ಗಂಗಾವತಿ: ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಇದುವರೆಗೂ ಬಂದ್ ಆಗಿದ್ದ ತಾಲ್ಲೂಕಿನ ಕಿಷ್ಕಿಂದಾ ಅಂಜನಾದ್ರಿ, ಪಂಪಾ ಸರೋವರ, ಋಷ್ಯ ಮುಖ, ಆದಿಶಕ್ತಿ ದೇಗುಲ, ನವ ವೃಂದಾವನ,ಚಿಂತಾಮಣಿ ಪ್ರವಾಸಿ ತಾಣಗಳು ಇಂದು ಭಕ್ತರಿಂದ ಕೂಡಿದ್ದವು.
ಕಳೆದ ಮಾರ್ಚ್ 23 ರಿಂದ ಲಾಗ್ ಡೌನ್ ಹಿನ್ನೆಲೆಯಲ್ಲಿ ಈ ಎಲ್ಲಾ ದೇಗುಲಗಳ ಬಾಗಿಲುಗಳನ್ನ ಮುಚ್ಚಲಾಗಿತ್ತು ಪ್ರತಿನಿತ್ಯ ಅರ್ಚಕರು ಮಾತ್ರ ಪೂಜಾ ವಿಧಾನಗಳನ್ನು ನೆರವೇರಿಸುತ್ತಿದ್ದರು. ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಇದರಿಂದ ದೇಗುಲಗಳು ಭಣ ಗುಡುತ್ತಿದ್ದವು.
ದೇಗುಲಗಳ ಬಾಗಿಲು ಬಂದ್ ಆಗಿದ್ದರಿಂದ ಆನೆಗೊಂದಿ ಭಾಗದ ಪ್ರವಾಸೋದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದಂತಾಗಿತ್ತು. ಇದರಿಂದ ಸ್ಥಳೀಯ ಜನರು ವ್ಯಾಪಾರ ವಹಿವಾಟು ಉದ್ಯೋಗವಿಲ್ಲದೆ ಕಷ್ಟಪಟ್ಟಿದ್ದರು. ಸೋಮವಾರದಿಂದ ಸರ್ಕಾರದ ಸೂಚನೆಯಂತೆ ಎಲ್ಲಾ ದೇಗುಲಗಳ ಬಾಗಿಲು ತೆಗೆಯ ಲಾಗಿದ್ದು ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ :750 ಆಮ್ಲಜನಕ ಸಾಂದ್ರಕ ನೀಡಿದ ಗೀವ್ ಇಂಡಿಯಾ : ಸಿಎಂ, ಡಿಸಿಎಂಗೆ ಹಸ್ತಾಂತರ
ಪ್ರಸಾದ ಅನ್ನಪ್ರಸಾದ ಸೇರಿದಂತೆ ಯಾವುದೇ ವಸ್ತುವನ್ನು ಅರ್ಚಕರು ಭಕ್ತರಿಗೆ ನೀಡದಂತೆ ನಿರ್ಬಂಧದಲ್ಲಿ ಸೂಚನೆ ನೀಡಲಾಗಿದೆ.ಕಡ್ಡಾಯವಾಗಿ ಸಾಮಾಜಿಕ ಅಂತರ ಮಾಸ್ಕ್ ಧರಿಸುವುದು ಸೇರಿದಂತೆ ಕೊರೋನಾ ಮಾರ್ಗಸೂಚಿಯನ್ನ ಭಕ್ತರು ದೇಗುಲಗಳಲ್ಲಿ ಅನುಸರಿಸಬೇಕಾಗಿದೆ .ಕಿಷ್ಕಿಂದಾ ಅಂಜನಾದ್ರಿ ಯಲ್ಲಿ ದೇಗುಲ ಸಮಿತಿಯವರು ತಳಿರು ತೋರಣಗಳಿಂದ ದೇಗುಲವನ್ನ ಮತ್ತು ಬೆಟ್ಟದ ಮೆಟ್ಟಿಲುಗಳನ್ನು ಅಲಂಕಾರ ಮಾಡಿದ್ದರು.