Advertisement
ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಮೈಸೂರಿನ ಚಾಮುಂಡಿಬೆಟ್ಟದ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ ಮಂಜೂರಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಹಾಗೂ ಸಂಸದ ಪ್ರತಾಪ್ ಸಿಂಹ ಸಭೆ ನಡೆಸಿ, ಚಾಮುಂಡಿಬೆಟ್ಟದಲ್ಲಿ ಕೈಗೊಳ್ಳಬೇಕಾಗಿರುವ ಅಭಿವೃದ್ಧಿ ಕಾಮಗಾರಿಗಳ ಸಂಬಂಧ ಶನಿವಾರ ಸ್ಥಳ ಪರಿಶೀಲನೆ ನಡೆಸಿದ ನಂತರ ಮತ್ತೂಂದು ಸುತ್ತಿನ ಸಭೆ ನಡೆಸಿ, ಅಂತಿಮವಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಯಿತು.
Related Articles
Advertisement
ವಲಯ-2: ವಲಯ 2ರಲ್ಲಿ ಚಾಮುಂಡೇಶ್ವರಿ ದೇವಸ್ಥಾನದ ಸುತ್ತಮುತ್ತ ಸೌಂದಯೀìಕರಣಗೊಳಿಸಲು ಹೂವು ಮತ್ತು ಹಣ್ಣಿನ ಗಿಡಗಳನ್ನು ನೆಡುವುದು, ಸಾರ್ವಜನಿಕರಿಗೆ ಆಸನ ವ್ಯವಸ್ಥೆ, ಮಹಿಷಾಸುರನ ಪ್ರತಿಮೆ ಬಳಿಯ ವೃತ್ತದ ಸೌಂದರ್ಯ ಹೆಚ್ಚಿಸುವುದು, ಪೂಜಾ ಸಾಮಗ್ರಿಗಳ ಮಾರಾಟ ಮಳಿಗೆಗಳು, ಧ್ವನಿ ಮತ್ತು ಬೆಳಕಿನ ವ್ಯವಸ್ಥೆ, ಕುಡಿಯುವ ನೀರಿನ ಘಟಕ, ಯಾತ್ರಾರ್ಥಿಗಳ ನಿವಾಸ, ಚಪ್ಪಲಿ ನಿಲ್ದಾಣ, ಹೈಮಾಸ್ಟ್ ದೀಪ, ವಿದ್ಯುತ್ ದೀಪಾಲಂಕಾರ, ವೈಫೈ ಹಾಗೂ ಮಾಹಿತಿ ಕೇಂದ್ರ ನಿರ್ಮಾಣಕ್ಕಾಗಿ 15.67 ಕೋಟಿ ವೆಚ್ಚದ ಅಂದಾಜು ಪಟ್ಟಿ ತಯಾರಿಸಲಾಗಿದೆ.
ವಲಯ-3: ವಲಯ 3ರಲ್ಲಿ ಚಾಮುಂಡಿಬೆಟ್ಟದ ಕೆಳಗೆ ಕಂದಾಯ ಇಲಾಖೆಗೆ ಸೇರಿದ ಸುಮಾರು 22 ಎಕರೆ ಪ್ರದೇಶವಿದ್ದು, ಈ ಜಾಗದಲ್ಲಿ ಚಾಮುಂಡಿಬೆಟ್ಟ ಮತ್ತು ಚಾಮುಂಡೇಶ್ವರಿ ದೇವಸ್ಥಾನದ ಇತಿಹಾಸ ತಿಳಿಸುವ ಮ್ಯೂಸಿಯಂ ನಿರ್ಮಾಣ, ಗ್ರಂಥಾಲಯ, ವಸ್ತುಪ್ರದರ್ಶನ, ಟಿಕೆಟ್ ಕೌಂಟರ್, ಪ್ರಸಾದ ವಿತರಣಾ ಕೌಂಟರ್, ಚಾಮುಂಡಿಬೆಟ್ಟ ನಿರ್ವಹಣ ವ್ಯವಸ್ಥೆಗೆ ಸರ್ವಲೆನ್ಸ್, ಘನತ್ಯಾಜ್ಯ ನಿರ್ವಹಣ ಘಟಕ,ಮರು ಬಳಕೆ ಘಟಕ ನಿರ್ಮಾಣ, ಸೌರ ವಿದ್ಯುತ್ ದೀಪ, ವಾಣಿಜ್ಯ ಮಳಿಗೆಗಳು, ಸಾರ್ವಜನಿಕರ ಅನುಕೂಲಕ್ಕೆ ಆಸನ ವ್ಯವಸ್ಥೆ ಮಾಡುವ ಕಾಮಗಾರಿಗೆ 21.25 ಕೋಟಿ ಅಂದಾಜು ಪಟ್ಟಿ ತಯಾರಿಸಲಾಗಿದೆ.
ವಲಯ-4: ವಲಯ 4ರಲ್ಲಿ ದೇವಿಕೆರೆಯ ಸಮಗ್ರ ಅಭಿವೃದ್ಧಿಗಾಗಿ 7.50 ಕೋಟಿ ವೆಚ್ಚದ ಅಂದಾಜು ಪಟ್ಟಿಯನ್ನು ತಯಾರಿಸಿದ್ದು, ಕೆರೆಯ ನೀರನ್ನು ಶುದ್ಧೀಕರಣಗೊಳಿಸುವ ಜತೆಗೆ ಕಾರಂಜಿ ನಿರ್ಮಾಣ, ಸಾರ್ವಜನಿಕರು ಕುಳಿತುಕೊಂಡು ಕಾರಂಜಿ ವೀಕ್ಷಿಸಲು ಆಸನ ವ್ಯವಸ್ಥೆ ಮಾಡಲಾಗುತ್ತದೆ. ದೇವಸ್ಥಾನ ಪ್ರವೇಶಿಸುವ ಪ್ರವೇಶ ದ್ವಾರಗಳಿಗೆ ಹೊಸ ರೂಪ ಕೊಡುವುದು, ಬೆಟ್ಟದ ಮೇಲಿನಿಂದ ಮೈಸೂರಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ನಿರ್ಮಿಸಿರುವ ವ್ಯೂವ್ ಪಾಯಿಂಟ್ ಬಳಿ ವೃತ್ತ ನಿರ್ಮಿಸಿ, ಸಾರ್ವಜನಿಕರಿಗೆ ಆಸನ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ.
ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಪಂ ಸಿಇಒ ಕೆ.ಜ್ಯೋತಿ, ನಗರಪಾಲಿಕೆ ಆಯುಕ್ತೆ ಶಿಲ್ಪ ನಾಗ್, ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ,ಮುಡಾ ಆಯುಕ್ತ ಎಚ್.ಎಂ.ಕಾಂತರಾಜು ಇನ್ನಿತರರು ಸಭೆಯಲ್ಲಿ ಹಾಜರಿದ್ದರು.
28ಕ್ಕೆ ಕೇಂದ್ರ ಸಚಿವರ ನೇತೃತ್ವದಲ್ಲಿ ಸಭೆ: ಚಾಮುಂಡಿಬೆಟ್ಟದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಕ್ರಿಯಾಯೋಜನೆ ರೂಪಿಸಲಾಗಿದೆ. 28ಕ್ಕೆ ಯೋಜನೆ ಸಂಬಂಧ ಕೇಂದ್ರ ಸಚಿವರ ನೇತೃತ್ವದಲ್ಲಿ ಸಭೆ ನಡೆಯಲಿರುವುದರಿಂದ ಅಷ್ಟರೊಳಗೆ ಪ್ರಸ್ತಾವನೆ ಸಲ್ಲಿಸಬೇಕಿದೆ.
ಚಾಮುಂಡಿಬೆಟ್ಟದ ಪಾದದ ಬಳಿ ಹಾಗೂ ಆರ್ಚ್‌ಗೇಟ್ ಬಳಿ ಪಾರ್ಕಿಂಗ್ ಮಾಡಿ ಖಾಸಗಿ ವಾಹನಗಳು ಬೆಟ್ಟಕ್ಕೆ ಹೋಗುವುದನ್ನು ತಪ್ಪಿಸುವ ಆಲೋಚನೆ ಇದೆ. ಆಷಾಢ ಮಾಸದಲ್ಲಿ ಏಕಮುಖ ಸಂಚಾರ ಮಾಡಿದಂತೆ ಇತರೆ ದಿನಗಳಲ್ಲೂ ಮಾಡಿದರೆ ಹೇಗೆ ಎನ್ನುವ ಆಲೋಚನೆ ಇದ್ದು, ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಗಮನಿಸುವಂತೆ ಸೂಚಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದರು.