Advertisement

ಗ್ರಾಮದಲ್ಲಿ ಚುನಾವಣ ಬಹಿಷ್ಕಾರದ ಕೂಗು

11:05 AM Sep 15, 2022 | Team Udayavani |

ಅರಂತೋಡು: ಅರಂತೋಡು ಕೃಷಿ ಪ್ರಧಾನವಾದ ಗ್ರಾಮ. ಅಡಿಕೆಯೇ ಇಲ್ಲಿಯ ಮುಖ್ಯ ಬೆಳೆ. ಅಡಿಕೆ ಮರಕ್ಕೆ ಎಲೆ ಹಳದಿ ರೋಗ ಬಾಧಿಸಿರುವುದರಿಂದ ಗ್ರಾಮದ ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಉಪ ಬೆಳೆಯಾಗಿ ಬೆಳೆಯುತ್ತಿರುವ ರಬ್ಬರ್‌ ಕೊಂಚ ಕೈ ಹಿಡಿದಿರುವುದು ಸಮಾಧಾನದ ಸಂಗತಿ.

Advertisement

ಗ್ರಾಮದಲ್ಲಿ ಆರು ತೋಡು ಇದ್ದ ಹಿನ್ನೆಲೆಯಲ್ಲಿ ಅರಂತೋಡು ಎಂದು ಹೆಸರು ಬಂದಿತು ಎಂಬುದು ಹಿರಿಯರ ಅಭಿಪ್ರಾಯ. ಸುಳ್ಯ ತಾಲೂಕು ಕೇಂದ್ರದಿಂದ ಅರಂತೋಡು ಗ್ರಾ.ಪಂ. ಕಚೇರಿ ಸುಮಾರು 11 ಕಿ.ಮೀ ದೂರದಲ್ಲಿದೆ. ಕೊಡಗು ಜಿಲ್ಲೆಯೊಂದಿಗೆ ಗಡಿಯನ್ನು ಹಂಚಿ ಕೊಂಡಿರುವ ಗ್ರಾಮವೂ ಹೌದು.

1 ಸಂಯುಕ್ತ ಪದವಿ ಪೂರ್ವ ಕಾಲೇಜು, ಎರಡು ಹಿರಿಯ ಪ್ರಾಥ ಮಿಕ ಶಾಲೆಗಳು ಮೂರು ಕಿರಿಯ ಪ್ರಾಥಮಿಕ ಶಾಲೆಗಳಿವೆ. ಒಂದು ರಾಷ್ಟ್ರೀಕೃತ ಬ್ಯಾಂಕ್‌, ಸಹಕಾರಿ ಸಂಘ, ಪ್ರಾಥಮಿಕ ಆರೋಗ್ಯ ಕೇಂದ್ರ, ಪೋಸ್ಟ್‌ ಆಫೀಸ್‌, ಪಶುಚಿಕಿತ್ಸಾ ಕೇಂದ್ರವಿದೆ.

ಗ್ರಾಮದ ರಸ್ತೆಗಳು ಅಭಿವೃದ್ಧಿ ಯಾಗಬೇಕಿವೆ ಎಂಬುದು ಗ್ರಾಮಸ್ಥರ ಬೇಡಿಕೆ. ಅಡ್ತಲೆ ಮೂಲಕ ಎಲಿಮಲೆಯನ್ನು ಸಂಪರ್ಕಿಸುವ ರಸ್ತೆಯ ಅಭಿವೃದ್ಧಿಯೂ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಡ್ತಲೆ ಭಾಗದ ಜನರು ನಾಗರಿಕ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ಮುಂದಿನ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಅಡ್ತಲೆ ಎಲಿಮಲೆ ಸಂಪರ್ಕ ರಸ್ತೆ ಮಡಿಕೇರಿ ಭಾಗದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅತೀ ಪ್ರಮುಖ ರಸ್ತೆ. ಈ ರಸ್ತೆ ಕಿರಿದಾಗಿದ್ದು, ತಿರುವುಗಳಿಂದ ಕೂಡಿದೆ. ಜತೆಗೆ ಹದಗೆಟ್ಟಿದೆ ಹಾಗಾಗಿ ವಾಹನ ಸಂಚಾರ ತೀರಾ ಕಷ್ಟ ಎಂಬಂತಿದೆ.

ಅಡ್ತಲೆ ನೆಕ್ಕರೆ ಸಂಪರ್ಕ ರಸ್ತೆ ಅಭಿವೃದ್ಧಿಯಾಗಿಲ್ಲ. ಅರಂತೋಡು ಕುಕ್ಕುಂಬಳ ಅಂಗಡಿಮಜಲು ಸಂಪರ್ಕ ರಸ್ತೆ ಪೂರ್ಣವಾಗಿ ಅಭಿವೃದ್ಧಿಗೊಂಡಿಲ್ಲ. ಇರ್ನೆ ದೇರಾಜೆ ಸಂಪರ್ಕ ರಸ್ತೆ, ಅಂಗಡಿಮಜಲು ಬಿಳಿಯಾರು ರಸ್ತೆ ಅಭಿವೃದ್ಧಿಗೊಳ್ಳಬೇಕಾಗಿದೆ. ಅರಂತೋಡು ಪೇಟೆಯಲ್ಲಿ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ರಸ್ತೆಯ ಫ‌ುಟ್‌ಪಾತ್‌ಗಳು, ಚರಂಡಿ, ರಸ್ತೆಯ ತಡೆಬೇಲಿಗಳು ಹಾಳಾಗಿ ಅಪಾಯಕಾರಿ ಸ್ಥಿತಿಯಲ್ಲಿವೆ.

Advertisement

ಗ್ರಾ.ಪಂ. ವತಿಯಿಂದ ಕೊಡಂಕೇರಿಯಲ್ಲಿ ಸ್ವತ್ಛ ಸಂಕೀರ್ಣ ತೆರೆದು ಅರಂತೋಡು ಮತ್ತು ತೊಡಿಕಾನ ಗ್ರಾಮಗಳ ತ್ಯಾಜ್ಯಗಳನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ.

ಸೇತುವೆಯ ಬೇಡಿಕೆ

ಅರಮನೆಗಾಯ ಹೊಳೆಗೆ ಶಾಶ್ವತ ಸೇತುವೆ ನಿರ್ಮಿಸಬೇಕೆಂಬುದು ಸ್ಥಳೀಯರ ಹಲವು ವರ್ಷಗಳ ಬೇಡಿಕೆ. ಆದರೆ ಇದುವರೆಗೂ ಈಡೇರಿಲ್ಲ. ಸ್ಥಳೀಯರು ಮಳೆಗಾಲ ಅಡಿಕೆ ಮರದಿಂದ ನಿರ್ಮಿಸಿದ ತಾತ್ಕಾಲಿಕ ಸಂಕದ ಮೂಲಕ ಜೀವ ಕೈಯಲ್ಲಿ ಹಿಡಿದುಕೊಂಡು ಹೊಳೆ ದಾಟಬೇಕಾದ ಪರಿಸ್ಥಿತಿ ಇದೆ. ಇಲ್ಲಿನ ಜನರೂ ಮತದಾನ ಬಹಿಷ್ಕಾರದ ನಿರ್ಧಾರದಲ್ಲಿದ್ದಾರೆ.

ಜನಪ್ರತಿನಿಧಿಗಳ ಗಮನಕ್ಕೆ ತರಲಾಗುವುದು: ಗ್ರಾಮ ಪಂಚಾಯತ್‌ಗೆ ಬರುತ್ತಿರುವ ಅನುದಾನಗಳನ್ನು ಸೂಕ್ತ ರೀತಿಯಲ್ಲಿ ಬಳಸಿ ರಸ್ತೆ ಅಭಿವೃದ್ದಿ ಮಾಡಲಾಗುತ್ತಿದೆ. ದೊಡ್ಡ ಪ್ರಮಾಣದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಂಬಂಧಪಟ್ಟ ಜನಪ್ರತಿನಿಧಿಗಳ ಗಮನಕ್ಕೆ ತರಲಾಗುವುದು. –ಹರಿಣಿ ಡಿ.ಡಿ., ಅಧ್ಯಕ್ಷರು, ಅರಂತೋಡು ಗ್ರಾ.ಪಂ.

ರಸ್ತೆ ಅಭಿವೃದಿಯಾಗಲಿ: ಅರಂತೋಡು ಪೇಟೆಯಲ್ಲಿ ಸಮರ್ಪಕ ಚರಂಡಿಗಳಿಲ್ಲದೆ ರಸ್ತೆ ಬದಿಯಲ್ಲಿ ಅಲ್ಲಲ್ಲಿನೀರು ಶೇಖರಣೆಗೊಳ್ಳುತ್ತಿದೆ. ಸೂಕ್ತ ಚರಂಡಿ ವ್ಯವಸ್ಥೆಯಾಗಬೇಕಾಗಿದೆ. ಅರಮನೆಗಾಯಕ್ಕೆ ಸಂಪರ್ಕ ಕಲ್ಪಿಸುವ ಬಲ್ನಾಡು ಹೊಳೆಗೆ ಶಾಶ್ವತ ಸೇತುವೆ ನಿರ್ಮಾಣವಾಗಬೇಕು. ಅರಂತೋಡು- ಅಡ್ತಲೆ-ಎಲಿಮಲೆ ರಸ್ತೆ ಅಭಿವೃದ್ಧಿಯಾಬೇಕು. ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟ ಕೆಲವೊಂದು ರಸ್ತೆಗಳು ಅಭಿವೃದ್ಧಿಯಾದರೂ ಇನ್ನೂ ಕೆಲವೊಂದು ಒಳ ರಸ್ತೆಗಳು ಅಭಿವೃದ್ಧಿ ಯಾಗಲು ಬಾಕಿ ಉಳಿದುಕೊಂಡಿವೆ. ಇವುಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು – ತಾಜುದ್ದೀನ್‌, ಸಾಮಾಜಿಕ ಕಾರ್ಯಕರ್ತರು, ಅರಂತೋಡು

-ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next