ಹುಬ್ಬಳ್ಳಿ: ದೀನ, ದಲಿತರನ್ನು ಕಡೆಗಣಿಸಿರುವ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ದಲಿತರ ಅಭಿವೃದ್ಧಿ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು. ಇಲ್ಲಿನ ಕರ್ಕಿ ಬಸವಣ್ಣ ನಗರದಲ್ಲಿ ದಲಿತ ಮುಖಂಡ ರೇಣುಕಪ್ಪ ಹಾಗೂ ಗಾಯತ್ರಿ ಕೆಲೂರ ಅವರ ನಿವಾಸದಲ್ಲಿ ಉಪಾಹಾರ ಸೇವನೆ ಮಾಡಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ರಾಜ್ಯದ ಆಡಳಿತ ವಿಫಲಗೊಂಡಿದೆ. ಎಲ್ಲ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ದಲಿತರ ಪ್ರಗತಿಗಾಗಿ ಕೈಗೊಂಡ ಯೋಜನೆಗಳಿಗೆ ಸಮರ್ಪಕ ಅನುದಾನ ನೀಡಲು ಸರ್ಕಾರ ವಿಫಲವಾಗಿದೆ ಎಂದರು. ಬಿಜೆಪಿ ಸರ್ಕಾರದ ಸಂದರ್ಭದಲ್ಲಿ ಜಾರಿಗೊಂಡಿದ್ದ ಹಲವಾರು ಯೋಜನೆಗಳ ಅನುಷ್ಠಾನಕ್ಕೆ ಕಾಂಗ್ರೆಸ್ ಸರ್ಕಾರ ಸಮರ್ಪಕವಾಗಿ ಹಣ ನೀಡುತ್ತಿಲ್ಲ ಎಂದು ಆರೋಪಿಸಿದರು.
ದಲಿತರ ಏಳ್ಗೆಗೆ ಶ್ರಮಿಸಿದ ಡಾ| ಬಿ.ಆರ್. ಅಂಬೇಡ್ಕರ ಅವರನ್ನು ಕಾಂಗ್ರೆಸ್ ಕೆಟ್ಟದಾಗಿ ನಡೆಸಿಕೊಂಡಿತು. ಅವರ ಅಂತ್ಯಸಂಸ್ಕಾರಕ್ಕೆ ರಾಜಘಾಟ್‌ನಲ್ಲಿ ಅವಕಾಶ ನೀಡಲಿಲ್ಲ. ಮುಂಬೈನಲ್ಲಿ ಸಮುದ್ರದ ಪಕ್ಕ ಅಂತ್ಯ ಸಂಸ್ಕಾರ ಮಾಡಬೇಕಾಯಿತು. ಇದು ಕಾಂಗ್ರೆಸ್ ದಲಿತರಿಗೆ ಮಾಡಿದ ಮೋಸವಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ, ಬಿ.ಆರ್. ಅಂಬೇಡ್ಕರ ಅವರು ಹುಟ್ಟಿ ಬೆಳೆದ, ಸಾಧನೆ ಮಾಡಿದ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಲು ವಿಶೇಷ ಆಸಕ್ತಿ ವಹಿಸಿದ್ದಾರೆ ಎಂದರು. ಬಿಜೆಪಿ 3ಲಕ್ಷ ಬಡ ಕುಟುಂಬಗಳಿಗೆ ಭಾಗ್ಯಲಕ್ಷ್ಮೀ ಯೋಜನೆ ಅನುಷ್ಠಾನಗೊಳಿಸಿದ್ದರೆ, ಕಾಂಗ್ರೆಸ್ ಸರ್ಕಾರ ಕೇವಲ ಒಂದೂವರೆ ಲಕ್ಷ ಕುಟುಂಬಗಳಿಗೆ ಮಾತ್ರ ಯೋಜನೆ ಅನುಷ್ಠಾನಗೊಳಿಸಿದೆ.
ಇದು ಕಾಂಗ್ರೆಸ್ ದಲಿತರಿಗೆ ಮಾಡಿದ ದ್ರೋಹವಾಗಿದೆ ಎಂದರು. ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎಂಬ ತತ್ವದಂತೆ, ಎಲ್ಲ ಸಮುದಾಯದವರ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಮುಂದಿನ 10 ತಿಂಗಳು ಜನರ ಆಶೀರ್ವಾದ ನಮಗಿದ್ದರೆ ಖಂಡಿತಾ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು. ಬಿಜೆಪಿ ವತಿಯಿಂದ ಕೈಗೊಂಡ ಪ್ರವಾಸದಲ್ಲಿ ಜನರು ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಬೇಸತ್ತು ಹೋಗಿರುವುದು ಕಂಡು ಬರುತ್ತಿದೆ. ಎಲ್ಲ ಸಮುದಾಯಗಳ ಜನರು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದನ್ನು ಕಾಯುತ್ತಿದ್ದಾರೆ ಎಂದರು.
ಬಿಜೆಪಿ ಮುಖಂಡರಾದ ಜಗದೀಶ ಶೆಟ್ಟರ, ಗೋವಿಂದ ಕಾರಜೋಳ, ಸಿ.ಟಿ.ರವಿ, ಪ್ರಹ್ಲಾದ ಜೋಶಿ, ವೀರಭದ್ರಪ್ಪ ಹಾಲಹರವಿ, ಅಶೋಕ ಕಾಟವೆ, ಶಂಕರ ಪಾಟೀಲ ಮುನೇನಕೊಪ್ಪ, ಮುಖಂಡರಾದ ಡಿ.ಎಸ್. ವೀರಯ್ಯ, ರವಿಕುಮಾರ, ಡಿ.ಕೆ.ಚವ್ಹಾಣ ಮೊದಲಾದವರಿದ್ದರು.