ಸುಬ್ರಹ್ಮಣ್ಯ/ ಧರ್ಮಸ್ಥಳ/ಕೊಲ್ಲೂರು: ಮಳೆಗಾಲ ಆರಂಭಕ್ಕೆ ಮುನ್ನ ತೀರ್ಥ ಕ್ಷೇತ್ರಗಳ ದರ್ಶನ ಮಾಡುವ ಯೋಚನೆಯೊಂದಿಗೆ ರಾಜ್ಯದ ವಿವಿಧೆಡೆಗಳಿಂದ ಯಾತ್ರಿಕರು ದೇವಸ್ಥಾನಗಳತ್ತ ಮುಖ ಮಾಡಿದ್ದು, ರವಿವಾರ ಕರಾವಳಿಯ ಪ್ರಮುಖ ದೇವಸ್ಥಾನಗಳು ಭಕ್ತರಿಂದ ತುಂಬಿದ್ದವು.
ನಾಗಾರಾಧನೆಯ ಪ್ರಸಿದ್ಧ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಶನಿವಾರವೂ ಹೆಚ್ಚಿನ ಸಂಖ್ಯೆಯ ಭಕ್ತರ ಆಗಮನವಾಗಿತ್ತು. ರವಿವಾರ ಇನ್ನೂ ಅಧಿಕ ಸಂಖ್ಯೆಯ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ದೇವರ ದರುಶನ ಪಡೆದರು. ರಥಬೀದಿ, ಒಳಾಂಗಣ ಭಕ್ತರಿಂದ ತುಂಬಿತ್ತು. ಪೇಟೆಯಲ್ಲಿ, ಪಾರ್ಕಿಂಗ್ ಪ್ರದೇಶ ವಾಹನಗಳಿಂದ ಭರ್ತಿಯಾಗಿದ್ದವು. ಬಸ್‌ಗಳೂ ಭರ್ತಿಯಾಗಿ ಸಂಚರಿಸುವುದು ಕಂಡುಬಂದಿದೆ.
ಕೊಲ್ಲೂರು ದೇವಸ್ಥಾನ:
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ರವಿವಾರ 7 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದರು.
Related Articles
ಶ್ರೀ ಕ್ಷೇತ್ರ ಧರ್ಮಸ್ಥಳ:
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ರವಿವಾರ ಭಕ್ತರ ಸಂಖ್ಯೆ ಹೆಚ್ಚು ಕಂಡುಬಂತು. ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ, ಅನ್ನ ಪ್ರಸಾದ ಸ್ವೀಕರಿಸಿದರು.
ಬೇಸಗೆ ರಜೆಯ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿಂದ ನಿರಂತರ ವಾಗಿ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಿದ್ದು, ಶನಿವಾರ ರವಿವಾರ ಹಾಗೂ ಸೋಮವಾರ ನಾಡಿನೆಲ್ಲೆಡೆಯ ಭಕ್ತರು ಆಗಮಿಸುತ್ತಾರೆ.
ರವಿವಾರ ದೇವಸ್ಥಾನ, ಪಾರ್ಕಿಂಗ್ ಪ್ರದೇಶ, ಅಣ್ಣಪ್ಪ ಬೆಟ್ಟ, ಬಾಹುಬಲಿ ಬೆಟ್ಟ, ಮ್ಯೂಸಿಯಂಗಳಲ್ಲಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು. ಜಿಲ್ಲೆಯ ಪ್ರಮುಖ ರಸ್ತೆಗಳಲ್ಲಿ ವಾಹನಗಳ ದಟ್ಟಣೆಯೂ ಕಾಣಿಸಿತು.