Advertisement

1038 ಕೆರೆಗಳ ಅಭಿವೃದ್ಧಿಗೆ ವಿಶೇಷ ಯೋಜನೆ: ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ

05:02 PM Jul 17, 2022 | Team Udayavani |

ಬೆಂಗಳೂರು : ರಾಜ್ಯದ 1038 ಕೆರೆಗಳ ಹೂಳೆತ್ತಿ ಅಭಿವೃದ್ಧಿಪಡಿಸುವುದರ ಜೊತೆಗೆ ಅಕ್ಕಪಕ್ಕದ ರಾಷ್ಟ್ರೀಯ ಹೆದ್ದಾರಿ ಯೋಜನೆಗೂ ಅವುಗಳನ್ನು ಬಳಸಿಕೊಳ್ಳುವ ನೂತನ ಯೋಜನೆಗೆ ಕೇಂದ್ರದ ಭೂ ಸಾರಿಗೆ ಮತ್ತು ಹೆದ್ದಾರಿ ಮಂತ್ರಾಲಯದ ಸಹಯೋಗದಲ್ಲಿ ಚಾಲನೆ ನೀಡಲು ನಮ್ಮ ಲೋಕೋಪಯೋಗಿ ಇಲಾಖೆಯಿಂದಲೂ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಸೂಕ್ತ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಹೇಳಿದ್ದಾರೆ.

Advertisement

ಈ ಕುರಿತು ಮಾತನಾಡಿದ ಅವರು ದೇಶದಲ್ಲೇ ಮೊದಲ ಬಾರಿಗೆ ಜಾರಿಗೊಳ್ಳುತ್ತಿರುವ ಈ ಮಹತ್ವಾಕಾಂಕ್ಷಿ ಯೋಜನೆಗೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ವಿಶೇಷ ಆಸಕ್ತಿ ವಹಿಸಿದ್ದಾರೆ. ಇತ್ತೀಚೆಗೆ ಅವರು ನಮ್ಮ ರಾಜ್ಯಕ್ಕೆ ಭೇಟಿ ಕೊಟ್ಟಾಗ ಈ ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿ ಘೋಷಿಸಿದ್ದರು. ಅಷ್ಟೇ ಅಲ್ಲ, ಕಳೆದ ಬಜೆಟ್ಟಿನಲ್ಲಿ  ಮುಖ್ಯಮಂತ್ರಿಯವರಾದ ಬಸವರಾಜ ಬೊಮ್ಮಾಯಿಯವರು ಈ ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿ ಘೋಷಿಸಿದ್ದರು. ಅದರಂತೆ ನಮ್ಮ ರಾಜ್ಯದಲ್ಲಿನ 1038 ಕೆರೆಗಳನ್ನು ಈ ಯೋಜನೆಗೆ ಸೇರಿಸಲು ಸಣ್ಣ ನೀರಾವರಿ ಇಲಾಖೆಯಿಂದಲೂ ಸಹಮತಿ ಪಡೆಯಲಾಗಿದೆ. ಆ ಪ್ರಕಾರವಾಗಿ ನಮ್ಮ ಲೋಕೋಪಯೋಗಿ ಇಲಾಖೆಯ ಉಸ್ತುವಾರಿಯಲ್ಲಿ ಈ ಯೋಜನೆಯನ್ನು ಸಂಪೂರ್ಣ ಯಶಸ್ವಿಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಭೂ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯ ವತಿಯಿಂದ ಗುತ್ತಿಗೆದಾರರು ಈವರೆಗೆ ಹೆದ್ದಾರಿ ಅಭಿವೃದ್ಧಿ ಕೈಗೊಳ್ಳುವಾಗ ಅವುಗಳಿಗೆ ಅವಶ್ಯವಿರುವ ಮಣ್ಣನ್ನು ಸ್ಥಳೀಯವಾಗಿ ಖರೀದಿಸುತ್ತಿದ್ದರು. ಆದರೆ ಹೆದ್ದಾರಿ ಅಕ್ಕಪಕ್ಕದ ಕೆರೆ ಮತ್ತಿತರ ಜಲಮೂಲಗಳಲ್ಲಿ ಹೂಳು ತುಂಬಿ ನೀರಿನ ಲಭ್ಯತೆಗೆ ಸಮಸ್ಯೆಯಾಗುತ್ತಿತ್ತು. ಆದ್ದರಿಂದ ಹೆದ್ದಾರಿ ಅಭಿವೃದ್ಧಿ ಕೈಗೊಳ್ಳುವಾಗ ಇವುಗಳಿಗೆ ಅವಶ್ಯವಿರುವ ಮಣ್ಣನ್ನು ಇಂತಹ ಕೆರೆಗಳಿಂದಲೇ ತೆಗೆಸಿ ರಸ್ತೆಗೆ ಬಳಸಿದರೆ ಒಂದೆಡೆ ಕೆರೆಯ ಜೀರ್ಣೋದ್ಧಾರವಾಗುತ್ತದೆ, ಜೊತೆಗೆ ಹೆದ್ದಾರಿ ನಿರ್ಮಾಣಕ್ಕೆ ಅಗತ್ಯವಾದ ಮಣ್ಣು ಕೂಡಾ ಸುಲಭವಾಗಿ ದೊರೆತಂತಾಗುತ್ತದೆ. ಅಷ್ಟೇ ಅಲ್ಲ ಹೆದ್ದಾರಿಯ ಅಕ್ಕಪಕ್ಕ ಕೆರೆ, ಸರೋವರಗಳು ನಿರ್ಮಾಣಗೊಂಡು ಉತ್ತಮ ಪರಿಸರ ಸೃಷ್ಟಿಗೂ ಕಾರಣವಾಗುತ್ತದೆ, ಪ್ರವಾಸಿಗರಿಗೂ ಆಕರ್ಷಣೆಯಾಗುತ್ತದೆ ಎಂದು ಸಚಿವರು ವಿವರಿಸಿದ್ದಾರೆ.

ಇದನ್ನೂ ಓದಿ : ಹೆಚ್ಚಾಗುತ್ತಿದೆ ಬ್ಲ್ಯಾಕ್‌ಸ್ಪಾಟ್‌; ಪಾಲಿಕೆಗೆ ಸ್ವಚ್ಛತೆಯೇ ಸವಾಲು

ಆಜಾದೀ ಕಾ ಅಮೃತ ಮಹೋತ್ಸವದ ಆಚರಣೆಯ ಅಂಗವಾಗಿ ಹೆದ್ದಾರಿ ಮಂತ್ರಾಲಯವು “ಅಮೃತ ಸರೋವರ ನಿರ್ಮಾಣ” ಯೋಜನೆಯನ್ನು ನಿರ್ವಹಿಸಲು ನಮ್ಮ ರಾಜ್ಯಕ್ಕೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವನ್ನು ಅನುಷ್ಠಾನ ಸಂಸ್ಥೆಯನ್ನಾಗಿ ನೇಮಿಸಿದೆ. ಗುತ್ತಿಗೆದಾರರು ಅಥವಾ ರಸ್ತೆ ನಿರ್ಮಾಣ ಪ್ರಾಧಿಕಾರವು ಕೆರೆಗಳಿಂದ ಹೂಳು ತೆಗೆಯಲು ಸರ್ಕಾರಕ್ಕೆ ಯಾವುದೇ ಶುಲ್ಕ ನೀಡಬೇಕಾಗಿಲ್ಲ ಮತ್ತು ಈ ಹೂಳನ್ನು ರಸ್ತೆ ನಿರ್ಮಾಣಕ್ಕಲ್ಲದೇ ಬೇರೆ ಉದ್ದೇಶಕ್ಕೆ ಬಳಸುವಂತಿಲ್ಲ. ಕೆರೆಯ ಸಂರಕ್ಷಣೆಗೆ ಅಪಾಯವಾಗದಂತೆ ಏನೆಲ್ಲ ಮುಂಜಾಗ್ರತೆ ಕೈಗೊಳ್ಳಬೇಕು ಎಂಬ ಬಗ್ಗೆ ನಮ್ಮ ಲೋಕೋಪಯೋಗಿ ಇಲಾಖೆಯಿಂದ ವಿವರವಾದ ಮಾರ್ಗಸೂಚಿಯನ್ನು ಈಗಾಗಲೇ ಹೊರಡಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೊಂದಿಗೂ ಈಗಾಗಲೇ ಈ ಬಗ್ಗೆ ಹಲವು ಬಾರಿ ಸಭೆ ನಡೆಸಿ ಈ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದು ಸಿ.ಸಿ.ಪಾಟೀಲರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next