ಪಣಜಿ: ಮೈ ಕೊರೆಯುವ ಚಳಿಯಲ್ಲಿ ಸೈಬೇರಿಯನ್ ಪಕ್ಷಿಗಳು ಬೆಚ್ಚಗಾಗಲು ತಮ್ಮ ಸ್ಥಳದಿಂದ ಬೇರೊಂದು ಸ್ಥಳಕ್ಕೆ ವಲಸೆ ಹೋಗುತ್ತವೆ. ಅದೇ ರೀತಿ ತೃಣಮೂಲ ಕಾಂಗ್ರೆಸ್ ಮತ್ತು ಎಎಪಿ ಸೈಬೇರಿಯನ್ ರಾಜಕೀಯ ಪಕ್ಷಗಳು ಗೋವಾ ಚುನಾವಣೆಯ ನಂತರ ಖಂಡಿತವಾಗಿಯೂ ತಮ್ಮ ಸ್ಥಾನಕ್ಕೆ ವಾಪಸ್ಸು ತೆರಳಲಿವೆ ಎಂದು ಗೋವಾ ಬಿಜೆಪಿ ಉಸ್ತುವಾರಿ ಹಾಗೂ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಮಡಗಾಂವ ಸಮೀಪದ ಕೆಫೆಮ್‍ನಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಶ್ಚಿಮ ಬಂಗಾಳದಲ್ಲಿ ನಿರುದ್ಯೋಗ ಸಮಸ್ಯೆ ಉತ್ತುಂಗಕ್ಕೇರಿದೆ. ಈ ಹಿಂದೆ ಕಮ್ಯುನಿಸ್ಟ ಪಕ್ಷಗಳಿಂದ ಜನರಿಗೆ ತೊಂದರೆಯಾಗುತ್ತಿತ್ತು. ಅದೇ ಸಂಪ್ರದಾಯವನ್ನು ಮಮತಾ ಬ್ಯಾನರ್ಜಿ ಉಳಿಸಿಕೊಂಡು ಬಂದಿದ್ದಾರೆ. ಮತ್ತೊಂದೆಡೆಗೆ ಎಎಪಿ ನಾಯಕ ದೆಹಲಿ ಮಾದರಿಯ ಬಗ್ಗೆ ಗೋವಾ ರಾಜ್ಯದ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರ ದೆಹಲಿ ರಾಜ್ಯವನ್ನು ಅಭಿವೃದ್ಧಿಪಡಿಸುತ್ತಿದೆ. ಕೇಂದ್ರದ ನಿಧಿಯಿಂದ ದೆಹಲಿಯಲ್ಲಿ ಆರೋಗ್ಯ, ವಿದ್ಯುತ್ ಮತ್ತು ಶಿಕ್ಷಣ ಇಲಾಖೆಗಳ ಅಭಿವೃದ್ಧಿ ಮಾಡಲಾಗಿದೆ ಎಂದು ದೇವೆಂದ್ರ ಫಡ್ನವೀಸ್ ನುಡಿದರು.
ಗೋವಾಕ್ಕೆ ವಲಸೆ ಹಕ್ಕಿಗಳು ಬಂದು ನಾನಾ ರೀತಿಯ ಭರವಸೆಗಳನ್ನು ನೀಡುತ್ತಿದ್ದರೂ ಕೂಡ ಚುನಾವಣೆ ಮುಗಿದ ಬಳಿಕ ಈ ಎಲ್ಲ ಪಕ್ಷಗಳು ತಮ್ಮ ತಮ್ಮ ಗ್ರಾಮಕ್ಕೆ ಮರಳಲಿವೆ. ಆದ್ಧರಿದ ಜನರು ಈ ಪಕ್ಷಗಳ ತಪ್ಪು ಕಲ್ಪನೆಗಳಿಗೆ ಬಲಿಯಾಗಬಾರದು ಎಂದು ದೇವೇಂದ್ರ ಫಡ್ನವೀಸ್ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ, ಶಾಸಕ ಬಾಬು ಕವಳೇಕರ್, ಮಾಜಿ ಸಂಸದ ನರೇಂದ್ರ ಸಾವಯಿಕರ್, ಮತ್ತಿತರರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.