Advertisement

9 ಸಾವಿರ ರಸ್ತೆಗಳಿಗೆ ಅಭಿವೃದ್ಧಿ ಭಾಗ್ಯ

04:23 PM Dec 07, 2022 | Team Udayavani |

ಬೆಂಗಳೂರು: ನಗರದಲ್ಲಿ ಪದೇ ಪದೆ ಸೃಷ್ಟಿಯಾಗುತ್ತಿರುವ ರಸ್ತೆ ಗುಂಡಿಗಳಿಂದಾಗಿ ವಾಹನ ಸವಾರರು ಸಮಸ್ಯೆ ಅನುಭವಿಸುವಂತಾಗಿದೆ. ಈ ಎಲ್ಲದಕ್ಕೂ ಪರಿಹಾರ ನೀಡುವ ಸಲುವಾಗಿ ಅಮೃತ ನಗರೋತ್ಥಾನ ಅನುದಾನದ ಅಡಿಯಲ್ಲಿ 9 ಸಾವಿರಕ್ಕೂ ಹೆಚ್ಚಿನ ರಸ್ತೆಗಳ ಅಭಿವೃದ್ಧಿಗೆ ಬಿಬಿಎಂಪಿ ಯೋಜನೆ ರೂಪಿಸುತ್ತಿದೆ.

Advertisement

ಪ್ರಸಕ್ತ ಸಾಲಿನ ಅಮೃತ ನಗರೋತ್ಥಾನ ಅನುದಾನದ ಅಡಿಯಲ್ಲಿ ಬಿಬಿಎಂಪಿಗೆ 6 ಸಾವಿರ ಕೋಟಿ ರೂ. ಅನುದಾನ ನೀಡಲಾಗುತ್ತಿದೆ. ಅದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈಗಾಗಲೇ ಅನುಮೋದನೆಯನ್ನೂ ನೀಡಿದೆ. ಅದರಲ್ಲಿ 700ಕೋಟಿ ರೂ. ಮೊತ್ತದಲ್ಲಿ ರಸ್ತೆಗಳ ಅಭಿವೃದ್ಧಿಗೆ ಅನುದಾನ ಮೀಸಲಿರಿಸಲು ಕ್ರಿಯಾ ಯೋಜನೆ ರೂಪಿಸಲಾಗಿದೆ. ಅದರ ಜತೆಗೆ 135 ಕೋಟಿ ರೂ.ಗಳನ್ನು ಟೆಂಡರ್‌ ಶ್ಯೂರ್‌ ಮಾದರಿಯಲ್ಲಿ ರಸ್ತೆಗಳಅಭಿವೃದ್ಧಿಗೆ ನಿಗದಿ ಮಾಡಲಾಗಿದೆ. ಹೀಗೆ ರಸ್ತೆಮೂಲಸೌಕರ್ಯ ಅಡಿಯಲ್ಲಿ ನಿಗದಿ ಮಾಡಿರುವ700 ಕೋಟಿ ರೂ. ಮೊತ್ತದ ಅನುದಾನದಲ್ಲಿ9,569 ರಸ್ತೆಗಳ ಅಭಿವೃದ್ಧಿಗೆ ಬಿಬಿಎಂಪಿ ಚರ್ಚೆ ನಡೆಸಿದೆ.

ಬಿಬಿಎಂಪಿಯ ರಸ್ತೆ ಮೂಲಸೌಕರ್ಯ ವಿಭಾಗದಿಂದ ರೂಪಿಸಲಾಗುತ್ತಿರುವ ಯೋಜನೆಯಂತೆ ನಗರದ ರಸ್ತೆಗಳನ್ನು 2 ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಅದರ ಪ್ರಕಾರ ರಸ್ತೆ ಗುಂಡಿಗಳುಸೃಷ್ಟಿಯಾಗುವುದು, ಪದೇ ಪದೆ ರಸ್ತೆ ಅಗೆದು ಹಾಳು ಮಾಡುವುದನ್ನು ತಪ್ಪಿಸಲು ವೈಟ್‌ಟಾಪಿಂಗ್‌ ಮಾದರಿಯಲ್ಲಿ ರಸ್ತೆಗಳನ್ನು ನಿರ್ಮಿಸಲಾಗುತ್ತದೆ. ಇದರಲ್ಲಿ ಮುಖ್ಯ ಮತ್ತು ಉಪಮುಖ್ಯ ರಸ್ತೆಗಳೇ ಹೆಚ್ಚಾಗಿವೆ. ಅದರ ಜತೆಗೆವಾರ್ಡ್‌ ರಸ್ತೆಗಳು ಸೇರಿ ಕೆಲ ಮುಖ್ಯ, ಉಪಮುಖ್ಯ ರಸ್ತೆಗಳನ್ನು ಬಿಟುಮಿನ್‌ ಮಿಕ್ಸ ಬಳಸಿ ಅಭಿವೃದ್ಧಿ ಮಾಡಲು ನಿರ್ಧರಿಸಲಾಗಿದೆ.

2,177 ಕಿ.ಮೀ. ಉದ್ದದ ರಸ್ತೆಗಳು: ಸದ್ಯ ಬಿಬಿ ಎಂಪಿಯ ರಸ್ತೆ ಮೂಲಸೌಕರ್ಯ ವಿಭಾಗ ಸಿದ್ಧಪಡಿಸಿರುವ ಪಟ್ಟಿಯಂತೆ 371 ಕಿ.ಮೀ. ಉದ್ದದ 2,564 ರಸ್ತೆಗಳನ್ನು ವೈಟ್‌ಟಾಪಿಂಗ್‌ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಉಳಿದಂತೆ 1806.39 ಕಿ.ಮೀ. ಉದ್ದದ 7,005 ರಸ್ತೆಗಳನ್ನು ಮರುಡಾಂಬಾರೀಕರಣ ಮಾಡುವ ಮೂಲಕ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಒಟ್ಟಾರೆ 2,177.39 ಕಿ.ಮೀ. ಉದ್ದದ 9,569 ರಸ್ತೆಗಳನ್ನು ಅಭಿವೃದ್ಧಿಪಡಿಸಲು ಪಟ್ಟಿ ಮಾಡಿಕೊಳ್ಳಲಾಗಿದೆ.

ದಾಸರಹಳ್ಳಿಯ ರಸ್ತೆಗಳ ಪರಿಗಣನೆಯಿಲ್ಲ: ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ವಲಯವಾರು ಪಟ್ಟಿಯಲ್ಲಿ ದಾಸರಹಳ್ಳಿ ವಲಯ ವ್ಯಾಪ್ತಿಯ ಯಾವುದೇ ರಸ್ತೆಯನ್ನು ಪರಿಗಣಿಸಿಲ್ಲ. ಆದರೆ, ರಸ್ತೆ ಮೂಲಸೌಕರ್ಯ ವಿಭಾಗದ ಅಡಿಯಲ್ಲಿ ದಾಸರಹಳ್ಳಿಯ 47.34 ಕಿ.ಮೀ. ಉದ್ದದ 11 ರಸ್ತೆಗಳನ್ನು ಮರುಡಾಂಬರೀಕರಣ ಮಾಡಿ ಅಭಿವೃದ್ಧಿ ಮಾಡಲು ನಿರ್ಧರಿಸಲಾಗಿದೆ. ಉಳಿದಂತೆ ಪಶ್ಚಿಮವಲಯ ವ್ಯಾಪ್ತಿಯಲ್ಲಿ ಅತಿ ಹೆಚ್ಚು 359.75 ಕಿ.ಮೀ. ಉದ್ದದ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಅದೇ ರೀತಿ ರಸ್ತೆ ಮೂಲಸೌಕರ್ಯ ವಿಭಾಗದ ಅಡಿಯಲ್ಲಿಯೇ 8 ವಲಯಗಳ 477.19 ಕಿ. ಮೀ. ಉದ್ದದ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುತ್ತಿದ್ದು, ಅದರಲ್ಲಿ 1.15 ಕಿ.ಮೀ. ಉದ್ದದ ರಸ್ತೆ ಮಾತ್ರವೈಟ್‌ಟಾಪಿಂಗ್‌ ರಸ್ತೆಯಾಗಿ ಅಭಿವೃದ್ಧಿಗೊಳ್ಳಲಿದೆ.

Advertisement

ಟೆಂಡರ್‌ಶ್ಯೂರ್‌ಗೆ 135 ಕೋಟಿ ರೂ. :

ವೈಟ್‌ಟಾಪಿಂಗ್‌ ಮತ್ತು ಡಾಂಬಾರು ರಸ್ತೆಗಳ ಅಭಿವೃದ್ಧಿ ಜತೆಗೆ ಟೆಂಡರ್‌ಶ್ಯೂರ್‌ ಮಾದರಿಯಲ್ಲಿ ರಸ್ತೆ ಅಭಿವೃದ್ಧಿಗೆ ಬಿಬಿಎಂಪಿ 135.70ಕೋಟಿ ರೂ. ವ್ಯಯಿಸುತ್ತಿದೆ. ಅದರಲ್ಲಿ 85ಕೋಟಿ ರೂ. ವೆಚ್ಚದಲ್ಲಿ 5 ರಸ್ತೆಗಳನ್ನು ಟೆಂಡರ್‌ಶ್ಯೂರ್‌ ಅಡಿಯಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಉಳಿದ 50.70 ಕೋಟಿ ರೂ.ಗಳಲ್ಲಿಜಂಕ್ಷನ್‌ಗಳನ್ನು ಟೆಂಡರ್‌ಶ್ಯೂರ್‌ನಿಯಮಾವಳಿಯಂತೆ ಅಭಿವೃದ್ಧಿ ಮತ್ತು ಸುಂದರೀಕರಣ ಮಾಡಲು ನಿರ್ಧರಿಸಲಾಗಿದೆ.

 

-ಗಿರೀಶ್‌ ಗರಗ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next