ್ಯನಾರಾಯಣರಾವ್‌ ಹಾಗೂ ಡಿಐಜಿ ರೂಪಾ ಅವರು ಪ್ರತ್ಯೇಕವಾಗಿ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಭೇಟಿ
ನೀಡಿದ್ದರು.

Advertisement

ರೂಪಾ ಭೇಟಿ ನೀಡಿದ್ದಾಗ ಹಲವು ಕೈದಿಗಳು ಅವರ ವಿರುದ್ಧ ಪ್ರತಿಭಟನೆ ನಡೆಸಿ ಘೋಷಣೆ ಕೂಗಿದ ಪ್ರಸಂಗವೂ ನಡೆಯಿತು. ಈ ಮಧ್ಯೆ, ಜೈಲು ಮುಖ್ಯ ಅಧೀಕ್ಷಕ ಕೃಷ್ಣಕುಮಾರ್‌ ಸಹ, ಡಿಜಿಪಿ ಸತ್ಯನಾರಾಯಣರಾವ್‌ ಅವರಿಗೆ ರೂಪಾ ವಿರುದ್ಧ ದೂರು ನೀಡಿದ್ದಾರೆ.

ಇದರ ನಡುವೆಯೇ ರೂಪಾ ಸಹ ಕಾರಾಗೃಹದಲ್ಲಿನ ಅಕ್ರಮಗಳ ಕುರಿತು ಎರಡನೇ ವರದಿಯನ್ನು ಡಿಜಿಪಿ ಅವರಿಗೆ ಸಲ್ಲಿಸಿದ್ದು, ಆ ದೂರಿನ ಪ್ರತಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಆರ್‌.ಕೆ.ದತ್ತಾ, ಮುಖ್ಯಕಾರ್ಯದರ್ಶಿ, ಗೃಹ ಇಲಾಖೆ ಕಾರ್ಯದರ್ಶಿ ಹಾಗೂ ಎಸಿಬಿ ಮುಖ್ಯಸ್ಥರಿಗೆ ರವಾನಿಸಿದ್ದಾರೆ. ಹೀಗಾಗಿ, ಡಿಜಿಪಿ-ಡಿಐಜಿ ನಡುವೆ ಸಂಘರ್ಷ ಮತ್ತಷ್ಟು ತಾರಕಕ್ಕೇರಿದೆ.

ಇಬ್ಬರೂ ಅಧಿಕಾರಿಗಳಿಗೆ ಬಹಿರಂಗವಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡದಂತೆ ತಾಕೀತು ಮಾಡಿದ ನಂತರವೂ
ಆರೋಪ- ಪ್ರತ್ಯಾರೋಪಗಳು ನಿಂತಿಲ್ಲ. ಶನಿವಾರ ಬೆಳಗ್ಗೆ ಕಾರಾಗೃಹಕ್ಕೆ ಭೇಟಿ ನೀಡಿದ್ದ ಡಿಜಿಪಿ ಸತ್ಯನಾರಾಯಣರಾವ್‌, ಅಲ್ಲಿನ ಸಿಬ್ಬಂದಿ ಜತೆ ಮಾತುಕತೆ ನಡೆಸಿ ಕೈದಿಗಳಿಗೆ ಒದಗಿಸುತ್ತಿರುವ ಸೌಲಭ್ಯಗಳನ್ನು ಪರಿಶೀಲಿಸಿದರು. “ಡಿಜಿಪಿಯವರು ಪ್ರತಿ ಶನಿವಾರ ಕಾರಾಗೃಹಕ್ಕೆ ಭೇಟಿ ನೀಡುತ್ತಾರೆ. ಅದೇ ರೀತಿ ಈ ದಿನವೂ
ಬಂದಿದ್ದರು. ಇದರಲ್ಲಿ ವಿಶೇಷ ಏನಿಲ್ಲ ‘ ಎಂದು ಅಲ್ಲಿನ ಅಧಿಕಾರಿಗಳು ಸಮಜಾಯಿಷಿ ನೀಡಿದರು.

ಇದರ ಬೆನ್ನಲ್ಲೇ ಮಧ್ಯಾಹ್ನ ಡಿಐಜಿ ರೂಪಾ, ಡಿಜಿಪಿ ಅವರಿಗೆ ಕಾರಾಗೃಹದಲ್ಲಿನ ಅಕ್ರಮಗಳ ಕುರಿತ ಎರಡನೇ ವರದಿ ಸಲ್ಲಿಸಿ ನಂತರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಜೈಲಿನ ಅವ್ಯವಸ್ಥೆ ಬಗ್ಗೆ ದೂರು ನೀಡಿದ್ದ ಸಿಬ್ಬಂದಿ ಹಾಗೂ
ಆಸ್ಪತ್ರೆಯ ವೈದ್ಯರು, ನರ್ಸ್‌ಗಳು ಹಾಗೂ ಕೆಲ ಕೈದಿಗಳ ಜತೆ ಸಮಾಲೋಚನೆ ನಡೆಸಿದರು. ಡಿಜಿಪಿ ಭೇಟಿ ನೀಡಿದ ಬೆನ್ನಲ್ಲೇ ರೂಪಾ ಭೇಟಿ ನೀಡಿದ್ದು ಕುತೂಹಲ ಮೂಡಿಸಿತ್ತು. ಸತ್ಯನಾರಾಯಣರಾವ್‌ ಅವರು ತಮ್ಮ ವಿರುದ್ಧದ ಆರೋಪಗಳ ಕುರಿತು ಸಾಕ್ಷ್ಯನಾಶ ಪಡಿಸಬಹುದು ಎಂಬ ಶಂಕೆ ಹಿನ್ನೆಲೆಯಲ್ಲಿ ಅವರು ಬಂದಿದ್ದರು ಎಂಬ ಮಾತುಗಳು ಕೇಳಿ ಬಂದವು.

Advertisement

ಕೈದಿಗಳ ಪ್ರತಿಭಟನೆ: ಲಘು ಲಾಠಿ ಪ್ರಹಾರ- ರೂಪಾ ಅವರು ಜೈಲಿನಲ್ಲಿ ಪರಿಶೀಲನೆ ಸಂದರ್ಭದಲ್ಲಿ ಮಹಿಳಾ ಕೈದಿಗಳ ಕೋಣೆಯತ್ತ ಹೋಗುತ್ತಿದ್ದಂತೆ ಕೆಲ ಕೈದಿಗಳು ಇವರ ವಿರುದ್ಧ ಧಿಕ್ಕಾರ ಕೂಗಿ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ
ನಡೆದಿದೆ. ನಂತರ ಜೈಲಿನ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿ ರೂಪಾ ಅವರನ್ನು ಕಳುಹಿಸಿಕೊಟ್ಟರು ಎಂದು ಹೇಳಲಾಗಿದೆ. ಬಳಿಕ ಡಿಜಿಪಿ ಹಾಗೂ ಡಿಐಜಿ ಪರ ಮತ್ತು ವಿರೋಧ ಗುಂಪು ನಡುವೆ ಮಾತಿನ ಚಕಮಕಿ
ನಡೆದಿದ್ದು, ಏಕಾಏಕಿ ಎರಡೂ ಕಡೆಯವರು ಪ್ರತಿಭಟನೆ ಆರಂಭಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದೆಂಬ ಮುನ್ನಚ್ಚರಿಕೆಯಿಂದ ಹೆಚ್ಚಿನ ಭದ್ರತೆಗಾಗಿ ಕೆಎಸ್‌ಆರ್‌ಪಿ ತುಕಡಿ ಸಹ ಸ್ಥಳಕ್ಕೆ ಕರೆಸಲಾಗಿತ್ತು. ಕೆಎಸ್‌ಆರ್‌ಪಿ ಪೊಲೀಸರು ಕೊಠಡಿಗಳಿಗೆ ತೆರಳುವಂತೆ ಸೂಚಿಸಿದರೂ ಕೈದಿಗಳು ಕದಲದ ಕಾರಣ ಲಘು ಲಾಠಿ ಪ್ರಹಾರ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.

ರೂಪಾ ವಿರುದ್ಧ ಮಾನನಷ್ಟ ಮೊಕದ್ದಮೆ
ಶಶಿಕಲಾ ಅವರಿಗೆ ವಿಐಪಿ ಸೌಲಭ್ಯ ನೀಡಲು 2 ಕೋಟಿ ರೂ. ಲಂಚ ಪಡೆದ ಆರೋಪ ಹೊರಿಸಿರುವ ಡಿಐಜಿ ರೂಪಾ
ವಿರುದ್ಧ ಡಿಜಿಪಿ ಸತ್ಯನಾರಾಯಣರಾವ್‌ ಮಾನನಷ್ಟ ಮೊಕದ್ದಮೆ ಕೇಸ್‌ ದಾಖಲಿಸುವ ಸಾಧ್ಯತೆಯಿದೆ. ಸತ್ಯನಾರಾಯಣರಾವ್‌ ನಿವೃತ್ತಿಗೆ ಇನ್ನು 15 ದಿನಗಳು ಬಾಕಿ ಇರುವಾಗಲೇ ಈ ರೀತಿಯ ಗಂಭೀರ ಆರೋಪದಿಂದ ಆಕ್ರೋಶಗೊಂಡಿರುವ ಅವರು, “ಸೂಕ್ತ ಸಾûಾÂಧಾರಗಳಿಲ್ಲದೇ ಸಾರ್ವಜನಿಕವಾಗಿ ಗಂಭೀರ ಆರೋಪ ಮಾಡಿದ್ದಾರೆ. ಇದರಿಂದ ಇಲಾಖೆ ಹಾಗೂ ಸಾರ್ವಜನಿಕವಾಗಿ ತಮ್ಮ ಘನತೆಗೆ ಚ್ಯುತಿ ಬಂದಿದೆ ‘ ಎಂದು ಆರೋಪಿಸಿ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗಿದ್ದು, ಸೋಮವಾರ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಇದೆ. ಸತ್ಯನಾರಾಯಣರಾವ್‌ ಜತೆ ಜೈಲಿನ ಇಬ್ಬರು ಮುಖ್ಯಅಧೀಕ್ಷಕರು ಕೂಡ ರೂಪಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಸಿದ್ಧತೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.

ನನ್ನ ಅವಧಿಯಲ್ಲಿ ಮಾಹಿತಿ ಇರಲಿಲ್ಲ
ಬೆಂಗಳೂರು: “ನಾನು ಗೃಹ ಸಚಿವನಾಗಿದ್ದಾಗ ಜೈಲಿನಲ್ಲಿ ಯಾವುದೇ ರೀತಿಯ ಅಕ್ರಮಗಳು ನಡೆದದ್ದು ನನ್ನ ಗಮನಕ್ಕೆ ಬಂದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ತಿಳಿಸಿದ್ದಾರೆ. “ಪರಪ್ಪನ ಅಗ್ರಹಾರದಲ್ಲಿ ಪೊಲಿಸ್‌ ಅಧಿಕಾರಿಗಳು ಕಿತ್ತಾಡಿಕೊಳ್ಳುತ್ತಿರುವುದರ ಬಗ್ಗೆ ಮುಖ್ಯಮಂತ್ರಿ ತನಿಖೆಗೆ ಆದೇಶಿಸಿದ್ದಾರೆ. ನಾನು ಗೃಹ ಸಚಿವನಾಗಿದ್ದಾಗ ಈ ರೀತಿಯ ಯಾವುದೇ ವಿಷಯಗಳು ಗಮನಕ್ಕೆ ಬಂದಿಲ್ಲ. ಜೈಲಿನಲ್ಲಿ ಅಕ್ರಮಗಳು ನಡೆದರೆ, ಜೈಲು ಸುಪರಿಂಡೆಂಟೆಂಟ್‌ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೇ ಅವರೇ ಹೊಣೆಗಾರರಾಗುತ್ತಾರೆ. ನಾನು ಗೃಹ ಸಚಿವನಾಗಿದ್ದಾಗ ಯಾವುದೇ ಅಕ್ರಮಗಳ ಬಗ್ಗೆ ಮಾಹಿತಿ ಬಂದಿರಲಿಲ್ಲ. ಕೈದಿಗಳಿಗೆ ವಿಶೇಷ ಆತಿಥ್ಯ ನೀಡುವ ಬಗ್ಗೆಯೂ ಯಾವುದೇ ದೂರು ಕೇಳಿ ಬಂದಿರಲಿಲ್ಲ’ ಎಂದರು. ಜೈಲುಗಳು ಬಾರ್‌ ಆಗಿವೆ ಎಂಬ ಬಿಜೆಪಿ ಮುಖಂಡ ಆರ್‌. ಅಶೋಕ್‌ ಆರೋಪಕ್ಕೆ “ಅವರೂ ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ’ ಎಂದ ತೀಕ್ಷ್ಣವಾಗಿ ತಿರುಗೇಟು ನೀಡಿದರು.

ಎರಡನೇ ವರದಿಯಲ್ಲಿ ಏನಿದೆ?
– ಜೈಲಿನ ಕೆಲ ಸಿಬ್ಬಂದಿಯಿಂದ ಅಕ್ರಮದ ಕುರಿತ ಸಾಕ್ಷ್ಯ ನಾಶಕ್ಕೆ ಯತ್ನ
– ಶಶಿಕಲಾ ನಟರಾಜನ್‌ಗೆ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದ್ದು, ಅವರ ಸಂದರ್ಶನಕ್ಕಾಗಿ ಪ್ರತ್ಯೇಕ ಕೊಠಡಿ
– ಶಶಿಕಲಾ ಇರುವ ಬ್ಯಾರಕ್‌ ಬಳಿ ಯಾವುದೇ ಸಿಸಿಟಿವಿಗಳಿಲ್ಲ
– ಸಂದರ್ಶಕರ ಕೊಠಡಿ ಬಳಿ ಏನು ನಡೆಯುತ್ತಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಇಲ್ಲಿ ಎರಡು ಕ್ಯಾಮರಾಗಳು ಮಾತ್ರ ಇವೆ.
– 7 ಮತ್ತು 8 ಸಿಸಿಟಿವಿಗಳಲ್ಲಿ ಸೆರೆಯಾದ ದೃಶ್ಯಗಳು ಇಲ್ಲ
– ಸಂದರ್ಶಕರು ಹಾಗೂ ಕೈದಿಗಳ ಬಗ್ಗೆ ಯಾವುದೇ ದಾಖಲೆ ಇಲ್ಲ
– ಕಿರಿಯ ಅಧಿಕಾರಿಗಳು ತಮ್ಮ ವಿರುದ್ಧ ಹೇಳಿಕೆ ನೀಡಿರುವ ಬಗ್ಗೆ ಕ್ರಮಕ್ಕೆ ಒತ್ತಾಯ
– ತಾವು ಜೈಲಿಗೆ ಭೇಟಿ ನೀಡಿದ ವೇಳೆ ಚಿತ್ರೀಕರಿಸಲಾದ ವಿಡಿಯೋ ಅಳಿಸಲಾಗಿದೆ.
 

Advertisement

Udayavani is now on Telegram. Click here to join our channel and stay updated with the latest news.

Next