Advertisement

ಮಳೆಗೆ ಮೈದುಂಬಿದ ಕೆರೆ-ಜಮೀನು ಜಲಾವೃತ

04:33 PM Sep 22, 2022 | Team Udayavani |

ಗದಗ: ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ಕೈಗೊಂಡ ಹಾಲಗೊಂಡ ಬಸವೇಶ್ವರ ಕೆರೆ ಅಭಿವೃದ್ಧಿ ಕಾಮಗಾರಿ ಅವೈಜ್ಞಾನಿಕವಾಗಿರುವ ಕಾರಣ, ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಸುತ್ತಲಿನ ಹತ್ತಾರು ಎಕರೆ ಜಮೀನು ಜಲಾವೃತಗೊಂಡು, ರೈತರು ಲಕ್ಷಾಂತರ ರೂ. ಬೆಳೆ ನಷ್ಟ ಅನುಭವಿಸುವಂತಾಗಿದೆ.

Advertisement

ಹಾಲಗೊಂಡ ಬಸವೇಶ್ವರ ಕೆರೆಗೆ ಸಂಭಾಪೂರ ಹಾಗೂ ಪಾಪನಾಶಿ ರಸ್ತೆಯ ಸುತ್ತಲಿನ ಜಮೀನುಗಳ ಮಳೆ ನೀರು ಭಾರೀ ಪ್ರಮಾಣದಲ್ಲಿ ಹರಿದು ಬರುವುದರಿಂದ ಕೇವಲ 12 ಎಕರೆ ವ್ಯಾಪ್ತಿಯ ಕೆರೆ ಬೇಗನೆ ಮೈದುಂಬಿದ್ದು, ಹೆಚ್ಚಾದ ನೀರು ಅಕ್ಕಪಕ್ಕದ ಸಣ್ಣ ಹಿಡುವಳಿದಾರರ ಜಮೀನುಗಳಲ್ಲಿ ನುಗ್ಗಿ ಜಲಾವೃತಗೊಂಡಿವೆ.

ಕೆರೆಯ ಸುತ್ತಲಿನ ಜಮೀನುಗಳಲ್ಲಿ ತೇವಾಂಶ ಹೆಚ್ಚಾದ ಕಾರಣ ಕಟಾವಿಗೆ ಬಂದಿದ್ದ ಸೇವಂತಿಗೆ ಹೂವು, ಮೆಣಸಿನ ಗಿಡ, ಉಳ್ಳಾಗಡ್ಡಿ, ಸೂರ್ಯಕಾಂತಿ, ಮೆಕ್ಕೆಜೋಳ ಫಸಲು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

6 ಅಡಿ ನೀರಿನಲ್ಲಿ ಬೆಳೆ: ಮಳೆಯಿಂದ ಬಸವೇಶ್ವರ ಕೆರೆ ತುಂಬಿ ಜಂತ್ಲಿ ಶಿರೂರ ರಸ್ತೆಯ ಮೂಲಕ ನೀರು ಹರಿದಿದ್ದರಿಂದ ಈ ಭಾಗದಲ್ಲಿನ ಲಲಿತಾ ಬೆಟಗೇರಿ ಎಂಬುವರ 6 ಎಕರೆ ಜಮೀನಿನಲ್ಲಿ ಬೆಳೆದ ಮೆಕ್ಕೆ ಜೋಳ ಸುಮಾರು 6 ಅಡಿ ನೀರಿನಲ್ಲಿ ನಿಂತಿದೆ. 80 ಸಾವಿರ ರೂ. ಖರ್ಚು ಮಾಡಿದ್ದ ರೈತ ಸುಮಾರು 2.50 ಲಕ್ಷ ರೂ. ಆದಾಯ ಕಳೆದುಕೊಂಡಿದ್ದಾರೆ. ಅಲ್ಲದೇ, ರೈತರಾದ ಬಸನಗೌಡ ಬಿರಾದಾರ, ಲಲಿತಾ ಬೆಟಗೇರಿ, ಈಶಪ್ಪ ನರಗುಂದ, ಈರಯ್ಯ ಕಲ್ಮಠ, ಸರೋಜವ್ವ ರವದಿ, ಬಸವರಾಜ ಪತ್ರಿಮಠ, ಷಣ್ಮುಖಪ್ಪ ರವದಿ, ಮರಿಸ್ವಾಮಿ ಕಲ್ಮಠ, ಬಸವರಾಜ ಖಂಡು, ವೀರಯ್ಯ ಹಿರೇಮಠ, ಶಂಕ್ರಪ್ಪ ಕಲ್ಲೂರ, ಶಿವಲಿಂಗಯ್ಯ ನೋಟಗಾರ ಅವರ ಜಮೀನುಗಳಿಗೂ ನೀರು ನುಗ್ಗಿದೆ.

ಹಾಲಗೊಂಡ ಬಸವೇಶ್ವರ ಕೆರೆ ನೀರು ಹಾಗೂ ಗಲ್ಲಿಗಳಲ್ಲಿನ ಮಳೆ ನೀರು ಜಮೀನುಗಳಿಗೆ ನುಗ್ಗದಂತೆ ತಡೆಯಲು ಯೋಜನೆ ರೂಪಿಸಿದ್ದು, ವಾರ ದೊಳಗೆ ಕಾಮಗಾರಿ ಆರಂಭಿಸಲಾಗುವುದು. –ಲಲಿತಾ ಗದಗಿನ, ಗ್ರಾಪಂ ಅಧ್ಯಕ್ಷರು, ಲಕ್ಕುಂಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next