Advertisement

ಆತ್ಮಹತ್ಯೆ ತಡೆಯುವ ಫ್ಯಾನ್‌; ಅನಾಹುತ ತಪ್ಪಿಸುವಂಥ ಹೊಸ ಸಾಧನ ಅಭಿವೃದ್ಧಿ

12:48 AM Nov 03, 2022 | Team Udayavani |

ಬೆಂಗಳೂರು: ಆತ್ಮಹತ್ಯೆಯನ್ನು ತಪ್ಪಿಸುವಂಥ ವಿನೂತನ ತಂತ್ರಜ್ಞಾನದ ಫ್ಯಾನೊಂದು ಮಾರುಕಟ್ಟೆಗೆ ಬಂದಿದೆ!ಈಗೀಗ ಆತ್ಮಹತ್ಯೆಗೆ ಶರಣಾಗುವಂಥ ಪ್ರಕರಣಗಳು ಹೆಚ್ಚುತ್ತಿರುತ್ತವೆ. ಇದನ್ನು ತಪ್ಪಿಸುವ ಉಪಕರಣವೊಂದನ್ನು ಅಭಿವೃದ್ಧಿಪಡಿಸಲಾಗಿದೆ. ಈ ತಂತ್ರಜ್ಞಾನ ಅಳವಡಿಸಿದರೆ ಅನಾಹುತವನ್ನು ಅನಾಯಾಸವಾಗಿ ತಪ್ಪಿಸಬಹುದು. ಜತೆಗೆ ಅನಾಹುತ ಸಂಭವಿಸುವ ಮುನ್ನವೇ ಸಂಬಂಧ ಪಟ್ಟವರ ಮೊಬೈಲ್‌ಗೆ ಸಂದೇಶ ಕೂಡ ಹೋಗುತ್ತದೆ!

Advertisement

“ಸೇಫ್ಹ್ಯಾಲೋ’ ಎಂಬ ಸಂಸ್ಥೆ ಇದನ್ನು ಅಭಿವೃದ್ಧಿಪಡಿಸಿದ್ದು, ನಗರದ ಅರಮನೆ ಮೈದಾನದಲ್ಲಿ ನಡೆಯು ತ್ತಿರುವ ಜಾಗತಿಕ ಹೂಡಿಕೆದಾರರ ಸಮಾ ವೇಶದ ಪ್ರದರ್ಶನ ಮಳಿಗೆಯಲ್ಲಿ ಇದನ್ನು ಕಾಣಬಹುದು.

ಹೇಗೆ ಕೆಲಸ ಮಾಡುತ್ತದೆ?
ಉದ್ದೇಶಿತ ಕಂಪೆನಿಯು ಸೀಲಿಂಗ್‌ ಫ್ಯಾನ್‌ಗಳಿಗಾಗಿ ಬ್ಯಾಟರಿಚಾಲಿತ ಡಿವೈಸ್‌ ಅಭಿವೃದ್ಧಿಪಡಿಸಿದೆ. ಫ್ಯಾನ್‌ ಅನ್ನು ಕೊಂಡಿಗೆ ಹಾಕುವ ಬದಲಿಗೆ ಈ ಡಿವೈಸ್‌ಗೆ ಅಳವಡಿಸಬೇಕು. ಇದರಿಂದ ಯಾರಾದರೂ ಫ್ಯಾನ್‌ಗೆ ನೇಣುಬಿಗಿದು ಆತ್ಮಹತ್ಯೆಗೆ ಯತ್ನಿಸಿದರೆ, ಫ್ಯಾನ್‌ ಸಹಿತ ಕೆಳಗೆ ಕುಸಿಯುತ್ತದೆ. ಜತೆಗೆ ವ್ಯಕ್ತಿಗೆ ಯಾವುದೇ ತೊಂದರೆ ಆಗದಂತೆಯೂ ತಡೆಯುತ್ತದೆ. ಮುಖ್ಯವಾಗಿ ಇದು ಹಾಸ್ಟೆಲ್‌ಗ‌ಳು, ತರಬೇತಿ ಕೇಂದ್ರಗಳು ಸೇರಿ ಒತ್ತಡದಲ್ಲಿ ಕೆಲಸ ಮಾಡುವ ಸಂಸ್ಥೆಗಳಿಗೆ ಹೆಚ್ಚು ಉಪಯುಕ್ತ ಎನ್ನಲಾಗಿದೆ.

“ಸಾಮಾನ್ಯವಾಗಿ ಫ್ಯಾನ್‌ಗೆ ನೇಣುಬಿಗಿದು ಸಾವಿಗೆ ಶರಣಾಗುವ ಪ್ರಕರಣ ಗಳು ಶೇ.30-35ರಷ್ಟಿರುತ್ತದೆ. ಅದನ್ನು ಮನಗಂಡು ಸಂಸ್ಥೆಯು ಈ ಸೇಫ್ ಫ್ಯಾನ್‌ ಪರಿಕಲ್ಪನೆಯಲ್ಲಿ ತಂತ್ರ ಜ್ಞಾನ ಅಭಿವೃದ್ಧಿ ಪಡಿಸಿದೆ. ಇದು ಬೆನ್ನು ಮೂಳೆ ಮುರಿತ ವನ್ನೂ ತಡೆಗಟ್ಟುತ್ತದೆ. ಕುಸಿಯುವ ಫ್ಯಾನ್‌ನಲ್ಲಿ ವಿದ್ಯುತ್‌ ಹರಿಯದಂತೆಯೂ ನೋಡಿಕೊಳ್ಳುತ್ತದೆ’ ಎಂದು ಸಂಸ್ಥೆಯ ಸಹ ಸಂಸ್ಥಾಪಕ ಸುಮಂತ್‌ ತಿಳಿಸುತ್ತಾರೆ. ಇದರ ಬ್ಯಾಟರಿ ಬಾಳಿಕೆ ಸುಮಾರು 10 ವರ್ಷ. ಕಳೆದ ಮೂರ್‍ನಾಲ್ಕು ವರ್ಷಗಳಲ್ಲಿ ಅಂದಾಜು 1.20 ಲಕ್ಷ ಡಿವೈಸ್‌ ಮಾರಾಟ ಮಾಡಲಾಗಿದೆ. ಇದುವರೆಗೆ ಧಾರವಾಡ ಸಹಿತ ವಿವಿಧ ಐಐಟಿಗಳು, ವಾಯುಸೇನೆ ಕ್ವಾಟ್ರಸ್‌ಗಳು, ಹಲವು ಸಂಘ-ಸಂಸ್ಥೆಗಳು ಖರೀದಿಸಿವೆ. ಇದರ ಬೆಲೆ 700ರಿಂದ 1,000 ರೂ.. ಪರಿಣಾಮಕಾರಿ ಫ‌ಲಿತಾಂಶವನ್ನೂ ಇದು ನೀಡಿದೆ. ಮುಂಬರುವ ದಿನಗಳಲ್ಲಿ ಪೊಲೀಸ್‌ ಕ್ವಾಟ್ರಸ್‌, ಠಾಣೆಗಳಲ್ಲೂ ಅಳವಡಿಸುವ ಚಿಂತನೆ ಇದೆ ಎಂದರು.

ರಾಜಸ್ಥಾನದ ಕೋಟಾದಲ್ಲಿರುವ ಐಐಟಿ ಕೋಚಿಂಗ್‌ ಹಬ್‌ನಲ್ಲಿ ಈ ಹಿಂದೆ ವರ್ಷಕ್ಕೆ 14-15 ಆತ್ಮಹತ್ಯೆಗಳು ಆಗುತ್ತಿದ್ದವು. ಆದರೆ ತಂತ್ರಜ್ಞಾನ ಅಳವಡಿಸಿದ ಬಳಿಕ ಆ ಸಂಖ್ಯೆ 2-3ಕ್ಕೆ ಇಳಿಕೆಯಾಗಿದೆ. ಸಮಾಜ ಕಲ್ಯಾಣ ಇಲಾಖೆ ಮುಂದೆ ಬಂದರೆ, ಅವರೊಂದಿಗೂ ಒಡಂಬಡಿಕೆ ಮಾಡಿಕೊಂಡು ವಸತಿ ನಿಲಯಗಳಲ್ಲಿ ಅಳವಡಿಸಲು ಸಿದ್ಧ ಎಂದು ಸುಮಂತ್‌ ಸ್ಪಷ್ಟಪಡಿಸಿದರು.

Advertisement

ವಿಶೇಷತೆಗಳು
-ಆತ್ಮಹತ್ಯೆ ತಪ್ಪಿಸುವುದರ ಜತೆಗೆ ನೆರೆಯವರು ನೆರವಿಗೆ ಧಾವಿಸುವಂತೆ ಎಚ್ಚರಿಕೆ ಗಂಟೆ ಬಾರಿಸುತ್ತದೆ.
-ಸುಧಾರಿತ ತಂತ್ರಜ್ಞಾನದೊಂದಿಗೆ ಮೊಬೈಲ್‌ ಸಂಪರ್ಕ ಕಲ್ಪಿಸಿ ಮೆಸೇಜ್‌ ಬರುವಂತೆ ಮಾಡಿಕೊಳ್ಳಬಹುದು.
-ಹಾಲಿ ಇರುವ ಸೀಲಿಂಗ್‌ ಫ್ಯಾನ್‌ ಗಳಿಗೂ ಇದನ್ನು ಜೋಡಿಸಬಹುದು.

- ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next