ಯಲಬುರ್ಗಾ: ದೇಶದ ಸಮಗ್ರ ಅಭಿವೃದ್ಧಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್
ಕಾರ್ಯಾಲಯದಲ್ಲಿ ಕೆಪಿಸಿಸಿ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಕಾಂಗ್ರೆಸ್ ಪಕ್ಷ ತ್ಯಾಗ, ಬಲಿದಾನ ಮಾಡಿ ಇತಿಹಾಸ ಹೊಂದಿದೆ. ಆದರೆ ಬಿಜೆಪಿಗೆ ಯಾವುದೇ ಇತಿಹಾಸವಿಲ್ಲ ಎಂದರು.
ಕಾರ್ಯಕರ್ತರು ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಿ ಅಧಿಕಾರಕ್ಕೆ ತರುಲು ಪ್ರಯತ್ನಿಸಬೇಕು. ಜು. 2ರಂದು ನಡೆಯುವ ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ ಪದಗ್ರಹಣ ಕಾರ್ಯಕ್ರಮದ ನೇರ ಪ್ರಸಾರವನ್ನು ರಾಜ್ಯದ ಸುಮಾರು 15 ಲಕ್ಷಕ್ಕೂ ಹೆಚ್ಚು ಜನ ಆನ್‌ಲೈನ್, ಟಿವಿ ಮೂಲಕ ವೀಕ್ಷಿಸಲಿದ್ದಾರೆ. ಇದಕ್ಕಾಗಿ ಪಕ್ಷ ಅವಕಾಶ ಕಲಿಸ್ಪಿದೆ. ಪದಗ್ರಹಣ ಕಾರ್ಯಕ್ರಮದ ಯಶಸ್ವಿಗೆ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕೆಂದು ಹೇಳಿದರು.
ತಾಲೂಕು ಬ್ಲಾಕ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನ 37 ಗ್ರಾಪಂ ಹಾಗೂ ಎರಡು ಪಪಂಗಳಲ್ಲಿ ಜನರಿಗೆ ಕಾಂಗ್ರೆಸ್ ಪಕ್ಷ ನೇರವಾಗಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ತಾಲೂಕಿನ ಪ್ರತಿಯೊಂದು ಗ್ರಾಪಂನಲ್ಲಿ 50ಕ್ಕೂ ಅಧಿಕ ಜನರು ಪಾಲ್ಗೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಬ್ಬ ಕಾರ್ಯಕರ್ತರು ಪದಗ್ರಹಣ ನೇರಪ್ರಸಾರ ಕಾರ್ಯಕ್ರಮದಲ್ಲಿ ಭಾಗಿಯಾಗಿ ವೀಕ್ಷಿಸುವ ಮೂಲಕ ಯಶಸ್ವಿಗೆ ಕೈಜೋಡಿಸಬೇಕು ಎಂದರು.
ಕೆಪಿಸಿಸಿ ವೀಕ್ಷಕರಾದ ಚಂದ್ರಶೇಖರ ಭಟ್, ಕೆ. ಶಿವಮೂರ್ತಿ, ಫಹಿಂಭಾಷಾ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನಮಂತಗೌಡ ಚಂಡೂರ, ಜಿಪಂ ಸದಸ್ಯರಾದ ಗಿರಿಜಾ ಸಂಗಟಿ, ಹೊಳಿಯಮ್ಮ ಪಾಟೀಲ, ತಾಪಂ ಸದಸ್ಯೆ ಸಾವಿತ್ರಿ ಗೊಲ್ಲರ, ಮುಖಂಡರಾದ ಯಂಕಣ್ಣ ಯರಾಶಿ, ಬಿ.ಎಂ. ಶಿರೂರ, ಕಳಕಪ್ಪ ಕಂಬಳಿ, ಜಿಲ್ಲಾಧ್ಯಕ್ಷೆ ಮಾಲತಿ ನಾಯಕ, ಜಯಶ್ರೀ ಕಂದಕೂರು, ಮಹಾಂತೇಶ ಗಾಣಿಗೇರ ಇದ್ದರು.