ಧಾರವಾಡ: ಕರ್ಕಾಟಕ ಸಂಕ್ರಾಂತಿ ವೃತ್ತ ತಲುಪುವುದಕ್ಕೆ ಇನ್ನು 15 ದಿನ ಬಾಕಿ ಇರುವಾಗಲೇ ಸೂರ್ಯದೇವನ ಹೊನ್ನಿನ ಕಿರಣಗಳು 2020ನೇ ವರ್ಷದ ಮೊದಲ ದಿನ ಚುಮುಚುಮು ಚಳಿಯ ಮಧ್ಯೆ ಕತ್ತಲನ್ನು ಸೀಳಿ ಹೊರಬಿದ್ದಾಗಿದೆ. 2019ನೇ ವರ್ಷದ ಸೂರ್ಯ ಮುಳುಗಿದ್ದು, ಅಭಿವೃದ್ಧಿಗೆ ಹಿಡಿದ ಗ್ರಹಣ ಈ ವರ್ಷವಾದರೂ ಅಂದರೆ 2020ನೇ ವರ್ಷದಲ್ಲಾದರೂ ಪರಿಪೂರ್ಣವಾಗಿ ಬಿಟ್ಟು, ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕು ಎನ್ನುವ ಆಶಯದೊಂದಿಗೆ ಜಿಲ್ಲೆಯ ಜನ ಎದುರು ನೋಡುತ್ತಿದ್ದಾರೆ.
ಹೌದು, ಮಲಪ್ರಭೆ ನೀರು ಮೊದಲು ಮಹದಾಯಿಯಿಂದ ಮಲಪ್ರಭೆ ಒಡಲಿಗೆ ಸೇರಬೇಕಿದೆ. ಇನ್ನು ಜಿಲ್ಲೆಯ ಮನೆ ಮನೆಗೆ ಮಲಪ್ರಭೆ ನೀರು ಹರಿಯಲು 1200 ಕೋಟಿ ರೂ. ಗಳನ್ನು ಸರ್ಕಾರ ನೀಡಬೇಕಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಎಲ್ಲರೂ ಈ ವಿಚಾರದಲ್ಲಿ ಭರವಸೆ ಇಟ್ಟುಕೊಂಡಿದ್ದಾರೆ. ಮುಂಬೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಯೋಜನೆ ನನೆಗುದಿಗೆ ಬಿದ್ದಿದ್ದು, ಇನ್ನಷ್ಟು ದೊಡ್ಡ ಕೈಗಾರಿಕೆಗಳು ಧಾರವಾಡ ಜಿಲ್ಲೆಗೆ ಬರಬೇಕಿದೆ. ಮೊದಲೇ ನಿರುದ್ಯೋಗದಿಂದ ಜಿಲ್ಲೆಯ ಯುವಕರು ಕಂಗಾಲಾಗಿದ್ದು, ಹೊಸ ಕೈಗಾರಿಕೆಗಳು ಇಲ್ಲಿ ಸ್ಥಾಪಿತವಾಗುವುದು ಅತ್ಯವಶ್ಯಕವಾಗಿದೆ.
ಕಾಳಿ ನದಿ ನೀರು ವೃಥಾ ಸಮುದ್ರ ಸೇರುತ್ತಿದ್ದು, ಈ ನೀರನ್ನು ಜಿಲ್ಲೆಯ ಪಶ್ಚಿಮ ತಾಲೂಕುಗಳಿಗೆ ಕುಡಿಯಲು ಮತ್ತು ನೀರಾವರಿಗೆ ಬಳಸಿಕೊಳ್ಳುವ ಪ್ರಸ್ತಾವನೆ, ಕಲಘಟಗಿ ಬಳಿ 2 ಟಿಎಂಸಿ ಸಾಮರ್ಥ್ಯದ ಅಣೆಕಟ್ಟು ನಿರ್ಮಿಸಿ 43 ಕೆರೆ ತುಂಬಿಸುವ ಯೋಜನೆಗೆ ಮತ್ತೆ ಮರುಜೀವ ತುಂಬಿದರೆ ಈ ಭಾಗದ ರೈತರಿಗೆ ಅನುಕೂಲವಾಗಲಿದೆ. ಆಲೊ³àನ್ಸೋ ಮಾವಿನ ಹಣ್ಣಿನ ರಫ್ತು ಕೇಂದ್ರ ತಲೆ ಎತ್ತಬೇಕಿದೆ. ಒಟ್ಟಿನಲ್ಲಿ 2020ನೇ ವರ್ಷ ಆಶಾದಾಯಕವಾಗಿರಬೇಕೆಂಬುದು ಜಿಲ್ಲೆಯ ಜನರ ಆಶಯವಾಗಿದೆ.
ಸೂಕ್ತವಾಗಬೇಕಿದೆ ನೆರೆ ಪರಿಹಾರ: ಇನ್ನು ನೆರೆ ಪರಿಹಾರ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿವೆ. ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಮತ್ತು ಸ್ವಜಾತಿ ಬಂಧುಗಳ ಎರಡು ವರ್ಷ ಹಿಂದೆಯೇ ಬಿದ್ದ ಮನೆಗಳಿಗೆ ಬಿಲ್‌ಗಳನ್ನು ತೆಗೆಯಲಾಗಿದೆ. ಈ ಕುರಿತು ಗಂಭೀರ ಸ್ವರೂಪದ ಆರೋಪಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ಸೂಕ್ತ ತನಿಖೆ ಮತ್ತು ನಿಜವಾಗಿಯೂ ನೆರೆಹಾವಳಿಯಿಂದ ಸಂಕಷ್ಟಕ್ಕೆ ಒಳಗಾಗಿರುವ ಕುಟುಂಬಗಳಿಗೆ ಪರಿಹಾರ ಒದಗಿಸಿಕೊಡಲು ಜಿಲ್ಲಾಡಳಿತ ಶ್ರಮಿಸಬೇಕಿದೆ. ನೆರೆಯಿಂದ ಬೆಳೆಹಾನಿಯಾಗಿದ್ದು ಒಂದೆಡೆಯಾದರೆ ಹೊಲಕ್ಕೆ ಹೊಲಗಳೇ ಕಿತ್ತುಕೊಂಡು ಹೋಗಿದ್ದು ಜಿಲ್ಲೆಯ 15 ಸಾವಿರಕ್ಕೂ ಅಧಿಕ ರೈತರ ಹೊಲಗಳಲ್ಲಿ ಭೂಮಿಯೇ ಕಿತ್ತುಕೊಂಡು ಹೋಗಿದೆ. ಅಂತಹ ರೈತರಿಗೆ ಮರಳಿ ತಮ್ಮ ಹೊಲಗಳನ್ನು ಸರಿ ಮಾಡಿಕೊಳ್ಳಲು ಅಗತ್ಯ ಪರಿಹಾರ ನೀಡಬೇಕಿದೆ. ಕಿತ್ತು ಹೋಗಿರುವ ಸೇತುವೆಗಳ ಪುನರ್ ನಿರ್ಮಾಣ, ಹೊಸ ರಸ್ತೆಗಳ ನಿರ್ಮಾಣ, ಕಾಲುವೆಗಳ ಸುಧಾರಣೆ, ಕಿರು ನೀರಾವರಿ ಯೋಜನೆಗಳ ತುರ್ತು ಕಾಮಗಾರಿ ಹೀಗೆ ಅನೇಕ ಕೆಲಸಗಳು ಬಾಕಿ ಉಳಿದಿದ್ದು, 2020ನೇ ವರ್ಷದಲ್ಲಿ ಇವುಗಳಿಗೆ ಜಿಲ್ಲೆಯ ಆಡಳಿತ ಒತ್ತು ನೀಡಬೇಕಿದೆ. ನಮ್ಮ ಹೊಲ ನಮ್ಮ ರಸ್ತೆ ಯೋಜನೆ ವ್ಯಾಪ್ತಿಯಲ್ಲಿ ನಿರ್ಮಿಸಿದ್ದ 500 ಕಿಮೀ ರಸ್ತೆ ನೆರೆಯಿಂದ ಹಾನಿಗೆ ಒಳಗಾಗಿದ್ದು ಅದನ್ನು ಪುನರ್ ನಿರ್ಮಿಸಿ ರೈತರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಬೇಕಿದೆ.
ಈ ರಸ್ತೆಗಳ ನಿರ್ಮಾಣಕ್ಕೆ ಸ್ಥಳೀಯ ಕೂಲಿಕಾರ್ಮಿಕರನ್ನು ಬಳಸಿಕೊಂಡರೆ ನಿರುದ್ಯೋಗವು ನೀಗುತ್ತದೆ. 2020ರಲ್ಲಿ ಜಿಲ್ಲಾ ಪಂಚಾಯಿತಿ ಈ ನಿಟ್ಟಿನಲ್ಲಿ ಗಮನ ಹರಿಸುವ ಅಗತ್ಯವಿದೆ. 2019ರಲ್ಲಿ ಬಂದ ಪ್ರವಾಹದ ವೇಳೆ ಜಿಲ್ಲೆಯಿಂದ 20 ಟಿಎಂಸಿ ನೀರು ವೃಥಾ ಹರಿದು ಹೋಯಿತು. ಕೆರೆಗಳಲ್ಲಿ ಹೂಳೆತ್ತದೆ ಇದ್ದಿದ್ದರಿಂದ ನೀರು ಸಾಕಷ್ಟು ಪ್ರಮಾಣದಲ್ಲಿ ಶೇಖರಣೆಯಾಗಿಲ್ಲ. 2020ನೇ ವರ್ಷದಲ್ಲಾದರೂ ಮಳೆ ನೀರು ಬಳಸಿಕೊಳ್ಳಲು ಹೊಸ ಯೋಜನೆ ರೂಪಿಸಬೇಕಿದೆ.
ಸ್ಮಾರ್ಟ್ ಆಗುವುದೇ ಅವಳಿ ನಗರ? : ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಹು-ಧಾ ಅವಳಿನಗರ ಸ್ಮಾರ್ಟ್‌ಸಿಟ್ಟಿ ಪಟ್ಟಿಯಲ್ಲಿ ಸೇರ್ಪಡೆಯಾಯಿತು. ಇದಾಗಿ ಬರೋಬ್ಬರಿ 7 ವರ್ಷಗಳು ಗತಿಸಿದರೂ ಇನ್ನು ಸ್ಮಾರ್ಟ್‌ಸಿಟಿ ಅನುದಾನ ಪರಿಪೂರ್ಣ ಬಳಕೆಯಾಗಿಲ್ಲ. ಈ ಯೋಜನೆ ಅನ್ವಯ ಜಾರಿಯಾಗಿರುವ ಕಾಮಗಾರಿಗಳು ಕುಂಟುತ್ತಲೇ ಸಾಗಿವೆ. ಹುಬ್ಬಳ್ಳಿಯಲ್ಲಿ 35 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಟೆಂಡರ್‌ಶ್ಯೂರ್ ರಸ್ತೆ ಮಾದರಿಯಲ್ಲಿಯೇ ಅವಳಿನಗರದಲ್ಲಿ ಇನ್ನಷ್ಟು ಪ್ರಧಾನ ರಸ್ತೆಗಳು ನಿರ್ಮಾಣವಾಗಬೇಕಿದೆ. ಒಳಚರಂಡಿ ನೀರನ್ನು ಶುದ್ಧೀಕರಿಸಿ ಮುಂದೆ ಹರಿಸುವ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.
ಶೆಟ್ಟರ-ಜೋಶಿ ಜೋಡಿ ಮೇಲೆ ನಿರೀಕ್ಷೆಯ ಕಣ್ಣು : ಹಿಂದಿನ ಸರ್ಕಾರ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡಿಲ್ಲ ಎನ್ನುವಂತಿಲ್ಲ. ಇದೀಗ ಜಿಲ್ಲೆಯಿಂದ ಕೇಂದ್ರ ಮತ್ತು ರಾಜ್ಯ ಎರಡೂ ಸರ್ಕಾರಗಳಲ್ಲಿ ಪ್ರಭಾವಿ ಖಾತೆಯಲ್ಲಿದ್ದಾರೆ ಸಂಸದ ಪ್ರಹ್ಲಾದ ಜೋಶಿ ಮತ್ತು ಜಗದೀಶ ಶೆಟ್ಟರ. ಅವರ ದೂರಾಲೋಚನೆ, ಆಡಳಿತದ ಮೇಲಿನ ಹಿಡಿತ ಮತ್ತು ಇಚ್ಛಾಶಕ್ತಿ 2020ನೇ ವರ್ಷ ಜಿಲ್ಲೆಯ ಪಾಲಿಗೆ ಇನ್ನಷ್ಟು ಶುಭ ಘಳಿಗೆಗಳನ್ನು ತರಬೇಕಿದೆ. ಕೃಷಿಯ ಸಮಗ್ರ ಅಭಿವೃದ್ಧಿಗೆ ಸೂಕ್ತ ಯೋಜನೆ ರೂಪಿಸಬೇಕಿದ್ದು, ಜಿಲ್ಲೆಯಲ್ಲಿ ಬಿದ್ದು ಹೋಗುವ ನೀರನ್ನು ಹಿಡಿದಿಟ್ಟುಕೊಳ್ಳಲು ಮುನ್ನೆಚ್ಚರಿಕೆ ವಹಿಸಬೇಕಿದೆ. ಇನ್ನು ಹುಬ್ಬಳ್ಳಿ ಧಾರವಾಡಕ್ಕೆ ವಿಶೇಷ ಅನುದಾನ ಈ ವರ್ಷದ ಬಜೆಟ್‌ನಲ್ಲಾದರೂ ಘೋಷಣೆಯಾಗಬೇಕಿದೆ. ಒಟ್ಟಿನಲ್ಲಿ 2020ರಲ್ಲಿ ಆಗಬೇಕಿರುವುದು ಬಹಳಷ್ಟಿದ್ದು, ಜಿಲ್ಲೆಯ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ.
ಹೊಸ ವರ್ಷವಾದರೂ ಜಿಲ್ಲೆಯ ಪಾಲಿಗೆ ಇನ್ನಷ್ಟು ಅಭಿವೃದ್ಧಿಯ ಯೋಜನೆಗಳನ್ನು ತರುವಂತಾಗಬೇಕು. ಜಿಲ್ಲೆಯ ಪ್ರಭಾವಿ ಸಚಿವರು ರಾಜ್ಯ, ಕೇಂದ್ರ ಸರ್ಕಾರದಿಂದ ಜಿಲ್ಲೆಯ ಹಳ್ಳಿಗಳು ಮತ್ತು ನಗರಾಭಿವೃದ್ಧಿಗೆ ವಿಶೇಷ ಅನುದಾನ ತರಬೇಕು. 2020 ವರ್ಷ ಜಿಲ್ಲೆಯ ಪಾಲಿಗೆ ಇನ್ನಷ್ಟು ಅಭಿವೃದ್ಧಿ ಯೋಜನೆಗಳನ್ನು ತರುವ ವರ್ಷವಾಗಬೇಕು.
–ವಿನಯ್ ಕುಲಕರ್ಣಿ, ಮಾಜಿ ಸಚಿವ
-ಬಸವರಾಜ ಹೊಂಗಲ್