ರಾಮನಗರ: ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ, ಸರ್ಕಾರ ಉರುಳಿದ ಬಳಿಕ ರಾಮನಗರ ಅಭಿವೃದ್ಧಿ ವೇಗ ಕುಗ್ಗಿರಲಿಲ್ಲ. ಆದರೆ ದುರಾದೃಷ್ಟವಶಾತ್ ಕೋವಿಡ್ -19 ಸೋಂಕಿನಿಂದಾಗಿ ಎಲ್ಲ ಕಡೆ ಅಭಿವೃದ್ಧಿ ಮಂದಗತಿಯಲ್ಲಿ ಸಾಗುತ್ತಿದೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು.
ನಗರದ ಐಜೂರಿನಲ್ಲಿ ಪಿಕಾರ್ಡ್ ಬ್ಯಾಂಕ್ ಇರುವ ಕಟ್ಟಡದಲ್ಲಿ ಬಿಆರ್‌ಡಿಸಿಸಿ ಬ್ಯಾಂಕ್‌ನ ರಾಮನಗರ ಶಾಖೆ ಉದ್ಘಾಟಿಸಿ ಸುದ್ದಿಗಾರರೊಂ ದಿಗೆ ಮಾತನಾಡಿ, ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡ ಬಿಆರ್‌ಡಿಸಿಸಿ ಬ್ಯಾಂಕ್‌ನ ರಾಮನಗರ ಶಾಖೆ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲಿದೆ. ಗ್ರಾಮೀಣ ಭಾಗದ ಪ್ರದೇಶಗಳಲ್ಲಿ ರೈತರಿಗೆ ಬ್ಯಾಂಕ್‌ನಿಂದ ಸಾಲ ಮತ್ತು ಸೇವೆ ಲಭಿಸುತ್ತಿದೆ. ಬ್ಯಾಂಕಿನ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ನಿರ್ದೇಶಕ ಅಶ್ವತ್ಥ ಕೂಡ ವಿಚಾರದಲ್ಲಿ ಪರಿಶ್ರಮ ಪಡುತ್ತಿದ್ದಾರೆ.
ಕೈತಪ್ಪಿದ ತಾಪಂ ಅಧ್ಯಕ್ಷ ಸ್ಥಾನ, ನಷ್ಟವಿಲ್ಲ: ತಾಪಂನಲ್ಲಿ ಸಂಖ್ಯಾಬಲ ವಿದ್ದರೂ ಅಧ್ಯಕ್ಷ ಸ್ಥಾನ ಕೈತಪ್ಪಿದ್ದು, ರಾಜಕೀಯವಾಗಿ ಪಕ್ಷಕ್ಕೆ ಧಕ್ಕೆಯಾಗಲಿಲ್ಲವೇ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ನಷ್ಟವೇನಿಲ್ಲ. ಮತದಾರರು ಪಕ್ಷದ ಪರವಾಗಿದ್ದಾರೆ. ಕಾರ್ಯಕರ್ತರು ಮತ್ತು ಮುಖಂಡರು ಇದ್ದಾರೆ ಎಂದರು.
ತಳಮಟ್ಟದ ಕಾರ್ಯಕರ್ತರಿಗೆ ಅಧಿಕಾರ ಸಿಗುವ ವೇಳೆ ವರಿಷ್ಠರು ಸಿಗೋಲ್ಲ ಎಂಬ ಆಪಾದನೆ ಬಗ್ಗೆ ಪ್ರತಿಕ್ರಿಯಿಸಿ, ತಾಪಂ ಅಧ್ಯಕ್ಷ ಸ್ಥಾನ ಜಗದೀಶ್‌ಗೆ ಹಿಂದೆ ಅವಕಾಶವಾಗಲಿಲ್ಲ ಎಂಬ ಅಸಮಾಧಾನ ಇತ್ತು ನಿಜ. ಹೀಗಾ ಗಿಯೇ ಪಕ್ಷದ ಹೈಕಮಾಂಡ್ ಲಕ್ಷ್ಮೀಕಾಂತ್, ಭದ್ರಯ್ಯ ಹಾಗೂ ಜಗದೀಶ್ ಮೂವರು ಕುಳಿತು ತಾವೇ ನಿರ್ಧರಿಸಿಕೊಳ್ಳುವಂತೆ ಸೂಚನೆ ನೀಡಿತ್ತು. ಆದರೆ ವಿರೋಧ ಪಕ್ಷ ಅಧ್ಯಕ್ಷ ಸ್ಥಾನದ ಆಮೀಷವೊಡ್ಡಿದ್ದರಿಂದ ವೈಯಕ್ತಿಕ ಆಸೆಯಿಂದ ಪಕ್ಷ ತೊರೆದಿದ್ದಾರೆ ಎಂದು ಹೇಳಿದರು.
ಬಿಆರ್‌ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಶೋಕ್ (ತಮ್ಮಾಜಿ), ನಿರ್ದೇಶಕ ಪಿ.ಅಶ್ವಥ್, ಶಾಖಾ ವ್ಯವಸ್ಥಾಪಕ ಕೆ.ಎಂ. ಸುರೇಶ್, ಮೇಲ್ವಿಚಾರಕ ಜಗದೀಶ್, ಸಂದೀಪ್, ಸಿಇಒಗಳಾದ ಪ್ರಕಾಶ್, ಹನುಮ ಯ್ಯ, ನಂದೀಶ್‌ಕುಮಾರ್, ರೇಣುಕಯ್ಯ, ಪ್ರಕಾಶ್, ಎಪಿಎಂಸಿ ಅದ್ಯಕ್ಷ ದೊರೆಸ್ವಾಮಿ, ತಾಲೂಕು ಜೆಡಿಎಸ್ ಅಧ್ಯಕ್ಷ ರಾಜಶೇಖರ್, ನಗರ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಗೂಳಿಗೌಡ ಸೇರಿದಂತೆ ಪಿಎಸಿಎಂಎಸ್‌ನ ಅಧ್ಯಕ್ಷರು ಹಾಜರಿದ್ದರು.
ಟೀಕೆ ಬಿಟ್ಟು ಕೆಲಸ ಮಾಡಿ: ಚನ್ನಪಟ್ಟಣ ಶಾಸಕ ಎಚ್.ಡಿ.ಕುಮಾರಸ್ವಾಮಿ ಅಳೀಮಯ್ಯನಂತೆ ಬಂದು ಹೋಗುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್ ಟೀಕೆಯ ಬಗ್ಗೆ ಪ್ರತಿಕ್ರಿಯಿಸಿದ ಶಾಸಕಿ ಅನಿತಾ, ಲಾಕ್ ಡೌನ್ ವೇಳೆ ಚನ್ನಪಟ್ಟಣದಲ್ಲಿ ಸುಮಾರು 62 ಸಾವಿರ ಕುಟುಂಬಗಳಿಗೆ ವೈಯಕ್ತಿಕವಾಗಿ ದಿನಸಿ ಕಿಟ್ ಕೊಟ್ಟಿದ್ದಾರೆ. ನಿರ್ಗತಿಕರು, ನಿರಾಶ್ರಿತರು, ಬಡವರಿಗೆ ಸುಮಾರು 45 ದಿನ ದಿನದ ಮೂರು ಹೊತ್ತು ಊಟ, ತಿಂಡಿಯ ವ್ಯವಸ್ಥೆ ಮಾಡಿದೆ. ಅವರೇನು (ಗಂಗಾಧರ್) ಏನು ಮಾಡಿದ್ದಾರೆ ಎಂದು ಕುಟುಕಿದರು. ಟೀಕೆ ಮಾಡುವುದನ್ನು ಬಿಟ್ಟು ನಮ್ಮೊಡನೆ ಜೊತೆಗೂಡಿ ಕೆಲಸ ಮಾಡಲಿ ಎಂದರು.