Advertisement

ದೊಡ್ಡ ಪಟ್ಟಣವಾಗುವ ಭಾಗ್ಯವಿದೆ: ಯೋಗ ಒದಗಿ ಬರಲಿ

01:14 PM Jun 27, 2022 | Team Udayavani |

ಬೈಂದೂರು: ಉಡುಪಿ ಜಿಲ್ಲೆಯ ಗಡಿಭಾಗದ ಗ್ರಾಮ ಶಿರೂರು. ನೋಡಲಿಕ್ಕೆ ದೊಡ್ಡದು. ಜನಸಂಖ್ಯೆಯೂ ವಿಪುಲ. ಬೈಂದೂರು ಪಟ್ಟಣ ಪಂಚಾಯತ್‌ ಜತೆ ವಿಲೀನವಾಗದೆ ಉಳಿದ ಗ್ರಾಮ ಮತ್ತು ಗ್ರಾಮ ಪಂಚಾಯತ್‌ ಇದು.

Advertisement

ಅಭಿವೃದ್ಧಿಗೆ ವಿಪುಲ ಅವಕಾಶಗಳಿರುವ ಗ್ರಾಮವಿದು. ಒಂದಿಷ್ಟು ದೂರದೃಷ್ಟಿಯುಳ್ಳ ಯೋಜನೆಗಳು ಅನುಷ್ಠಾನ ವಾದರೆ ಬೈಂದೂರು ಭಾಗಕ್ಕೆ ದೊಡ್ಡ ಪಟ್ಟಣವನ್ನಾಗಿಯೂ ಬೆಳೆಸಬಹುದು.

ಕೃಷಿ, ಮೀನುಗಾರಿಕೆ ಹಾಗೂ ಕೆಲವು ವಾಣಿಜ್ಯ ವಹಿವಾಟು ಇಲ್ಲಿನವರ ಬದುಕು. ಅಂದಾಜು 25 ಸಾವಿರ ಜನಸಂಖ್ಯೆ ಇದ್ದರೂ ಇಚ್ಛಾಶಕ್ತಿ ಹಾಗೂ ದೂರದೃಷ್ಟಿಯ ಕೊರತೆಯಿಂದ ನಿರೀಕ್ಷೆಯಷ್ಟು ಬೆಳೆದಿಲ್ಲ ಎನ್ನುತ್ತಾರೆ ಸ್ಥಳೀಯರು.

ಈ ಮಾತಿನಲ್ಲೂ ಹುರುಳಿದೆ. ಶಿರೂರಿನಲ್ಲೂ ಭೂ ಭಾಗಕ್ಕೇನೂ ಕೊರತೆ ಇಲ್ಲ. ಶಿರೂರಿನ ವಿಸ್ತೀರ್ಣ 13,782 ಹೆಕ್ಟೇರ್‌ಗಳು. ಶಿರೂರು ಬಿಟ್ಟರೆ ಅನಂತರ ಸಿಗುವ ದೊಡ್ಡ ಪಟ್ಟಣವೆಂದರೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ. ಇವೆರಡರ ನಡುವೆ ಸುಮಾರು 17 ಕಿ.ಮೀ. ಅಂತರವಿದೆ. ಇವುಗಳ ನಡುವೆ ಇರುವ ಸಣ್ಣ ಊರುಗಳಿಗೆ ದೊಡ್ಡದಾಗಿ ಶಿರೂರನ್ನು ಬೆಳೆಸಿದರೆ, ಉಡುಪಿ ಜಿಲ್ಲೆಯ ಹೆಬ್ಟಾಗಿಲಿನಿಂದಲೇ ಅಭಿವೃದ್ಧಿಯ ಜಾಥಾ ಹೊರಟಂತಾಗುತ್ತದೆ. ಅದಾಗಬೇಕು ಎಂಬುದು ಜನರ ಹೆಬ್ಬಯಕೆ.

ಊರೊಳಗೆ ಹೊಕ್ಕೋಣ ಬನ್ನಿ

Advertisement

ಒಮ್ಮೆ ಊರಿನೊಳಗೆ ಹೊಕ್ಕರೆ ದಟ್ಟಿ ಗಟ್ಟಿ, ಹಾಳೆ ಹಾಳು ಎನ್ನುವ ಪುಸ್ತಕದಂತಿದೆ. ಅಂದರೆ ಪೇಟೆ, ವಠಾರ, ಪಟ್ಟಣ ವ್ಯಾಪ್ತಿಗೆ ಸಮೀಪದಲ್ಲಿರುವ ಭಾಗಗಳಲ್ಲಿ ಒಂದಿಷ್ಟು ಪ್ರಗತಿ ಕಾಣುತ್ತದೆ. ಊರಿನ ಶ್ರೀಮಂತಿಕೆ ಬಿಂಬಿಸುವಂತೆ ತೋರಬಹುದು. ಆದರೆ. ಒಳಗೆ ಒಂದಿಷ್ಟು ಸಮಸ್ಯೆಗಳಿಂದ ಬಳಲುತ್ತಿದೆ. ಈ ಸಮಸ್ಯೆಗಳಿಗೆ ಪರಿಹಾರ ಹುಡುಕುವಲ್ಲಿ ಸರಕಾರ, ಗ್ರಾಮ ಪಂಚಾಯತ್‌ ಹಾಗೂ ಜನಪ್ರತಿನಿಧಿಗಳು ಒಟ್ಟಾಗಿ ಪ್ರಯತ್ನಿಸಬೇಕು. ಅದಾದರೆ ಶಿರೂರು ಊರುಶ್ರೀಮಂತ ಊರಾಗಬಹುದು.

ಶಿರೂರು ಪೇಟೆ ವ್ಯಾಪ್ತಿ ಹೊರತುಪಡಿಸಿದರೆ ಕರಾವಳಿ, ದೊಂಬೆ, ಮೇಲ್ಪಂಕ್ತಿ ಮುಂತಾದ ಭಾಗಗಳಲ್ಲಿ ಕೃಷಿಯೇ ಪ್ರಧಾನ. ಇತ್ತೀಚಿನ ವರ್ಷಗಳಲ್ಲಿ ಸಂಕದಗುಂಡಿ ಹೊಳೆ ಹಾಗೂ ಮೊಗೇರ ಹೊಳೆಗೆ ಅಣೆಕಟ್ಟು ನಿರ್ಮಿಸಿದ ಪರಿಣಾಮ ಅಂತರ್ಜಲ ಮಟ್ಟ ಹೆಚ್ಚಿದೆ. ಇದು ಒಳ್ಳೆಯ ಬೆಳವಣಿಗೆ. ಆದರೆ ಕೃಷಿಗೆ ನೀರು ಹಾಯಿಸುವ ಉತ್ತಮ ಯೋಜನೆಗಳು ಗ್ರಾಮ ಪಂಚಾಯತ್‌ನಿಂದ ಇನ್ನೂ ಜಾರಿಗೊಂಡಿಲ್ಲ. ಅದು ಶೀಘ್ರವೇ ಆಗಬೇಕು. ಇದರ ಜತೆಗೆ ಅಭಿವೃದ್ಧಿ, ಪಾಳು ಬಿದ್ದಿರುವ ಕೃಷಿ ತೋಡುಗಳನ್ನು ಬದಿ ಕಟ್ಟುವ ಕೆಲಸವೂ ಆಗಬೇಕು. ಆಗ ಈ ಪ್ರದೇಶಗಳಲ್ಲಿ ಹಡಿಲು ಬಿದ್ದಿರುವ ಹಲವಾರು ಎಕರೆ ಕೃಷಿ ಭೂಮಿಯಲ್ಲಿ ಬೆಳೆ ನಳನಳಿಸಬಹುದು.

ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿ

ಹೆದ್ದಾರಿ ಅಗಲಗೊಂಡ ಬಳಿಕ ಕಳಿಹಿತ್ಲು, ಹಡವಿನಕೋಣೆ, ಕೆಸರಕೋಡಿ ಮುಂತಾದ ಭಾಗಗಳಲ್ಲಿ ಪ್ರತೀ ಬೇಸಗೆಯಲ್ಲೂ ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುತ್ತದೆ. ಇದಕ್ಕೆ ಪರಿಹಾರ ಹುಡುಕಬೇಕಿದೆ.

ಆರ್ಮಿ, ಬುಕಾರಿ ಕಾಲನಿ, ಕಳಿಹಿತ್ಲು, ಹಡವಿನಕೋಣೆ ಒಳ ಭಾಗಗಳಾದ ಅಳ್ವೆಗದ್ದೆ ಮುಂತಾದ ಕಡೆ ರಸ್ತೆ ಅಭಿವೃದ್ದಿ ಮತ್ತು ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಜತೆಗೆ ಸ್ವಚ್ಛತೆಯ ಕಡೆ‌ಗೂ ಗಮನಹರಿಸಬೇಕು. ಶಿರೂರಿನ ಪ್ರಮುಖ ಭಾಗವಾಗಿರುವ ಅಂಡರ್‌ ಪಾಸ್‌, ಮಾರ್ಕೆಟ್‌ ವಠಾರಗಳು ಸ್ವಚ್ಛತೆ ಕಾಣದೇ ನಗರದ ಸೌಂದರ್ಯಕ್ಕೆ ಮಸಿ ಬಳಿಯುತ್ತಿವೆ. ಇದಕ್ಕೆ ಗ್ರಾಮ ಪಂಚಾಯತ್‌ ಜತೆಗೆ ಗ್ರಾಮಸ್ಥರೂ ಕೈ ಜೋಡಿಸಬೇಕು.

ಕೆಳಪೇಟೆ ಮತ್ತು ಮಾರ್ಕೆಟ್‌ನಲ್ಲಿ ಗ್ರಾ.ಪಂ. ಪ್ರಯಾಣಿಕರಿಗೆ ತಂಗುದಾಣ ಮತ್ತು ಶೌಚಾಲಯವಿಲ್ಲ. ಇವುಗಳನ್ನು ಕಲ್ಪಿಸದಿದ್ದರೆ ಕ್ರಮೇಣ ಸ್ವಚ್ಛತೆ ಸೇರಿದಂತೆ ಇತರೆ ಸಮಸ್ಯೆಗಳೂ ಉದ್ಭವಿಸಲಿವೆ.

ಮೀನುಗಾರಿಕೆ ವಿಸ್ತರಣೆಯಾಗಲಿ

ಅಳ್ವೆಗದ್ದೆ ಹಾಗೂ ಕಳಿಹಿತ್ಲು ಪ್ರಮುಖ ಬಂದರು ಪ್ರದೇಶ. ಇಲ್ಲಿನ ಮೀನುಗಾರರ ಅಭಿವೃದ್ದಿಗೆ ಸರಕಾರ ಒಂದೆರಡು ಮಹತ್ವದ ಯೋಜನೆ ರೂಪಿಸಿದೆ. ಅದೂ ಸಮಗ್ರವಾಗಿಲ್ಲ. ಬ್ರೇಕ್‌ ವಾಟರ್‌ ಒಂದು ಭಾಗಕ್ಕೆ ಬಂದಿದೆ, ದಕ್ಷಿಣ ದಿಕ್ಕಿನಲ್ಲಾಗಬೇಕು. ಹಾಗೆಯೇ ಜಟ್ಟಿ ದುರಸ್ತಿ ಆಗಿದೆ. ಆದರೆ ಬಂದರು ಅಭಿವೃದ್ಧಿ ಸಮಗ್ರವಾಗಿ ಆಗಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ಮೀನುಗಾರರ ಅಭಿಪ್ರಾಯ ಪಡೆದು ತಡೆಗೋಡೆ ವಿಸ್ತರಣೆ, ಜಟ್ಟಿ ಸುಧಾರಣೆ, ಕಳಿಹಿತ್ಲು ಬಂದರು ಅಭಿವೃದ್ದಿ, ಮೀನುಗಾರಿಕಾ ರಸ್ತೆ ಸುಧಾರಣೆ ಮಾಡಬೇಕಿದೆ.

ಶಿರೂರಿಗೆ ವರ್ತುಲ ರಸ್ತೆ (ರಿಂಗ್‌ ರೋಡ್‌) ಬಂದರೆ ಹೇಗೆ ಎಂಬ ಅಭಿಪ್ರಾಯವೂ ಇದೆ. ಒಂದೆಡೆ ಮಲೆನಾಡು; ಇನ್ನೊಂದೆಡೆ ಭೋರ್ಗರೆವ ಕಡಲು. ಆದ ಕಾರಣ, ಒಂದು ವರ್ತುಲ ರಸ್ತೆ ನಿರ್ಮಾಣವಾದರೆ ಸಂಪೂರ್ಣ ಶಿರೂರಿಗೆ ಸಂಪರ್ಕ ಕಲ್ಪಿಸಲೂ ಸಾಧ್ಯ. ಆಗ ಸುತ್ತಿ ಬಳಸುವ ಸಮಸ್ಯೆಯೂ ಇಲ್ಲವಾಗಬಹುದು. ಆದರೆ ಇದರ ಕಾರ್ಯ ಸಾಧ್ಯತೆ ಹಾಗೂ ಅಗತ್ಯವನ್ನು ಗಮನಹರಿಸಿ ಮುಂದುವರಿಯುವುದು ಸೂಕ್ತ ಎನ್ನುವಂತಿದೆ.

ಶಿರೂರು ಜನಸಂಖ್ಯೆ ಮತ್ತು ಭೌಗೋಳಿಕ ವ್ಯಾಪ್ತಿಯಿಂದ ಕೇವಲ ಗ್ರಾ. ಪಂ. ನಿರ್ವಹಿಸು ವುದು ಕಷ್ಟ. ಶಿರೂರು ಎರಡು ಗ್ರಾ.ಪಂ. ಗಳಾದರೆ ಅನುಕೂಲವಾಗಬಹುದು. ಇಲ್ಲವಾದರೆ ಮೇಲ್ದರ್ಜೆಗೇರಬೇಕು. ಈಗಾ ಗಲೇ ಬೈಂದೂರು ಪ.ಪಂ.ಆದ ಕಾರಣ ಗಡಿ ಭಾಗವಾದ ಶಿರೂರಿನಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳಿಗೆ ಕಾನೂನಾತ್ಮಕ ತೊಡಕುಗಳಿವೆ. ಹೀಗಾಗಿ ಭವಿಷ್ಯದ ದೃಷ್ಟಿಯಿಂದ ಶಿರೂರಿನ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳಲು ಇದು ಸಕಾಲ.

ಅಭಿವೃದ್ಧಿಗೆ ಆದ್ಯತೆ: ಶಿರೂರು ಗ್ರಾಮಕ್ಕೆ ಸರಕಾರದಿಂದ ಸಿಗುವ ಎಲ್ಲ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲಾಗುತ್ತಿದೆ. ಸ್ವಚ್ಚತೆ, ಆರೋಗ್ಯ ವಿಷಯದಲ್ಲಿ ವಿಶೇಷ ಮುತುವರ್ಜಿ ವಹಿಸಲಾಗಿದೆ. ಹೆದ್ದಾರಿ ಅಗಲಗೊಂಡ ಮೇಲೆ ಕುಡಿಯುವ ನೀರಿನ ಪೈಪ್‌ಲೈನ್‌ ಸಮಸ್ಯೆ ಆಗಿದೆ. ಪ್ರತೀ ವಾರ್ಡ್‌ನಲ್ಲಿ ಜನರ ಸಮಸ್ಯೆ ಆಲಿಸಿ ಸ್ಥಳೀಯ ಸದಸ್ಯರ ಸಹಕಾರದಿಂದ ಸೇವೆ ಒದಗಿಸಲಾಗುತ್ತಿದೆ. –ಜಿ.ಯು.ದಿಲ್‌ಶಾದ್‌ ಬೇಗಂ, ಗ್ರಾ.ಪಂ. ಅಧ್ಯಕ್ಷರು

ಅಭಿವೃದ್ಧಿಗೆ ಅವಕಾಶವಿರುವ ಊರು: ಶಿರೂರಿನ ಅಭಿವೃದ್ಧಿಗೆ ಹಲವು ಅವಕಾಶಗಳಿವೆ. ಕರಾವಳಿ ಭಾಗ ಮತ್ತು ಪೇಟೆ ಭಾಗಕ್ಕೆ ಸಾಕಷ್ಟು ವ್ಯತ್ಯಾಸಗಳಿವೆ. ದೊಡ್ಡ ಊರು ಆದ ಕಾರಣ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಸಾಕಾಗುತ್ತಿಲ್ಲ. ಕೃಷಿ ಮತ್ತು ಮೀನುಗಾರಿಕೆಗೆ ಕೆಲವು ಒಳ್ಳೆಯ ಯೋಜನೆಗಳನ್ನು ಜಾರಿಗೊಳಿಸಬೇಕು. ಕೃಷಿಗೂ ಒತ್ತು ನೀಡಬೇಕು. ಪಶು ಆಸ್ಪತ್ರೆ, ರೈತ ಸಂಪರ್ಕ ಕೇಂದ್ರ ಹಾಗೂ ಪೊಲೀಸ್‌ ಸಬ್‌ ಸ್ಟೇಷನ್‌ ಸ್ಥಾಪಿಸಬೇಕಿದೆ. –ರವೀಂದ್ರ ಶೆಟ್ಟಿ, ಅಧ್ಯಕ್ಷರು, ರೈತ ಸಂಘ ಶಿರೂರು

-ಅರುಣ್‌ ಕುಮಾರ್‌ ಶಿರೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next