Advertisement

ಲಂಚ ಸ್ವೀಕಾರದ ಆರೋಪ ಲೋಕಾಯುಕ್ತ ಬಲೆಗೆ ಬಿದ್ದ ಡಿಎಫ್ಒ

07:26 PM Mar 10, 2023 | Team Udayavani |

ಮಡಿಕೇರಿ: ಪ್ರಭಾರ ವಲಯ ಅರಣ್ಯಾಧಿಕಾರಿ ಬಳಿಯಿಂದ 50 ಸಾವಿರ ರೂ. ಲಂಚ ಸ್ವೀಕರಿಸಿದ ಆರೋಪದಡಿ ಲೋಕಾಯುಕ್ತರು ಡಿಎಫ್ಒ ಪೂರ್ಣಿಮಾ ಅವರನ್ನು ಮಡಿಕೇರಿ ಅರಣ್ಯ ಭವನದ ಬಳಿ ವಶಕ್ಕೆ ಪಡೆದಿದ್ದಾರೆ.

Advertisement

ದೂರುದಾರ ಸಾಮಾಜಿಕ ಅರಣ್ಯ ವಲಯದ ಪ್ರಭಾರ ವಲಯ ಅರಣ್ಯಾಧಿಕಾರಿ ಮಯೂರ ಅವರು ಆರೋಪಿ ಪೂರ್ಣಿಮಾ ಅವರ ಸೂಚನೆಯಂತೆ ಅರಣ್ಯ ಭವನದ ಬಳಿ ಹಣದ ಕವರ್‌ ಅನ್ನು ಜೀಪ್‌ನಲ್ಲಿ ಇಡುತ್ತಿದ್ದ ಸಂದರ್ಭ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದರು.

ದೂರಿಗೆ ಕಾರಣ: ಮಯೂರ ಅವರ ಕರ್ತವ್ಯದ ವ್ಯಾಪ್ತಿಗೆ ಒಳಪಡುವ ಹೊದ್ದೂರು ವೋಟೆಕಾಡು ನರ್ಸರಿಯಲ್ಲಿ ಕರ್ತವ್ಯ ನಿರ್ವಹಿಸಲು ಓರ್ವ ವಾಚರ್‌ ಅನ್ನು ನೇಮಿಸಿಕೊಂಡು ಮಾಸಿಕ 15 ಸಾವಿರ ರೂ. ವೇತನ ನೀಡಲಾಗುತ್ತಿತ್ತು. ಆದರೆ ಮತ್ತೂಬ್ಬ ವಾಚರ್‌ ಅನ್ನು ನೇಮಿಸಿಕೊಂಡಂತೆ ಸುಳ್ಳು ದಾಖಲೆಯನ್ನು ಸೃಷ್ಟಿಸಿ ಆ ಮಾಸಿಕ ಸಂಬಳವನ್ನು ನನಗೆ ನೀಡುವಂತೆ ಪೂರ್ಣಿಮಾ ಅವರು ಒತ್ತಡ ಹೇರಿದ್ದರು. ಅಲ್ಲದೆ ನನ್ನ ಕರ್ತವ್ಯದ ವ್ಯಾಪ್ತಿಯಲ್ಲಿ ನಡೆದ ಎರಡು ಕಾಮಗಾರಿಗಳ ಒಟ್ಟು ಮೊತ್ತ 1.60 ಲಕ್ಷ ರೂ.ಗಳಲ್ಲಿ ಶೇ. 60ರಷ್ಟನ್ನು ನನಗೆ ನೀಡುವಂತೆ ಪೂರ್ಣಿಮಾ ಒತ್ತಾಯ ಮಾಡಿದ್ದರು.
ಲಂಚ ನೀಡಲು ಒಪ್ಪದೆ ಇದ್ದ ಕಾರಣಕ್ಕಾಗಿ ಸಾರ್ವಜನಿಕವಾಗಿ ನನ್ನನ್ನು ನಿಂದಿಸುತ್ತಿದ್ದರು. ನನಗೆ ಲಂಚ ನೀಡಲು ಇಷ್ಟವಿಲ್ಲದ ಕಾರಣ ದೂರು ನೀಡುತ್ತಿರುವುದಾಗಿ ಮಯೂರ ಲೋಕಾಯುಕ್ತಕ್ಕೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ ಶೇ.60 ಹಣಕ್ಕೆ ಬೇಡಿಕೆ ಇಟ್ಟ ಮೊಬೈಲ್‌ ಧ್ವನಿ ಮುದ್ರಣವನ್ನು ಕೂಡ ಸಾಕ್ಷಿಯಾಗಿ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು 50 ಸಾವಿರ ರೂ.ಗಳಿದ್ದ ಕವರ್‌ ಅನ್ನು ಜೀಪ್‌ನಲ್ಲಿಡುತ್ತಿದ್ದಾಗ ಪೂರ್ಣಿಮಾ ಅವರನ್ನು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಿದರು.
———————
ಗಾಂಜಾ ಮಾರಾಟ: ಯುವಕನ ಸೆರೆ
ಮಡಿಕೇರಿ: ಕುಶಾಲನಗರಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಪಿರಿಯಾಪಟ್ಟಣದ ಸುಂಕದಳ್ಳಿ ಗ್ರಾಮ ನಿವಾಸಿ ಎಸ್‌.ಜಿ. ನಿಶಾಂತ್‌ (20)ನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ಬಳಿ ಇದ್ದ 170 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.

ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟದ ಬಗ್ಗೆ ಠಾಣೆಗಳಿಗೆ ಸಾರ್ವಜನಿಕರಿಂದ ದೂರು ಬರುತ್ತಿದ್ದು, ಮಾದಕ ವಸ್ತುಗಳ ಮಾರಾಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ತನಿಖಾ ತಂಡವನ್ನು ರಚಿಸಲಾಗಿತ್ತು. ಮಾ. 9ರಂದು ಕುಶಾಲನಗರ ಗೌಡ ಸಮಾಜದ ಬಳಿ ಗಾಂಜಾ ಮಾರಾಟ ಮಾಡುತ್ತಿರುವ ಕುರಿತು ಲಭಿಸಿದ ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದರು.

Advertisement

ಮಾಹಿತಿ ನೀಡಿ ಯುವ ಸಮುದಾಯ ಮಾದಕ ವ್ಯಸನಿಗಳಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವುದನ್ನು ತಡೆಗಟ್ಟುವ ಸಲುವಾಗಿ ಮಾದಕ ವಸ್ತುಗಳನ್ನು ಬಳಸುವ ಹಾಗೂ ಮಾರಾಟ ಮಾಡುವ ವ್ಯಕ್ತಿಗಳು ಕಂಡು ಬಂದಲ್ಲಿ ಸ್ಥಳೀಯ ಪೊಲೀಸ್‌ ಠಾಣೆ ಹಾಗೂ ಕೆಎಸ್‌ಪಿ ತಂತ್ರಾಶದ ಮೂಲಕ ಮಾಹಿತಿ ನೀಡುವಂತೆ ಪೊಲೀಸ್‌ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next