ಕೊಪ್ಪಳ: ಅಂತಾರಾಷ್ಟ್ರೀಯ ಪ್ರಸಿದ್ಧ ಜಿಲ್ಲೆಯ ಅಂಜಿನಾದ್ರಿಯ ಅಭಿವೃದ್ಧಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಆ.1ರಂದು ಶ್ರೀಕಾರ ಹಾಕಲಿದ್ದಾರೆ. ಜಿಲ್ಲಾಡಳಿತ ರೂಪಿಸಿರುವ ಮಾಸ್ಟರ್ ಪ್ಲಾನ್‌ನಲ್ಲಿನ ಸಮಗ್ರ ಯೋಜನೆಗಳಿಗೆ ವೇಗ ದೊರೆಯುವ ಜತೆಗೆ ಸರ್ಕಾರದಿಂದ ಅನುದಾನವೂ ತ್ವರಿತಗತಿಯಲ್ಲಿ ಬಿಡುಗಡೆ ಮಾಡಬೇಕಿದೆ. ಇದೊಂದು ರಾಜಕೀಯ ವಿಷಯಕ್ಕೆ ಸೀಮಿತವಾಗದೇ, ಇದೊಂದು ಸರ್ವ ಧರ್ಮಗಳಿಗೂ ಧಾರ್ಮಿಕ ಕೇಂದ್ರವಾಗಲಿ ಎಂದೆನ್ನುತ್ತಿದೆ ಜಿಲ್ಲೆಯ ಜನತೆ.
ಹೌದು. ಜಿಲ್ಲೆಯ ಅಂಜನಾದ್ರಿ ಪರ್ವತವು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಕಿಷ್ಕಿಂದೆ ಪರ್ವತಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ ಎನ್ನುವುದಕ್ಕೆ ಇಲ್ಲಿನ ಸಂಶೋಧಕರ, ಇತಿಹಾಸ ತಜ್ಞರ ವಾದ, ಪೌರಾಣಿಕ, ಐತಿಹಾಸಿಕ, ಐತಿಹ್ಯಗಳು, ಶಾಸನ, ಸ್ಮಾರಕಗಳು ಇಲ್ಲಿನ ಇತಿಹಾಸವನ್ನು ಜಗತ್ತಿಗೆ ಸಾರಿ ಸಾರಿ ಹೇಳುತ್ತಿವೆ. ಯಾರು ಏನೇ ಹೇಳಿದರೂ ಜಿಲ್ಲೆಯ ಅಂಜನಾದ್ರಿಯಲ್ಲಿಯೇ ಹನುಮಂತ ಜನಿಸಿಸಿರುವುದಕ್ಕೆ ಹಲವು ಗ್ರಂಥಗಳಲ್ಲಿಯೂ ಉಲ್ಲೇಖವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರವೂ ಅಂಜನಾದ್ರಿಯ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದು, ಹಂತ ಹಂತವಾಗಿ ವಿವಿಧ ಯೋಜಿತ ಕಾಮಗಾರಿಗಳಿಗೆ ಚಾಲನೆ ನೀಡಲೂ ಸಿದ್ಧವಾಗಿದೆ.
ಮಾಸ್ಟರ್ ಪ್ಲಾನ್‌ಗೆ ಬರಲಿ ಶಕ್ತಿ: ಅಂಜನಾದ್ರಿಯಲ್ಲಿ ಇಲ್ಲಿವರೆಗೂ ಸಮಗ್ರ ಮೂಲ ಸೌಕರ್ಯ ಇಲ್ಲ. ಪ್ರವಾಸಿಗರಿಗೆ ವಾಸ್ತವ್ಯಕ್ಕೆ ಯಾವುದೇ ಸೌಲಭ್ಯ ಇಲ್ಲ. ಇದೆಲ್ಲವನ್ನು ಅವಲೋಕಿಸಿ, ಜನರ ಒತ್ತಾಸೆಯಂತೆ, ಸರ್ಕಾರದ ಇಚ್ಛಾಶಕ್ತಿ ಅನುಸಾರ ಜಿಲ್ಲಾಡಳಿತವು ಮಾಸ್ಟರ್ ಪ್ಲಾನ್ ಮಾಡಿದ್ದು, ರೊಪ್ ವೇ, ಹನುಮ ಪಥ, ಯಾತ್ರಿ ನಿವಾಸ, ರಸ್ತೆಗಳ ಅಗಲೀಕರಣ, ರಾಮಾಯಣ ಥೀಮ್ ಪಾರ್ಕ್ ಸೇರಿದಂತೆ ಹಲವು ಯೋಜನೆಗಳು ಮಾಸ್ಟರ್ ಪ್ಲಾನ್‌ನಲ್ಲಿ ಇವೆ. ಆದರೆ ಸರ್ಕಾರವು ಈಚೆಗಷ್ಟೇ 20 ಕೋಟಿ ಬಿಡುಗಡೆ ಮಾಡಿ, ಕಳೆದ ಬಜೆಟ್‌ನಲ್ಲಿ 100 ಕೋಟಿ ಘೋಷಿಸಿದೆ.
ಇತಿಹಾಸಕ್ಕೆ ಧಕ್ಕೆಯಾಗದಿರಲಿ: ಅಭಿವೃದ್ಧಿ ವಿಚಾರದಲ್ಲಿ ಕೈಗೊಳ್ಳುವ ಕಾಮಗಾರಿಯಿಂದ ಬೆಟ್ಟಕ್ಕೆ ಹಾಗೂ ಬೆಟ್ಟದ ಸುತ್ತಲಿನ ಸಣ್ಣಪುಟ್ಟ ದೇವಸ್ಥಾನ, ಸ್ಮಾರಕ ಗಳಿಗೆ ಧಕ್ಕೆಯಾಗದಿರಲಿ. ದೂರದೃಷ್ಟಿಯ ಯೋಜನೆ ಹಾಕಿಕೊಂಡು ಅಂತಾರಾಷ್ಟ್ರೀಯ ಮಟ್ಟದಂತೆ ಹೈಟೆಕ್ ಟಚ್ ಕೊಟ್ಟು ಅಭಿವೃದ್ಧಿ ಮಾಡಬೇಕಿದೆ.
ಅಂಜನಾದ್ರಿ ಅಭಿವೃದ್ಧಿಗೆ ಜಿಲ್ಲಾಡಳಿತ ರೂಪಿಸಿರುವ ಮಾಸ್ಟರ್ ಪ್ಲಾನ್‌ನಲ್ಲಿನ ಎಲ್ಲ ಯೋಜನೆಗಳು ವೇಗವಾಗಿ ಆರಂಭವಾಗಲಿ. ಪ್ರಸ್ತುತ ಅಗತ್ಯವಾಗಿ ಶೌಚಾಲಯ, ಕುಡಿಯುವ ನೀರು, ಯಾತ್ರಿ ನಿವಾಸ, ದಾಸೋಹ ಭವನ ನಿರ್ಮಿಸಲಿ. ರೊಪ್ ವೇ ನಿರ್ಮಿಸಲಿ. ಸರ್ಕಾರ ಅಂಜನಾದ್ರಿ ಅಭಿವೃದ್ಧಿಗೆ ವಿಶೇಷವಾಗಿ 1000 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿದರೆ ಅಭಿವೃದ್ಧಿಗೂ ಅನುಕೂಲವಾಗಲಿದೆ. –
ಡಾ| ಮಹಾಂತೇಶ ಮಲ್ಲನಗೌಡರ್, ಹಿರಿಯ ಸಾಹಿತಿ
-ದತ್ತು ಕಮ್ಮಾರ