Advertisement

ಹಿಂದೂ ಮಹಾಗಣಪತಿಗೆ ಭಕ್ತಿಪೂರ್ವಕ ವಿದಾಯ

09:53 AM Sep 22, 2018 | Team Udayavani |

ನಾಯಕನಹಟ್ಟಿ: ಪಟ್ಟಣದ ಹಿಂದೂ ಮಹಾಗಣಪತಿಯ ವಿಸರ್ಜನಾ ಮೆರವಣಿಗೆ ಶುಕ್ರವಾರ ವಿಜೃಂಭಣೆಯಿಂದ ಜರುಗಿತು. ಪಟ್ಟಣದ ಪಾದಗಟ್ಟೆ ಪ್ರದೇಶದಲ್ಲಿ ಸ್ಥಾಪಿಸಿದ್ದ ಎರಡನೇ ವರ್ಷದ ಹಿಂದೂ ಮಹಾಗಣಪತಿ ಮೆರವಣಿಗೆ ಬೆಳಿಗ್ಗೆ 11 ಗಂಟೆಗೆ ನಿಗದಿಪಡಿಸಲಾಗಿತ್ತು.

Advertisement

ಆದರೆ ಮೆರವಣಿಗೆಯಲ್ಲಿ ಡಿಜೆ ಬಳಕೆಗೆ ಅನುಮತಿಯನ್ನು ತಾಲೂಕು ಆಡಳಿತ ಹಾಗೂ ಪೊಲೀಸ್‌ ಇಲಾಖೆ ನಿರಾಕರಿಸಿತ್ತು. ಶಾಸಕ ಬಿ. ಶ್ರೀರಾಮುಲು ಮಧ್ಯಸ್ತಿಕೆಯಲ್ಲಿ ಡಿಜೆಗೆ ಅನುಮತಿ ಪಡೆದ ನಂತರ ಸಂಜೆ 4 ಗಂಟೆಗೆ
ಮೆರವಣಿಗೆ ಆರಂಭಗೊಂಡು ಸಂಜೆ 6 ಗಂಟೆಗೆ ಮುಕ್ತಾಯಗೊಂಡಿತು. 

ಡಿಜೆಗೆ ಅನುಮತಿ ನೀಡಬೇಕೆಂದು ಒತ್ತಾಯಿಸಿದ ವಿಶ್ವ ಹಿಂದೂ ಪರಿಷತ್‌, ಬಿಜೆಪಿ ಹಾಗೂ ಭಜರಂಗ ದಳದ ಕಾರ್ಯಕರ್ತರು ಗಣಪತಿ ಮೂರ್ತಿಯನ್ನು ಸ್ಥಳದಿಂದ ಕದಲಿಸಲಿಲ್ಲ. ಶಾಸಕ ಬಿ. ಶ್ರೀರಾಮುಲು ಪ್ರಥಮ
ಪೂಜೆ ನೆರವೇರಿಸಿದ ನಂತರ ಮೆರವಣಿಗೆಆರಂಭಿಸಲು ಕಾರ್ಯಕರ್ತರು ನಿರ್ಧರಿಸಿದ್ದರು. ಪೂಜೆ ನೆರವೇರಿಸಿದ
ಶಾಸಕರಿಗೆ ಡಿಜೆ ಬಳಕೆಗೆ ಅನುಮತಿ ಕೊಡಿಸುವಂತೆ ಕಾರ್ಯಕರ್ತರು ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ
ಶ್ರೀರಾಮುಲು, ಎಸ್ಪಿ ಅವರೊಂದಿಗೆ ಚರ್ಚಿಸಿದರು.

ಗಣೇಶೋತ್ಸವ ಶಾಂತಿ ಸಭೆಯಲ್ಲಿ ಹಾಗೂ ಗುರುವಾರ ತಹಶೀಲ್ದಾರ್‌ ಹಾಗೂ ಡಿವೈಎಸ್ಪಿ ಡಿಜೆಗೆ ಅನುಮತಿ
ಸಾಧ್ಯವಿಲ್ಲವೆಂದು ಸಂಘಟಕರಿಗೆ ಸ್ಪಷ್ಟವಾಗಿ ತಿಳಿಸಿದ್ದರು. ಜತೆಗೆ ಪಟ್ಟಣಕ್ಕೆ ಡಿಜೆ ವಾಹನ ಬಾರದಂತೆ ಪಟ್ಟಣ ಪ್ರವೇಶಿಸುವ ಎಲ್ಲ ರಸ್ತೆಗಳಲ್ಲಿ ಪೊಲೀಸರು ಚೆಕ್‌ಪೋಸ್ಟ್‌ ಸ್ಥಾಪಿಸಿದ್ದರು. ಡಿಜೆ ವಾಹನವನ್ನು ಗಂಗಯ್ಯನಹಟ್ಟಿ
ಬಳಿ ಪೊಲೀಸರು ವಶಕ್ಕೆ ಪಡೆದಿದ್ದರು. 

ಬಿ. ಶ್ರೀರಾಮುಲು ಅವರು ಎಸ್ಪಿ, ಡಿವೈಎಸ್ಪಿಯವರಿಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ
ಎಚ್ಚರಿಕೆ ವಹಿಸಲಾಗುವುದು ಎನ್ನುವ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಪೊಲೀಸರು ಡಿಜೆಗೆ ತಡೆಯೊಡ್ಡಲಿಲ್ಲ.
ಡಿಜೆ ಟ್ರ್ಯಾಕ್ಟರ್‌ ಮೆರವಣಿಗೆ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು. ಮೂರು
ಗಂಟೆಗೆ ಆಗಮಿಸಿದ ಶಾಸಕರು ಪಾದಗಟ್ಟೆ, ತೇರುಬೀದಿ, ಉತ್ಸವ ಬೀದಿಗಳಲ್ಲಿ ಮೆರವಣಿಗೆ ಜತೆಗೆ ಹೆಜ್ಜೆ ಹಾಕಿದರು.

Advertisement

ಮೆರವಣಿಗೆ ದಾರಿಯಲ್ಲಿ ಹೂವು, ಕುಂಕುಮ, ಅರಿಶಿಣ ಎರಚಲಾಯಿತು. ಚಿಕ್ಕಕೆರೆಯಲ್ಲಿ ನೀರು ಬರಿದಾಗಿರುವ
ಹಿನ್ನೆಲೆಯಲ್ಲಿ 18 ಅಡಿ ಆಳದ ಗುಂಡಿ ತೆಗೆದು àರು ತುಂಬಿಸಿ ಗಣಪತಿಯನ್ನು ವಿರ್ಸರ್ಜಿಸಲಾಯಿತು.

ಕಳೆದ ವರ್ಷ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಡಿಜೆ ಸಲುವಾಗಿ ಗಲಾಟೆ ನಡೆದಿತ್ತು. ಅಂತಿಮವಾಗಿ ಪೊಲೀಸರು ಡಿಜೆಗೆ ಅನುಮತಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಡಿವೈಎಸ್ಪಿ ರೋಷನ್‌ ಜಮೀರ್‌, ಸಿಪಿಐ ತಿಮ್ಮಣ್ಣ, ನಾಲ್ಕು ಪಿಎಸ್‌ಐ, ಒಂದು ಡಿಎಆರ್‌ ಜತೆಗೆ 150 ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
 
ವೇಣುಗೋಪಾಲ್‌, ವಿಷ್ಣು, ಪಿ. ಶಿವಣ್ಣ, ಜಯಪಾಲಯ್ಯ, ಪ್ರಭಾಕರ ಮ್ಯಾಸನಾಯಕ, ಸಿ.ಬಿ. ಮೋಹನ್‌,
ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎನ್‌. ಮಹಾಂತಣ್ಣ, ಪಪಂ ಸದಸ್ಯ ಬಸಣ್ಣ, ತಹಶೀಲ್ದಾರ್‌ ಟಿ.ಸಿ. ಕಾಂತರಾಜ್‌,
ಉಪತಹಶೀಲ್ದಾರ್‌ ಟಿ. ಜಗದೀಶ್‌, ಡಿವೈಎಸ್ಪಿ ರೋಷನ್‌ ಜಮೀರ್‌, ಸಿಪಿಐ ತಿಮ್ಮಣ್ಣ, ಪಿಎಸ್‌ಐ ಮೋಹನ್‌ಕುಮಾರ್‌
ಮೊದಲಾದವರು ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next