Advertisement

ಜನರ ಸಹಭಾಗಿತ್ವದಲ್ಲಿ ಕೆರೆಗಳ ಅಭಿವೃದ್ಧಿ

04:42 PM Sep 25, 2021 | Team Udayavani |

ಮಂಡ್ಯ: ಜಿಲ್ಲಾ ಪಂಚಾಯತ್‌ ವ್ಯಾಪ್ತಿ ಯಲ್ಲಿರುವ ಕೆರೆಗಳನ್ನು ಜನರ ಸಹಭಾಗಿತ್ವದಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸುವ ಸಂಬಂಧ ವಿಸ್ತೃತ ಯೋಜನಾ ವರದಿ ತಯಾರಿಸುವಂತೆ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಜಿಪಂ ಸಿಇಒ ಜಿ.ಆರ್‌.ಜೆ.ದಿವ್ಯಪ್ರಭು ಸೂಚಿಸಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ತಾಪಂ ಕಾರ್ಯನಿರ್ವಾಹಕ ಅಧಿ ಕಾರಿಗಳು ಹಾಗೂ ಫೌಂಡೇಷನ್‌ ಫಾರ್‌ ಎಕಾಲಜಿಕಲ್‌ ಸೆಕ್ಯೂರಿಟೀಸ್‌ (ಎಫ್‌ಇಎಸ್‌) ಸಂಸ್ಥೆಯ ಪ್ರತಿನಿಧಿ ಗಳೊಂದಿಗೆ ಕೆರೆ ಅಭಿವೃದ್ಧಿ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದರು.

ಮುಂದಿನ ಆರ್ಥಿಕ ವರ್ಷದಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಒಂದು ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಸಂಬಂಧ ವಿಸ್ತೃತ ಯೋಜನಾ ವರದಿ ತಯಾರಿಸಿ ಕ್ರಿಯಾ ಯೋಜನೆ ರೂಪಿಸಬೇಕು ಎಂದು ಹೇಳಿದರು.

ಇದನ್ನೂ ಓದಿ:ತಾಲಿಬಾನ್ ಜತೆ ಭಾರತ ಮಾತುಕತೆ ನಡೆಸಲಿ… ಇದರಿಂದ ತೊಂದರೆ ಇಲ್ಲ: ಫಾರೂಖ್ ಅಬ್ದುಲ್ಲಾ

ಒತ್ತುವರಿ ತೆರವುಗೊಳಿಸಿ: ನರೇಗಾ ಯೋಜನೆಯನ್ನು ಬಳಸಿ ಕೂಲಿಕಾರರಿಗೆ ಉದ್ಯೋಗ ಕಲ್ಪಿಸುವುದರ ಜತೆಗೆ ಕೆರೆ ಅಭಿವೃದ್ಧಿಗೆ ಒತ್ತು ನೀಡಬೇಕು. ಇತರ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕೆರೆ ಒತ್ತುವರಿ ತೆರವು, ಕೆರೆ ಸುತ್ತ ಅರಣ್ಯೀಕರಣ, ಕೆರೆ ಸಂಪರ್ಕಿಸುವ ಕಾಲುವೆಗಳ ಅಭಿವೃದ್ಧಿ, ಕೆರೆ ಹೂಳು ತೆಗೆಯುವುದು, ಕೆರೆ ಏರಿ ದುರಸ್ತಿ, ಸೋಪಾನ ಕಟ್ಟೆ ನಿರ್ಮಾಣ ಸೇರಿದಂತೆ ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಕೆಲಸ ಆಗಬೇಕು ಎಂದರು.

Advertisement

ಯೋಜನೆ ರೂಪಿಸಿ: ಈಗಾಗಲೇ ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿ ಗ್ರಾಮದ ಕೆರೆಯನ್ನು ನರೇಗಾ ಯೋಜನೆಯ ‘ಅಂತರ್ಜಲ ಚೇತನ’ ಕಾರ್ಯಕ್ರಮದಡಿ ಸಮಗ್ರ ಪುನಃಶ್ಚೇತನಗೊಳಿಸಲು ಎಫ್‌ಇಎಸ್‌ ಸಂಸ್ಥೆಯು ಸ್ಥಳೀಯರು ಮತ್ತು ಗ್ರಾಪಂ ಸಹ ಯೋಗದಡಿ ಕ್ರಿಯಾ ಯೋಜನೆ ರೂಪಿಸಿದೆ. ಇದೇ ಮಾದರಿಯಲ್ಲಿ ಎಲ್ಲ ಕೆರೆಗಳ ಅಭಿವೃದ್ಧಿ ಯೋಜನೆ ರೂಪಿಸಬೇಕು ಎಂದು ಹೇಳಿದರು.

ಕೆರೆ ನಿರ್ವಹಣೆ ಮಾಡಬೇಕು: ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಅಧಿ ನಿಯಮ 1993ರ ಪ್ರಕರಣ 61(ಎ)ರಲ್ಲಿ ಹಾಗೂ ಪ್ರಕರಣ 316ರಲ್ಲಿ ಅಗತ್ಯಪಡಿಸಿರುವಂತೆ ಗ್ರಾಮ ಪಂಚಾಯತ್‌ ಗಳಲ್ಲಿ ಕೆರೆ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿಗಳನ್ನು ರಚಿಸಿಕೊಂಡು ಕೆರೆಗಳನ್ನು ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.

ಉಪ ಕಾರ್ಯದರ್ಶಿ (ಆಡಳಿತ) ಎನ್‌.ಡಿ. ಪ್ರಕಾಶ್‌, ಉಪ ಕಾರ್ಯದರ್ಶಿ (ಅಭಿವೃದ್ಧಿ) ಜಿ.ಧನರಾಜು, ಮುಖ್ಯ ಲೆಕ್ಕಾಧಿಕಾರಿ ಡಿ.ಬಿ.ಕವಿತಾ, ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಎಫ್‌ಇಎಸ್‌ ಸಂಸ್ಥೆಯ ಪ್ರತಿನಿಧಿಗಳು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next